ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಮರಳಲು ಪ್ರಸನ್ನಕುಮಾರ್ ಆಸಕ್ತಿ: ಡಿ.ಕೆ ಶಿವಕುಮಾರ್

Last Updated 17 ಆಗಸ್ಟ್ 2020, 6:19 IST
ಅಕ್ಷರ ಗಾತ್ರ

ಬೆಂಗಳೂರು:‘ಪುಲಿಕೇಶಿ ನಗರ ಕ್ಷೇತ್ರದ ಮಾಜಿ ಶಾಸಕ ಬಿ.ಪ್ರಸನ್ನ ಕುಮಾರ್ ಅವರು ಪಕ್ಷಕ್ಕೆ ಮರಳುವ ಬಗ್ಗೆ ಅರ್ಜಿ ಹಾಕಿದ್ದಾರೆ. ಆ ವಿಚಾರ ನಿರ್ಧರಿಸಲು ಪರಿಶೀಲನಾ ಸಮಿತಿ ಇದೆ’ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು,‘ಅಖಂಡ ಶ್ರೀನಿವಾಸ ಮೂರ್ತಿ ಅವರು 82 ಸಾವಿರ ಮತಗಳಿಂದ ಗೆದ್ದಿದ್ದಾರೆ. ಅಭ್ಯರ್ಥಿ ಬದಲಾವಣೆ ಮಾಡುವ ಯಾವ ಉದ್ದೇಶವೂ ನಮ್ಮ ಮುಂದೆ ಇಲ್ಲ. ನಾನು ಶ್ರೀನಿವಾಸ ಮೂರ್ತಿ ಅವರ ಜತೆ ಮಾತನಾಡಿದ್ದು, ಪ್ರಸನ್ನ ಕುಮಾರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಯಾವುದೇ ಅಭ್ಯಂತರ ಇಲ್ಲ ಎಂದು ಅವರು ಹೇಳಿದ್ದಾರೆ. ಪ್ರಸನ್ನಕುಮಾರ್ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಪರಿಶೀಲನಾ ಸಮಿತಿಯು ಎಲ್ಲ ಹಂತಗಳಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ. ಈ ಬೆಳವಣಿಗೆ ಬಿಟ್ಟರೆ, ನಮ್ಮ ಪಕ್ಷದಲ್ಲಿ ಗೊಂದಲ ಇದೆ ಎಂಬುದೆಲ್ಲ ಊಹಾಪೋಹ’ ಎಂದರು.

'ಸಾಮಾಜಿಕ ಜಾಲತಾಣಗಳಲ್ಲಿ ನವೀನ್‌ ಅವಹೇಳನಕಾರಿ ಹೇಳಿಕೆ ಪ್ರಕಟಿಸಿದ್ದರಿಂದ ಗಲಭೆ ನಡೆದಿದೆ. ಗಲಭೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಈ ಪ್ರಕರಣದಲ್ಲಿ ಬಿಜೆಪಿ ಸರ್ಕಾರ ಊಹಾಪೋಹ ಸೃಷ್ಟಿಸಿ ತನ್ನ ವೈಫಲ್ಯ ಮುಚ್ಚಿಕೊಳ್ಳುತ್ತಿದೆ’ ಎಂದು ಅವರು ಹೇಳಿದರು.

ರಾಜೀವ್ ಗಾಂಧಿ ಜ್ಯೋತಿ ಸದ್ಭಾವನಾ ಯಾತ್ರೆ: ‘ರಾಜೀವ್ ಗಾಂಧಿ ಅವರ ಜನ್ಮದಿನವಾದ ಆಗಸ್ಟ್‌ 20ರಂದು ಪ್ರತಿವರ್ಷ ತಮಿಳುನಾಡಿನ ಪೆರಂಬದೂರಿನಿಂದ ಬೆಂಗಳೂರು ದಾರಿಯಾಗಿ ವಿವಿಧ ನಗರಗಳ ಮೂಲಕ ನವದೆಹಲಿವರೆಗೆ ಸದ್ಭಾವನಾ ಜ್ಯೋತಿ ಯಾತ್ರೆ ನಡೆಸುವ ಪದ್ಧತಿಯನ್ನು ಕಾಂಗ್ರೆಸ್ ಆಚರಿಸಿಕೊಂಡು ಬಂದಿದೆ. ಈ ಬಾರಿ ಕೋವಿಡ್ ಇರುವುದರಿಂದ ಸರಳವಾಗಿ ಹೆಚ್ಚಿನ ಜನ ಇಲ್ಲದೆ ಈ ಜ್ಯೋತಿಯನ್ನು ಸ್ವಾಗತಿಸಿ, ದೆಹಲಿಗೆ ಕಳುಹಿಸಿಕೊಡಲಾಗುವುದು. ಈ ಜ್ಯೋತಿ ಮಾರ್ಗದಲ್ಲಿ ರಾಜೀವ್ ಗಾಂಧಿ ಅವರ ಆಚಾರ, ವಿಚಾರವನ್ನು ಸಾರಲಾಗುವುದು’ ಎಂದು ಶಿವಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT