ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಕೆ.ಜಿ.ಹಳ್ಳಿ ಗಲಭೆ: ಆರೋಪಿ ಸೈಯದ್‌ ಅಬ್ಬಾಸ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಸೈಯದ್‌ ಅಬ್ಬಾಸ್‌ನನ್ನು (38) ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.‌

ಗೋವಿಂದಪುರ ನಿವಾಸಿಯಾಗಿರುವ ಅಬ್ಬಾಸ್‌, ಆಗಸ್ಟ್‌ 11ರಂದು ಕೆ.ಜಿ.ಹಳ್ಳಿಯಲ್ಲಿ ನಡೆದಿದ್ದ ಗಲಭೆಯಲ್ಲಿ ಭಾಗಿಯಾಗಿದ್ದ. ಇದಾದ ನಂತರ ಅಬ್ಬಾಸ್ ತಲೆಮರೆಸಿಕೊಂಡಿದ್ದ.

ತನಿಖೆ ಕೈಗೆತ್ತಿಕೊಂಡಿದ್ದ ಎನ್‌ಐಎ, ಅಬ್ಬಾಸ್‌ನ ಬಗ್ಗೆ ಮಾಹಿತಿ ಕಲೆ ಹಾಕಿತ್ತು. ಅಬ್ಬಾಸ್‌ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ನಾಗವಾರ ಘಟಕದ ಅಧ್ಯಕ್ಷ ಹಾಗೂ ಈಗಾಗಲೇ ಪ್ರಕರಣದಲ್ಲಿ ಚಾರ್ಜ್‌ಶೀಟ್‌ನಲ್ಲಿರುವ ಆರೋಪಿಗಳೂ ಎಸ್‌ಡಿಪಿಐ ಘಟಕದ ಪದಾಧಿಕಾರಿಗಳು’ ಎಂದು ತನಿಖೆ ವೇಳೆ ತಿಳಿದುಬಂದಿದೆ. ಇವರೆಲ್ಲರೂ ಗಲಭೆ ವೇಳೆ ಕೆ.ಜಿ.ಹಳ್ಳಿ ಠಾಣೆಯ ಬಳಿ ಇದ್ದ ವಾಹನಗಳಿಗೆ ಬೆಂಕಿ ಇಟ್ಟಿದ್ದರು. ಪೊಲೀಸರ ಮೇಲೆ ದಾಳಿ ನಡೆಸಿದ್ದರು.

‘ಆರೋಪಿ ಅಬ್ಬಾಸ್‌ನನ್ನು ಬೆಂಗಳೂರಿನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಿ, ಆರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ’ ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ಯಾಂಕ್ ವಿವರ ನೀಡಿ ₹12 ಲಕ್ಷ ಕಳೆದುಕೊಂಡ ವೃದ್ಧೆ
ಬ್ಯಾಂಕ್‌ ಖಾತೆಗೆ ಕೆವೈಸಿ (ಗ್ರಾಹಕರ ಮಾಹಿತಿ) ಅಪ್‌ಡೇಟ್‌ ಮಾಡುವುದಾಗಿ ತಿಳಿಸಿದ ಸೈಬರ್ ವಂಚಕರು, ವೃದ್ಧೆಯೊಬ್ಬರಿಂದ ಬ್ಯಾಂಕ್ ವಿವರಗಳನ್ನು ಪಡೆದು, ₹12.89 ಲಕ್ಷ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.

ಜೆ.ಪಿ.ನಗರದಲ್ಲಿ ವಾಸವಿದ್ದ 69 ವರ್ಷದ ವೃದ್ಧೆಯೊಬ್ಬರ ಮೊಬೈಲ್‌ಗೆ ‘ತುರ್ತಾಗಿ ಕೆವೈಸಿ ಸಂಖ್ಯೆ ಅಪ್‌ಡೇಟ್ ಮಾಡಬೇಕು’ ಎಂಬ ಸಂದೇಶ ಜೂ.22ರಂದು ಬಂದಿತ್ತು. ಇದರಿಂದ ಗಾಬರಿಗೊಂಡ ವೃದ್ಧೆ, ಸಂದೇಶದಲ್ಲಿದ್ದ ಸಂಖ್ಯೆಗೆ ಕರೆ ಮಾಡಿದ್ದರು.

ಕರೆ ಸ್ವೀಕರಿಸಿದ್ದ ವ್ಯಕ್ತಿ ತಾನು ಬ್ಯಾಂಕ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಕೆವೈಸಿ ಸಂಖ್ಯೆ ಅಪ್‌ಡೇಟ್‌ ಮಾಡದಿದ್ದರೆ, ನಿಮ್ಮ ಬ್ಯಾಂಕ್‌ ಖಾತೆ ಬ್ಲಾಕ್‌ ಆಗಲಿದೆ. ನಿಮ್ಮ ವಿವರಗಳನ್ನು ಹೇಳಿದರೆ, ಅದನ್ನು ತಡೆಯುವುದಾಗಿ ತಿಳಿಸಿದ್ದ.

ಇದನ್ನು ನಂಬಿದ್ದ ವೃದ್ಧೆ, ತನ್ನ ಬ್ಯಾಂಕ್‌ ಖಾತೆಯ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದರು. ವೃದ್ಧೆ ನೀಡಿದ್ದ ಮಾಹಿತಿಯಿಂದ ಬ್ಯಾಂಕ್‌ಗೆ ಲಿಂಕ್ ಆಗಿದ್ದ ಮೊಬೈಲ್ ಸಂಖ್ಯೆಯ‌ನ್ನು ಬದಲಿಸಿ, ಅವರ ಖಾತೆಯಿಂದ ₹12.89 ಲಕ್ಷವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದ.

ಈ ಸಂಬಂಧ ವೃದ್ಧೆ ನೀಡಿರುವ ದೂರಿನ ಮೇರೆಗೆ ದಕ್ಷಿಣ ಸೆನ್‌ ಠಾಣೆಯಲ್ಲಿ ವಂಚನೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬೆದರಿಸಿ ಆಟೊ ಸಹಿತ ಪರಾರಿ: ಬಂಧನ
ಪ್ರಯಾಣಿಕರ ಸೋಗಿನಲ್ಲಿ ಆಟೊ ಹತ್ತಿ, ಚಾಲಕನನ್ನು ಬೆದರಿಸಿ ಆಟೊದೊಂದಿಗೆ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಕಲಾಸಿಪಾಳ್ಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಗೋರಿಪಾಳ್ಯದ ತಬ್ರೇಜ್ ಶರೀಫ್ (27), ಜಾಫರ್ ಪಾಷಾ (32) ಹಾಗೂ ತಬ್ರೇಜ್ ಪಾಷಾ (20) ಬಂಧಿತರು.

ಸೋಮವಾರ ರಾತ್ರಿ 8.30ರ ವೇಳೆಗೆ ಜೆ.ಜೆ.ನಗರದ ಬಳಿ ಆಟೊ ಹತ್ತಿದ್ದ ಆರೋಪಿಗಳು, ಕಲಾಸಿಪಾಳ್ಯಕ್ಕೆ ಹೋಗಲು ತಿಳಿಸಿದ್ದರು. ಪ್ರದೀಪ್ ವೃತ್ತದ ಬಳಿ ಬಂದ ಕೂಡಲೇ ಚಾಲಕನಿಗೆ ಚಾಕು ತೋರಿಸಿ ಬೆದರಿಸಿದ್ದರು. ಬಳಿಕ ಚಾಲಕನನ್ನು ಕೆಳಗೆ ಇಳಿಸಿ, ಆಟೊದೊಂದಿಗೆ ಪರಾರಿಯಾಗಿದ್ದರು.

ಈ ಸಂಬಂಧ ಆಟೊ ಚಾಲಕ ಕಲಾಸಿಪಾಳ್ಯ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ ಆಟೊ ರಿಕ್ಷಾ ಹಾಗೂ ಮಾರಕಾಸ್ತ್ರ ಜಪ್ತಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು