ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಕರ್ಯ ಕಲ್ಪಿಸಲು ಸಂಸದ ಡಿ.ಕೆ.ಸುರೇಶ್‌ಗೆ ನಾಗರಿಕರ ಮನವಿ

Published 26 ಅಕ್ಟೋಬರ್ 2023, 19:46 IST
Last Updated 26 ಅಕ್ಟೋಬರ್ 2023, 19:46 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ‘ರಸ್ತೆಗಳು ಗುಂಡಿ ಬಿದ್ದಿವೆ. ನಡೆದಾಡುವುದು ಕಷ್ಟ. ದ್ವಿಚಕ್ರವಾಹನಗಳಲ್ಲಿ ಬಿದ್ದು ಗಾಯಗೊಂಡವರ ಸಂಖ್ಯೆ ಲೆಕ್ಕಕ್ಕಿಲ್ಲ. ಚರಂಡಿ ವ್ಯವಸ್ಥೆ ಅವ್ಯವಸ್ಥೆಯಾಗಿದೆ. ಮಳೆ ಬಂದಾಗ ಚರಂಡಿ ನೀರು ಮನೆಗಳಿಗೆ ನುಗ್ಗತ್ತವೆ. ಹಲವು ವರ್ಷಗಳಿಂದ ನಮ್ಮ ಬದುಕು ಬಹಳ ಶೋಚನೀಯವಾಗಿದೆ...’

ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಭೈರವೇಶ್ವರ ನಗರ, ಕೆಪ್ಪೆಹಳ್ಳ ಶಾಂತಿಧಾಮ ಸ್ಕೂಲ್‌ ಹಿಂಭಾಗದಲ್ಲಿರುವ ನಿವಾಸಿಗಳು ಸಂಸದ ಡಿ.ಕೆ.ಸುರೇಶ್ ಅವರ ಎದುರು ಒಂದೇ ಉಸಿರಿಗೆ ತಮ್ಮ ಬಡಾವಣೆಯ ಸಮಸ್ಯೆಗಳ ಪಟ್ಟಿಯನ್ನೇ ತೆರೆದಿಟ್ಟರು. ಈ ಭಾಗದ ಕೆಲವು ಬಡಾವಣೆಗಳಿಗೆ ದಿಢೀರ್ ಭೇಟಿ ನೀಡಿದ ಸುರೇಶ್ ಅವರು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಮನವಿ ಸ್ವೀಕರಿಸಿದರು. 

ಮಲ್ಲತ್ತಹಳ್ಳಿಯ ಆರ್‌ಎಚ್‌ಸಿಎಸ್‌ ಬಡಾವಣೆಯ ಅಪಾರ್ಟ್‌ಮೆಂಟ್‌ ನಿವಾಸಿಗಳು, ‘ಈ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ರಸ್ತೆ ಡಾಂಬರ್ ಹಾಕಿಲ್ಲ. ಕೆಲವೊಮ್ಮೆ ಬೀದಿ ದೀಪಗಳೇ ಇರುವುದಿಲ್ಲ. ರಾತ್ರಿ ವೇಳೆ ತಿರುಗಾಡುವುದು ಕಷ್ಟವಾಗುತ್ತದೆ.  ದಯವಿಟ್ಟು ಚರಂಡಿ ವ್ಯವಸ್ಥೆ ಮಾಡಿಸಿ, ರಸ್ತೆಗಳನ್ನು ಸರಿಪಡಿಸಿ’ ಎಂದು ಸಂಸದರಿಗೆ ಮನವಿ ಮಾಡಿದರು. ಈರಣ್ಣನಪಾಳ್ಯದ ಮಹಿಳೆಯರು ಇದಕ್ಕೆ ದನಿಗೂಡಿಸಿದರು.

ಮೈಸೂರು ರಸ್ತೆಗೆ ಹೊಂದಿಕೊಂಡಂತಿರುವ ಅರಣ್ಯ ಇಲಾಖೆ ನೌಕರರ ಬಡಾವಣೆಯ ಸ್ಥಿತಿ ನೋಡಿ ಸಂಸದರು ದಿಗಿಲುಗೊಂಡರು. ’20 ವರ್ಷಗಳ ಹಿಂದೆ ಬಡಾವಣೆ ನಿರ್ಮಾಣವಾದಾಗ (ಬಿಡಿಎ ಅನುಮೋದನೆ) ನಗರಸಭೆಯವರು ರಸ್ತೆ. ಒಳಚರಂಡಿ ಮಾಡಿಸಿರುವುದನ್ನು ಬಿಟ್ಟು ಈವರೆಗೂ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ‘ ಎಂದು ನಿವಾಸಿಗಳು ದೂರಿದರು. ’ಚರಂಡಿಗಳು ಕಿತ್ತುಹೋಗಿವೆ. ಮಳೆಬಂದಾಗ ನೀರಿನ ಮೂಲಕ ಹಾವುಗಳು ಮನೆಗಳಿಗೆ ಹರಿದು ಬರುತ್ತವೆ’ ಎಂದು ಮಹಿಳೆಯರು ದೂರಿದರು.

ಶಾಸಕ ಮುನಿರತ್ನ ಅವರು ಮೂರು ವರ್ಷದ ಹಿಂದೆ ರಸ್ತೆ ಮಾಡಿಸುತ್ತೇನೆ ಎಂದು ಜಲ್ಲಿ ಕಲ್ಲುಗಳನ್ನು ಹಾಕಿಸಿದ್ದರು. ಆ ಜಲ್ಲಿಕಲ್ಲುಗಳನ್ನು ಬೇರೆಡೆ ಗುತ್ತಿಗೆದಾರರು ತೆಗೆದುಕೊಂಡು ಹೋದರು. ಈ ಬಗೆ ನಿವಾಸಿಗಳು ಅವರಲ್ಲಿ ಮನವಿ ಮಾಡಿದಾಗ ’ಹೋಗ್ರಿ ಏನು ಅರ್ಜೆಂಟ್ ಇಲ್ಲ. ಮುಂದೆ ರಸ್ತೆ ಮಾಡಿಸುತ್ತೇನೆ’ ಎಂದು ಹೇಳಿ ಕಳುಹಿಸಿದರು’ ಎಂದರು.

ಅಹವಾಲು ಆಲಿಸಿದ ಸಂಸದ ಡಿ ಕೆ ಸುರೇಶ್ ’ನಿಮ್ಮ ಕಷ್ಟ ಅರ್ಥವಾಗಿದೆ. ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆ ಹರಿಸುತ್ತೇನೆ. ಈ ಭಾಗಕ್ಕೆ ಹೆಚ್ಚಿನ ಅನುದಾನ ನೀಡಲು ಪ್ರಯತ್ನಿಸುತ್ತೇನೆ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಅಭಿವೃದ್ಧಿ ಪರವಾಗಿ ನಿಮ್ಮ ಜೊತೆ ನಿಲ್ಲಲಿದೆ’ ಎಂದು ಭರವಸೆ ನೀಡಿದರು.

ಅರಣ್ಯ ಇಲಾಖೆ ನೌಕರರ ಬಡಾವಣೆ ನಿವಾಸಿಗಳ ರಸ್ತೆಗಳಲ್ಲಿ ಜಲ್ಲಿಕಲ್ಲುಗಳಿರುವ ದೃಶ್ಯ.
ಅರಣ್ಯ ಇಲಾಖೆ ನೌಕರರ ಬಡಾವಣೆ ನಿವಾಸಿಗಳ ರಸ್ತೆಗಳಲ್ಲಿ ಜಲ್ಲಿಕಲ್ಲುಗಳಿರುವ ದೃಶ್ಯ.

ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಜ್ಞಾನಭಾರತಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಎಚ್. ತುಕಾರಾಂ, ಬಿಬಿಎಂಪಿ ಮಾಜಿ ಸದಸ್ಯ ಜಿ. ಮೋಹನ್ ಕುಮಾರ್, ಕೊಟ್ಟಿಗೆಪಾಳ್ಯ ಎನ್ ಶೇಖರ್, ಪುಟ್ಟಮಾರೇಗೌಡ, ಗಂಗಾಧರ್, ರವಿಕುಮಾರ್ ಅವರು ವಿವಿಧ ಬಡಾವಣೆಗಳ ಸಮಸ್ಯೆಗಳ ಬಗ್ಗೆ ಸಂಸದರಿಗೆ ಮನವರಿಕೆ ಮಾಡಿಸಿದರು. ಬಿಬಿಎಂಪಿ ಜಂಟಿ ಆಯುಕ್ತ ಅಜಯ್ ವಿ. ಮುಖ್ಯ ಎಂಜಿನಿಯರ್ ರಾಘವೇಂದ್ರ ಪ್ರಸಾದ್ ಇದ್ದರು.

ಕಿತ್ತು ಹೋಗಿರುವ ಚರಂಡಿ ಕಲ್ಲುಗಳು
ಕಿತ್ತು ಹೋಗಿರುವ ಚರಂಡಿ ಕಲ್ಲುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT