ಶುಕ್ರವಾರ, ಮಾರ್ಚ್ 31, 2023
22 °C

ಮಗುವಿನ‌ ಜೊತೆ ವಿದೇಶಕ್ಕೆ ತೆರಳಲು ತಾಯಿಗೆ ಹೈಕೋರ್ಟ್‌ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿಚ್ಛೇದನ ಪಡೆದು ಎಂಟು ವರ್ಷಗಳಾದರೂ ತಂದೆಯು ಮಗುವನ್ನು ಭೇಟಿ ಮಾಡಲು ಮುಂದಾಗಿಲ್ಲ ಮತ್ತು ಕೋರ್ಟ್ ವಿಚಾರಣೆಗೂ ಹಾಜರಾಗಿಲ್ಲ. ಹಾಗಾಗಿ, ನಾನು ನನ್ನ ಮಗನೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಲು ಅವಕಾಶ ಕಲ್ಪಿಸಿ ಕೊಡಬೇಕು’ ಎಂಬ ತಾಯಿಯೊಬ್ಬರ ಮನವಿಯನ್ನು ಹೈಕೋರ್ಟ್ ಮನ್ನಿಸಿದೆ.

‘ವಿಚ್ಛೇದನದ ಬಳಿಕ ಎರಡನೇ ವಿವಾಹವಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ನಾನೂ ಮತ್ತು ನನ್ನ ಮಗುವಿಗೆ ಅಲ್ಲಿಯೇ ನೆಲೆಸಲು ಶಾಶ್ವತ ವೀಸಾ ಪಡೆಯಲು ಅನುಮತಿಸಿ’ ಎಂದು ಕೋರಿ ತಾಯಿಯ ಪರವಾಗಿ ಅವರ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಮದ್ದೂರಿನ ಸಿವಿಲ್ ನ್ಯಾಯಾಲಯ ವಜಾಗೊಳಿಸಿತ್ತು.

ಈ ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ತಾಯಿಯ ಮನವಿಯನ್ನು ಪುರಸ್ಕರಿಸಿದೆ.

‘ವಿಚ್ಛೇದನದ ಬಳಿಕ ಎಂಟು ವರ್ಷ ಕಳೆದರೂ ತಂದೆ ಮಗುವನ್ನು ನೋಡಲು ಬಂದಿಲ್ಲ. ಮಗುವಿಗೆ ಆಸ್ಟ್ರೇಲಿಯಾ ವಿಸಾ ಪಡೆಯುವ ಸಂಬಂಧ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೂ ಹಾಜರಾಗಿಲ್ಲ. ಈ ಅಂಶವನ್ನು ಗಮನಿಸಿದರೆ, ಪತಿ ಮುಂದಿನ ದಿನಗಳಲ್ಲಿ ಮಗುವನ್ನು ನೋಡುವ ಆಸಕ್ತಿ ಕಳೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ, ಇಬ್ಬರ ಮಧ್ಯೆ ಮತ್ತಷ್ಟು ದಾವೆಗಳು ದಾಖಲಾಗುವುದನ್ನು ತಪ್ಪಿಸಲು ಈ ಅರ್ಜಿಯನ್ನು ಪುರಸ್ಕರಿಸಲಾಗುತ್ತಿದೆ’ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣವೇನು?: ದಂಪತಿ 2006ರಲ್ಲಿ ವಿವಾಹವಾಗಿದ್ದರು. ಇವರಿಗೆ ಪುತ್ರನಿದ್ದಾನೆ. ವಿಚ್ಛೇದನ ಕೋರಿದ ಅರ್ಜಿ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ; ಪುತ್ರ ತಾಯಿಯ ಆರೈಕೆಯಲ್ಲಿರಲು ಅವಕಾಶ ನೀಡಿತ್ತು. ಮಗುವನ್ನು ತಿಂಗಳಿಗೆ ಒಮ್ಮೆ ಭೇಟಿ ಮಾಡಲು ತಂದೆಗೆ ಅವಕಾಶ ನೀಡಿ ವಿಚ್ಛೇದನ ಮಂಜೂರು ಮಾಡಿತ್ತು.

ಆದರೆ, ವಿಚ್ಛೇದನದ ಬಳಿಕ ಪತಿ ಒಮ್ಮೆಯೂ ಮಗನನ್ನು ಭೇಟಿ‌ ಮಾಡಿರಲಿಲ್ಲ. ಪತ್ನಿ ಸದ್ಯ ಪ್ರವಾಸಿ ವಿಸಾ ಪಡೆದು ಮಗುವಿನೊಂದಿಗೆ ತಮ್ಮ ಎರಡನೇ ಪತಿಯ ಜತೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು