ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರಿಗಾಗಿ ಸೋಂಕು ನಿವಾರಕ ಚೇಂಬರ್

ನಗರದ ಸಂಶೋಧಕರಿಂದ ಅಭಿವೃದ್ಧಿ l 3 ಸೆಕೆಂಡ್‌ಗಳಲ್ಲಿ ಪಿಪಿಇ ಕಿಟ್ ಮೇಲಿನ ಸೋಂಕು ನಾಶ
Last Updated 12 ಜೂನ್ 2020, 21:18 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್–19 ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗೂ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ. ಅಂತಹವರಿಗಾಗಿಯೇ ಕೇವಲ ಮೂರು ಸೆಕೆಂಡ್‌ಗಳಲ್ಲಿ ಕೊರೊನಾ ಸೋಂಕನ್ನು ನಾಶ ಮಾಡುವ ‘ನೇರಳಾತೀತ ಸೋಂಕು ನಿವಾರಕ ಚೇಂಬರ್‌’ ಅನ್ನು ನಗರದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಈಗಾಗಲೇ ಸೋಂಕಿತರ ಸಂಪರ್ಕದಿಂದ ವಿವಿಧ ಆಸ್ಪತ್ರೆಗಳ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ವೈಯಕ್ತಿಕ ಸುರಕ್ಷಾ ಸಾಧನಗಳನ್ನು (ಪಿಪಿಇ ಕಿಟ್‌) ಧರಿಸಿದ್ದರೂ ಅದನ್ನು ತೆಗೆಯುವಾಗ ಹಾಗೂ ಇತರ ಸಂದರ್ಭಗಳಲ್ಲಿ ಅರಿವಿಲ್ಲದೆಯೇ ವೈರಾಣು ದೇಹವನ್ನು ಪ್ರವೇಶಿಸುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರೂ ಆತಂಕದಲ್ಲಿಯೇ ಸೇವೆ ಸಲ್ಲಿಸಬೇಕಾದ ಪರಿಸ್ಥಿತಿಯಿದೆ.

ಈ ಆತಂಕ ನಿವಾರಿಸುವ ನಿಟ್ಟಿನಲ್ಲಿ ಗಣಪುರಮ್ ವೇಣು ಹಾಗೂ ಡಾ. ಕುಲದೀಪ್ ಕಾಕ್ರನ್ ನೇತೃತ್ವದ ಸಂಶೋಧಕರ ತಂಡವು ವಿವಿಧ ಕೈಗಾರಿಕೆಗಳ ಸಹಯೋಗದಲ್ಲಿ ‘ಜೀವಮ್ ನೇರಳಾತೀತ ಸೋಂಕು ನಿವಾರಕ ಚೇಂಬರ್’ ಅನ್ನು ಅಭಿವೃದ್ಧಿಪಡಿಸಿದೆ.

ಐಸೋಲೇಶನ್‌ ವಾರ್ಡ್‌ಗಳಿಂದ ಹೊರಬಂದ ಬಳಿಕ ವೈದ್ಯರು ಅಥವಾ ಆರೋಗ್ಯ ಸಿಬ್ಬಂದಿ ಪಿಪಿಇ ಕಿಟ್‌ನೊಂದಿಗೆ ಆಯತಾಕಾರದ ಸೋಂಕು ನಿವಾರಕ ಕೊಠಡಿಗೆ ತೆರಳಿ, ಬಾಗಿಲು ಹಾಕಿಕೊಂಡರೆ ಸಾಕು. ನೇರಳಾತೀತ ಬೆಳಕು ದೇಹದ ಮೇಲೆ ಬೀಳಲಿದೆ. ಅದರ ಕಿರಣಗಳಿಂದ ಸೋಂಕು ನಾಶವಾಗಲಿದೆ. ಚೇಂಬರ್ ಒಳಗಡೆ ಯು.ವಿ ಲ್ಯಾಂಪ್‌ಗಳನ್ನು ಅಳವಡಿಸಲಾಗಿದ್ದು, ಅವು 360 ಡಿಗ್ರಿ ಕೋನಗಳಲ್ಲಿ ಕಾರ್ಯನಿರ್ವಹಿಸಲಿದೆ. ಈ ಸಾಧನವನ್ನು ಆಸ್ಟರ್ ಸಿಎಂಐ ಆಸ್ಪತ್ರೆಯವರು ಪರಿಶೀಲಿಸಿ, ಬಳಕೆಗೆ ಯೋಗ್ಯವಾಗಿದೆ ಎಂಬ ಪ್ರಮಾಣಪತ್ರವನ್ನು ನೀಡಿದ್ದಾರೆ. ತಂಡದ ಸದಸ್ಯರುಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅನುಮತಿಗಾಗಿ ಎದುರು ನೋಡುತ್ತಿದ್ದಾರೆ.

7 ಅಡಿ ಎತ್ತರ: ‘ಸೋಂಕು ನಿವಾರಕವನ್ನು ದೇಹಕ್ಕೆ ಸಿಂಪಡಿಸಿದಲ್ಲಿ ಅದರ ಪ್ರತಿಕೂಲ ಪರಿಣಾಮದಿಂದ ಉಸಿರಾಟ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಕೊರೊನಾ ಯೋಧರಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಸಂಕಲ್ಪದೊಂದಿಗೆ ಈ ಸಾಧನವನ್ನು ಅಭಿವೃದ್ಧಿಪಡಿಸಿದೆವು. ಪಿಪಿಇ ಕಿಟ್‌ ಸಹಿತ ವ್ಯಕ್ತಿ 7 ಅಡಿ ಎತ್ತರದ ಕೊಠಡಿಯೊಳಗೆ ಪ್ರವೇಶಿಸಬೇಕು. ಯು.ವಿ–ಸಿ ಫಿಲ್ಟರ್ ಕನ್ನಡಕವನ್ನೂ ಧರಿಸಿರಬೇಕು. ಈ ಸಾಧನ ವಿದ್ಯುತ್ ಮೂಲಕ ಕಾರ್ಯನಿರ್ವಹಿಸಲಿದೆ’ ಎಂದು ಗಣಪುರಮ್ ವೇಣು ತಿಳಿಸಿದರು.

₹ 50 ಸಾವಿರದಲ್ಲಿ ಸಾಧನ ಅಭಿವೃದ್ಧಿ
ಕೇವಲ 28 ದಿನಗಳಲ್ಲಿ ಈ ಚೇಂಬರ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ₹ 50 ಸಾವಿರ ವೆಚ್ಚವಾಗಿದೆ.ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಈ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ.ಅಲಾರಾಂ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ವ್ಯಕ್ತಿ ಒಳಗಡೆ ಹೋದೊಡನೆ ನೇರಳಾತೀತ ದೀಪಗಳು ನಿರ್ದಿಷ್ಟ ಪ್ರಮಾಣದಲ್ಲಿ ನಿಗದಿತ ಸಮಯದವರೆಗೆ ಉರಿಯಲಿವೆ. ಬಳಿಕ ವ್ಯಕ್ತಿ ಕೊಠಡಿಯ ಹೊರಗಡೆ ಬರಬೇಕು.

‘ಈಗಾಗಲೇ ನಿಗದಿತ ಪ್ರಮಾಣದ ಯು.ವಿ ವಿಕಿರಣದಿಂದ ಸೋಂಕು ನಾಶವಾಗುತ್ತದೆ ಎಂಬುದು ಸಾಬೀತಾಗಿದೆ. ಹಾಗಾಗಿ ಇದನ್ನೇ ಇಟ್ಟುಕೊಂಡು ಕೊರೊನಾ ಸೋಂಕನ್ನು ನಾಶಮಾಡಲು ತಂತ್ರಜ್ಞಾನ ರೂಪಿಸಿದೆವು. ಸೋಂಕುನಾಶವಾಗಲು ಎಷ್ಟು ಹೊತ್ತು ಹಾಗೂ ಎಷ್ಟು ಪ್ರಮಾಣದಲ್ಲಿ ಯು.ವಿ. ಲ್ಯಾಂಪ್‌ ಮೂಲಕ ವಿಕರಣವನ್ನು ವ್ಯಕ್ತಿಯ ಮೇಲೆ ಹಾಯಿಸಬೇಕಾಗುತ್ತದೆ ಎನ್ನುವುದರ ಮೇಲೆ ಅಧ್ಯಯನವನ್ನು ನಡೆಸಿದ್ದೇವೆ’ ಎಂದರು.

**

ವೈದ್ಯರಿಗೆ ಸುರಕ್ಷತೆ ಒದಗಿಸಲು ನಮ್ಮ ಕೈಲಾದ ಕೆಲಸ ಮಾಡಿದ್ದೇವೆ. ವೈದ್ಯರು ನಿರ್ಭೀತಿಯಿಂದ ಕೆಲಸ ಮಾಡಲು ಈ ಸಾಧನ ನೆರವಾಗಲಿದೆ.
-ಗಣಪುರಮ್ ವೇಣು, ಸೋಂಕು ನಿವಾರಕ ಚೇಂಬರ್ ಅಭಿವೃದ್ಧಿಪಡಿಸಿದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT