ಮಂಗಳವಾರ, ಸೆಪ್ಟೆಂಬರ್ 21, 2021
26 °C
ನ್ಯಾಯಾಲಯದ ದಿಕ್ಕು ತಪ್ಪಿಸಿದ್ದ ಮೂವರಿಗೆ ಜೈಲು ಶಿಕ್ಷೆ | 30 ವರ್ಷಗಳ ಬಳಿಕ ತೀರ್ಪು

ಸಮನ್ಸ್‌ ಬದಲು ಫೋಟೊ ಕಳಿಸಿ ವಿಚ್ಛೇದನ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಪತ್ನಿಯಿಂದ ವಿಚ್ಛೇದನ ಪಡೆಯುವುದಕ್ಕಾಗಿ ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸಿ ನ್ಯಾಯಾಲಯದ ದಿಕ್ಕು ತಪ್ಪಿಸಿದ್ದ ಪತಿ ಸೇರಿ ಮೂವರಿಗೆ, ಕೃತ್ಯ ಎಸಗಿ 30 ವರ್ಷಗಳ ಬಳಿಕ ಶಿಕ್ಷೆ ವಿಧಿಸಿ ನಗರದ 1ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ.

ಮಹೇಂದ್ರಕುಮಾರ್ ಛೋಪ್ರಾ, ಅವರ ತಂದೆ ಕಿಶನ್‌ಚಂದ್ರ ಛೋಪ್ರಾ ಹಾಗೂ ನ್ಯಾಯಾಲಯದ ಬೆರಳಚ್ಚುಗಾರ ಚಂದ್ರಶೇಖರ್ ಎರಡು ವರ್ಷಗಳ ಶಿಕ್ಷೆಗೆ ಗುರಿಯಾದವರು. ಈ ಮೂವರಿಗೂ ತಲಾ ₹ 5 ಸಾವಿರ ದಂಡ ವಿಧಿಸಲಾಗಿದೆ.

ಮೂವರು ಅಪರಾಧಿಗಳು ಸೇರಿಕೊಂಡು 1989ರಲ್ಲಿ ಕೃತ್ಯ ಎಸಗಿದ್ದರು. ಆ ಸಂಬಂಧ 1995ರಲ್ಲಿ ಹೈಕೋರ್ಟ್‌ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ನಂತರ, ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಿಸಲಾಗಿತ್ತು. ವಾದ–‍ ಪ್ರತಿವಾದ ಆಲಿಸಿದ ನ್ಯಾಯಾಧೀಶ ವಿ.ಜಗದೀಶ್ ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ವಿ.ಶ್ರೀರಾಮ್ ವಾದಿಸಿದ್ದರು.

ಏನಿದು ಪ್ರಕರಣ: ‘ಮಹೇಂದ್ರಕುಮಾರ್ ಛೋಪ್ರಾ ಹಾಗೂ ಪತ್ನಿ ನಡುವೆ ವೈಮನಸ್ಸು ಇತ್ತು. ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದ ಮಹೇಂದ್ರಕುಮಾರ್, ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀರಾಮ್ ಹೇಳಿದರು.

‘ಪತ್ನಿ ದೆಹಲಿಯಲ್ಲಿ ವಾಸವಿದ್ದರು. ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ಕಳುಹಿಸಿತ್ತು. ಆದರೆ, ಅಪರಾಧಿಗಳೆಲ್ಲರೂ ಸಂಚು ರೂಪಿಸಿ ಸಮನ್ಸ್‌ ಇರಬೇಕಿದ್ದ ಕವರ್‌ನಲ್ಲಿ ಫೋಟೊ ಇಟ್ಟು ಅಂಚೆ ಮೂಲಕ ಅವರಿಗೆ ಕಳುಹಿಸಿದ್ದರು. ಒಳ್ಳೆಯದಾಗಲಿ ಎಂಬ ಶುಭ ಕೋರುವ ಬರಹ ಫೋಟೊದಲ್ಲಿತ್ತು. ಸಹಿ ಮಾಡಿ ಅಂಚೆ ಪಡೆದಿದ್ದ ಪತ್ನಿ, ಕವರ್‌ ನೋಡಿದಾಗ ಫೋಟೊ ಕಂಡಿತ್ತು. ಸುಮ್ಮನೇ ಕಳುಹಿಸಿರಬಹುದೆಂದು ಅಂದುಕೊಂಡಿದ್ದರು. ಪತಿಯು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಸಂಗತಿ ಅವರಿಗೆ ಗೊತ್ತಿರಲಿಲ್ಲ’

‘ಸಮನ್ಸ್ ನೀಡಿದರೂ ಪತ್ನಿ ವಿಚಾರಣೆಗೆ ಹಾಜರಾಗುತ್ತಿಲ್ಲವೆಂಬ ಕಾರಣಕ್ಕೆ ನ್ಯಾಯಾಲಯವು ಮಹೇಂದ್ರಕುಮಾರ್‌ನ ಅರ್ಜಿಯನ್ನು ಪರಿಗಣಿಸಿ ವಿಚ್ಛೇದನ ಆದೇಶ ಹೊರಡಿಸಿತ್ತು. ಕೆಲ ದಿನಗಳ ನಂತರವೇ ವಿಚ್ಛೇದನ ಆದೇಶದ ಬಗ್ಗೆ ಪತ್ನಿಗೆ ಗೊತ್ತಾಗಿತ್ತು. ಅವಾಗಲೇ ಅವರು ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ನಂತರ, ಪ್ರಕರಣವು ಹೈಕೋರ್ಟ್‌ ಮೆಟ್ಟಿಲೇರಿತ್ತು’ ಎಂದು ಶ್ರೀರಾಮ್ ತಿಳಿಸಿದರು.

‘ಸಮನ್ಸ್‌ ಕವರ್‌ನಲ್ಲಿ ಯಾವುದೋ ಫೋಟೊ ಇಟ್ಟು ಪತ್ನಿಗೆ ಕಳುಹಿಸಿದ್ದು ಹೈಕೋರ್ಟ್‌ ಗಮನಕ್ಕೆ ಬಂದಿತ್ತು. ಪತ್ನಿ ಫೋಟೊ ಸ್ವೀಕರಿಸಿದ್ದನ್ನೇ ಸಮನ್ಸ್ ಸ್ವೀಕರಿಸಿದ್ದಾಳೆಂದು ಹೇಳಿ ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸಿದ್ದ ಅಪರಾಧಿಗಳು ಅದನ್ನೇ ನ್ಯಾಯಾಲಯಕ್ಕೆ ನೀಡಿ ದಿಕ್ಕು ತಪ್ಪಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ ಅವರೇ ತನಿಖಾಧಿಕಾರಿಯನ್ನು ನೇಮಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು’ ಎಂದು ಶ್ರೀರಾಮ್ ವಿವರಿಸಿದರು.

‘ಅಪರಾಧಿ ಚಂದ್ರಶೇಖರ್, ನ್ಯಾಯಾಲಯದಲ್ಲೇ ಬೆರಳಚ್ಚುಗಾರನಾಗಿ ಕೆಲಸ ಮಾಡುತ್ತಿದ್ದ. ಸುಳ್ಳು ಸಾಕ್ಷ್ಯ ಸೃಷ್ಟಿಸುವಲ್ಲಿ ಮಹೇಂದ್ರಕುಮಾರ್ ಛೋಪ್ರಾ ಹಾಗೂ ಕಿಶನ್‌ಚಂದ್ರ ಛೋಪ್ರಾಗೆ ಸಹಾಯ ಮಾಡಿದ್ದ’ ಎಂದು ಅವರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು