ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ: ಖಾಸಗಿ ಬಸ್‌ ದರ ದುಪ್ಪಟ್ಟು

ಕೆಎಸ್‌ಆರ್‌ಟಿಸಿ 2000 ವಿಶೇಷ ಬಸ್‌ ರಸ್ತೆಗಿಳಿಸುತ್ತಿದ್ದರೂ ಸಾಕಾಗದ ಸೀಟು
Published 9 ನವೆಂಬರ್ 2023, 11:47 IST
Last Updated 9 ನವೆಂಬರ್ 2023, 11:47 IST
ಅಕ್ಷರ ಗಾತ್ರ

ಬೆಂಗಳೂರು: ದೀಪಾವಳಿ ಹಬ್ಬದ ಜೊತೆಗೆ, ವಾರಾಂತ್ಯದ ರಜಾ ದಿನಗಳು ಒಟ್ಟೊಟ್ಟಿಗೆ ಬಂದಿರುವುದರಿಂದ ಈ ಅವಧಿಯಲ್ಲಿ ಊರಿಗೆ, ಪ್ರವಾಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಖಾಸಗಿ ಬಸ್‌ಗಳು ಟಿಕೆಟ್‌ ದರವನ್ನು ಏರಿಸಿವೆ.

ಶನಿವಾರದಿಂದ ಮಂಗಳವಾರದವರೆಗೆ ಸಾಲು ಸಾಲು ರಜೆಗಳಿದ್ದು, ಇದನ್ನು ಗಮನಿಸಿಯೇ ಕೆಲವು ಖಾಸಗಿ ಬಸ್‌ಗಳು ಶುಕ್ರವಾರ, ಶನಿವಾರ, ಭಾನುವಾರದ ಟಿಕೆಟ್‌ ದರವನ್ನು ಎರಡುಪಟ್ಟು ಹೆಚ್ಚಿಸಿದ್ದರೆ, ಇನ್ನೂ ಕೆಲವು ಬಸ್‌ಗಳು ಮೂರು ಪಟ್ಟು ಟಿಕೆಟ್‌ ದರ ಏರಿಸಿವೆ.

ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಖಾಸಗಿ ಬಸ್‌ಗಳಲ್ಲಿ ₹ 700 ರಿಂದ ₹ 1,000‌ವರೆಗೆ ಇದ್ದ ದರಗಳು ಈಗ ₹1,500ರಿಂದ ₹ 3,000 ವರೆಗೆ ಏರಿಕೆಯಾಗಿದೆ. ಮಂಗಳೂರಿಗೆ ₹ 700ರಿಂದ ₹ 950ರವರೆಗೆ ಇದ್ದಿದ್ದು ₹1400–₹ 2000ಕ್ಕೆ ಏರಿದೆ.

ಶಿರಸಿಗೆ ₹ 700–₹ 900 ಇದ್ದಿದ್ದು ₹ 1850–₹ 2,500ರವರೆಗೆ ಹೆಚ್ಚಳವಾಗಿದೆ. ಇದೇ ರೀತಿ ರಾಜ್ಯದ ವಿವಿಧ ನಗರಗಳಿಗೆ ತೆರಳುವವರಿಗೆ ಬಸ್‌ ದರ ಬರೆ ಎಳೆದಿದೆ.

ಕೆಎಸ್‌ಆರ್‌ಟಿಸಿ ಭರ್ತಿ: ದೀಪಾವಳಿ ಪ್ರಯುಕ್ತ ಕೆಎಸ್‌ಆರ್‌ಟಿಸಿ 2000 ವಿಶೇಷ ಬಸ್‌ಗಳನ್ನು ನ.10ರಿಂದ ರಸ್ತೆಗೆ ಇಳಿಸುತ್ತಿದೆ. ಮುಂಗಡ ಕಾಯ್ದಿರಿಸಲು ಅವಕಾಶ ನೀಡಲಾಗಿದ್ದು, ಎಲ್ಲ ಬಸ್‌ಗಳ ಸೀಟುಗಳು ಭರ್ತಿಯಾಗಿವೆ. ತಡೆ ರಹಿತ ಸಾರಿಗೆ ಬಸ್‌ಗಳಲ್ಲಿ ಮಾತ್ರ ಸೀಟುಗಳು ಲಭ್ಯವಿವೆ.

ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್,  ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ, ಹೊರರಾಜ್ಯಗಳ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚ್ಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ತಿರುಪತಿ, ವಿಜಯವಾಡ ಸಹಿತ ವಿವಿಧೆಡೆ ವಿಶೇಷ ಬಸ್‌ಗಳು ಸಂಚರಿಸಲಿವೆ.

ಕೆಎಸ್‌ಆರ್‌ಟಿಸಿ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಬಸ್‌ಗಳನ್ನು ರಸ್ತೆಗೆ ಇಳಿಸಿರುವುದರಿಂದ ಸಾವಿರಾರು ಪ್ರಯಾಣಿಕರು ಖಾಸಗಿ ಬಸ್‌ಗಳ ದುಬಾರಿ ದರದ ಹೊಡೆತದಿಂದ ಪಾರಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT