ಬುಧವಾರ, ಅಕ್ಟೋಬರ್ 21, 2020
21 °C

ಸೂಕ್ತ ಚಿಕಿತ್ಸೆ ಸಿಗದೆ ವೈದ್ಯ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿತರಾಗಿದ್ದ ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ವೈದ್ಯ ಡಾ.ವಿ. ಬಸವರಾಜು (40), ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿ ಮೃತಪಟ್ಟಿದ್ದಾರೆ.

ಹತ್ತು ವರ್ಷಗಳಿಂದ ಇಎಸ್‌ಐ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ಬಸವರಾಜು ಅವರಿಗೆ ಎರಡು ವಾರಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಮನೆ ಆರೈಕೆಗೆ ಒಳಪಟ್ಟಿದ್ದ ಅವರು, ಸ್ವಯಂಚಿಕಿತ್ಸೆ ಮಾಡಿಕೊಳ್ಳುತ್ತಿದ್ದರು. ಆದರೆ, ಐದು ದಿನಗಳ ಹಿಂದೆ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗಿ, ತೀವ್ರ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಚಿಕಿತ್ಸೆಗೆ ಅವರನ್ನು ಇಎಸ್‌ಐ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಅಲ್ಲಿ ಆಮ್ಲಜನಕ ಪೂರೈಕೆ ವ್ಯವಸ್ಥೆ ಹೊಂದಿರುವ ಹಾಸಿಗೆ ಲಭ್ಯವಿಲ್ಲದ ಕಾರಣ ಬೇರೆ ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದರು.

ಕುಟುಂಬದ ಸದಸ್ಯರು ಅವರನ್ನು ಸೇಂಟ್‌ ಮಾರ್ಥಾಸ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಯೂ ಹಾಸಿಗೆ ಲಭ್ಯವಿರದ ಕಾರಣ ಸಕ್ರಾ ವರ್ಲ್ಡ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಮೂರು ದಿನಗಳ ನಂತರ ಮತ್ತೆ ಸಮಸ್ಯೆ ಉಲ್ಭಣಗೊಂಡಿತು. ಹಾಗಾಗಿ ಅಲ್ಲಿಂದ ಮಲ್ಲೇಶ್ವರದ ಅಪೋಲೊ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಲಾಯಿತು.

ವೆಂಟಿಲೇಟರ್ ಸಂಪರ್ಕ ನೀಡಿ, ಚಿಕಿತ್ಸೆ ನೀಡಲಾಯಿತು. ಶ್ವಾಸಕೋಶಕ್ಕೆ ವೈರಾಣು ಹಾನಿ ಮಾಡಿದ ಪರಿಣಾಮ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ತುರ್ತು ಸಂದರ್ಭದಲ್ಲಿ ರೋಗಿಯ ಜೀವ ಉಳಿಸಬಲ್ಲ ರೆಮೆಡಿಸಿವಿರ್ ಇಂಜೆಕ್ಷನ್ ಹಾಗೂ ಪ್ಲಾಸ್ಮಾ ಕೂಡ ದೊರೆಯಲಿಲ್ಲ. ಇದರಿಂದಾಗಿ ಮೃತಪಟ್ಟರು ಎಂದು ಅವರ ಸಹೋದ್ಯೋಗಿ ಒಬ್ಬರು ತಿಳಿಸಿದರು.

ಅವರ ಪತ್ನಿ ಇಎಸ್‌ಐ ಆಸ್ಪತ್ರೆಯಲ್ಲಿ ಶುಶ್ರೂಷಕರ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರಿಗೂ ಸೋಂಕು ತಗುಲಿತ್ತು. ಈಗ ಚೇತರಿಸಿಕೊಂಡಿದ್ದಾರೆ. ಅವರಿಗೆ 5 ವರ್ಷದ ಮಗು ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು