ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಕಲ್ಲಸಂದ್ರ ಕೆರೆ: ಭಗೀರಥ ಪ್ರಯತ್ನದಿಂದ ಕೆರೆಯೊಡಲಿಗೆ ಮಳೆ ನೀರು

ದೊಡ್ಡಕಲ್ಲಸಂದ್ರ ಕೆರೆ ಉಳಿಸಲು ಸ್ಥಳೀಯರಿಂದ ಮೂರು ವರ್ಷಗಳ ಸತತ ಹೋರಾಟ
Last Updated 11 ಜುಲೈ 2021, 20:59 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆಗಳು ನಗರದ ಸ್ವತ್ತುಗಳು. ಅವುಗಳನ್ನು ಉಳಿಸಿಕೊಳ್ಳುವ ಹೊಣೆ ಸ್ಥಳೀಯರದು. ಕೊಳಚೆನೀರು ತುಂಬಿ ಅಳವಿನಂಚಿಗೆ ಸಾಗಿದ ಕೆರೆಗಳನ್ನುಸ್ಥಳೀಯರು ಪಣ ತೊಟ್ಟರೆ ಮತ್ತೆ ಸಹಜ ಸ್ಥಿತಿಗೆ ಮರಳಿಸಬಹುದು ಎಂಬುದನ್ನು ದೊಡ್ಡಕಲ್ಲಸಂದ್ರ ಕೆರೆ ಪರಿಸರದ ಜನರು ತೋರಿಸಿಕೊಟ್ಟಿದ್ದಾರೆ. ಈ ಕೆರೆಯನ್ನು ಅಭಿವೃದ್ಧಿಪಡಿಸಿದರಷ್ಟೇ ಸಾಲದು, ಮಳೆ ನೀರು ಮಾತ್ರಅದರೊಡಲು ಸೇರುವಂತಾಗಬೇಕು ಎಂಬ ಅವರ ಹೋರಾಟ ತಕ್ಕಮಟ್ಟಿಗೆ ಫಲ ನೀಡಿದೆ.

ಕೊಳಚೆ ನೀರು ಸೇರಿ ಹದಗೆಟ್ಟಿದ್ದ ದೊಡ್ಡಕಲ್ಲಸಂದ್ರ ಕೆರೆಯು ಸ್ಥಳೀಯರು, ಸ್ವಯಂಸೇವಾ ಸಂಸ್ಥೆಯ ಹೋರಾಟದ ಫಲವಾಗಿ ಮತ್ತೆ ಗತವೈಭವಕ್ಕೆ ಮರಳುವ ಹಾದಿಯಲ್ಲಿದೆ. ಈ ಕೆರೆ ಪುನರುಜ್ಜೀವನಗೊಂಡ ಪರಿಯು ನಗರದ ಇತರ ಜಲಕಾಯಗಳನ್ನು ಉಳಿಸಿಕೊಳ್ಳುವುದಕ್ಕೂ ಪ್ರೇರಣೆಯಾಗುವಂತಿದೆ.

ಸಮೃದ್ಧ ಜೀವ ವೈವಿಧ್ಯವನ್ನು ಹೊಂದಿದ್ದ ನಗರದ ಅಪರೂಪದ ಕೆರೆಗಳಲ್ಲಿ ದೊಡ್ಡಕಲ್ಲಸಂದ್ರ ಕೆರೆಯೂ ಒಂದು. ಒಟ್ಟು 43 ಪ್ರಭೇದಗಳ 354ಕ್ಕೂ ಅಧಿಕ ಮರಗಳು, 42 ಪ್ರಭೇದಗಳ ಪೊದೆ ಜಾತಿಯ ಸಸ್ಯಗಳು, 38 ಪ್ರಭೇದಗಳ ಪಾತರಗಿತ್ತಿಗಳು, 95 ಪ್ರಭೇದಗಳ ಪಕ್ಷಿಗಳು ಈ ಕೆರೆಯ ಪರಿಸರದಲ್ಲಿ ಆಶ್ರಯ ಪಡೆದಿರುವುದು ಆ್ಯಕ್ಷನ್‌ ಏಯ್ಡ್‌ ಸಂಸ್ಥೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿತ್ತು. ಇಂತಿದ್ದ ಕೆರೆಯಲ್ಲಿ ಮೂರು ವರ್ಷಗಳ ಹಿಂದೆ ಏಕಾಏಕಿ ಮೀನುಗಳು ಸಾಯಲಾರಂಭಿಸಿದವು. ಈ ಕೆರೆಯ ಜೈವಿಕ ವ್ಯವಸ್ಥೆಯ ಮಹತ್ವ ಅರಿತಿದ್ದ ಆ್ಯಕ್ಷನ್ ಏಯ್ಡ್‌ ಸಂಸ್ಥೆಯವರು ಇದನ್ನು ಉಳಿಸಿಕೊಳ್ಳುವ ಅಗತ್ಯದ ಬಗ್ಗೆ ಸ್ಥಳೀಯರಿಗೆ ಮನವರಿಕೆ ಮಾಡಿದರು. ಅದರ ಫಲವಾಗಿ ಹುಟ್ಟಿದ್ದೇ ದೊಡ್ಡಕಲ್ಲಸಂದ್ರ ಕೆರೆ ಅಭಿವೃದ್ಧಿ ಸಮಿತಿ.

‘ನಾವು ಇಲ್ಲಿಯೇ ನೆಲೆಸಿದ್ದರೂ ಈ ಕೆರೆಯ ಬಗ್ಗೆ ಮೊದಲು ಅಷ್ಟೊಂದು ಕಾಳಜಿ ವಹಿಸಿದವರಲ್ಲ. ಆದರೆ, ಆ್ಯಕ್ಷನ್‌ ಏಯ್ಡ್‌ ಸಂಸ್ಥೆಯವರ ಪ್ರೇರಣೆಯಿಂದ ಇಲ್ಲಿನ ವಿವಿಧ ಬಡಾವಣೆ ನಿವಾಸಿಗಳ ಸಂಘಗಳು ಸೇರಿಕೊಂಡು ‘ದೊಡ್ಡಕಲ್ಲಸಂದ್ರ ಕೆರೆ ಅಭಿವೃದ್ಧಿ ಸಮಿತಿಯನ್ನು ರಚಿಸಿದೆವು. ಈ ಕೆರೆ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಸ್ಥಳೀಯ ಶಾಸಕ ಕೆ.ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದೆವು. ಆಗಿನ ಪಾಲಿಕೆ ಸದಸ್ಯರೂ ಸಹಕರಿಸಿದರು. ಮೊದಲು ₹ 2 ಕೋಟಿ ಅನುದಾನವನ್ನು ಶಾಸಕರು ಒದಗಿಸಿದರು. ಅದು ಸಾಲದು ಎಂದ ಬಳಿಕ ₹ 5.93 ಕೋಟಿ ಕೊಡಿಸಿದರು’ ಎಂದು ಸಮಿತಿಯ ಅಧ್ಯಕ್ಷ ಕೆ.ವಿ.ಮಂಜುನಾಥ ರೆಡ್ಡಿ ತಿಳಿಸಿದರು.

‘ಕೆರೆ ಪರಿಸರದಲ್ಲಿ ಸ್ಥಳೀಯರು ನೆಟ್ಟು ಬೆಳೆಸಿದ್ದ ಮರಗಳನ್ನೆಲ್ಲ ಕಡಿದು ಕೆರೆಯ ಅಭಿವೃದ್ಧಿಗೆ ಮುಂದಾಗಿದ್ದರು. ಆಗಲೂ ನಾವು ಪ್ರತಿಭಟಿಸಿದೆವು. ಮರಗಿಡಗಳನ್ನು ಉಳಿಸಿಕೊಂಡು, ಈ ಕೆರೆಯ ಜೈವಿಕ ವ್ಯವಸ್ಥೆಗೆ ಧಕ್ಕೆ ಆಗದಂತೆ ಪುನರುಜ್ಜೀವನ ಕಾರ್ಯ ಮುಂದುವರಿಸುವಂತೆ ಒತ್ತಾಯಿಸಿದೆವು. ಈ ಸಲುವಾಗಿ ಅಭಿವೃದ್ಧಿಯ ನೀಲನಕ್ಷೆಯಲ್ಲಿ ಮಾರ್ಪಾಡು ಮಾಡುವಂತೆ ಕೋರಿದ್ದೆವು. ಆರಂಭದಲ್ಲಿ ನಮ್ಮ ಬೇಡಿಕೆಗಳು ಬಿಬಿಎಂಪಿ ಅಧಿಕಾರಿಗಳಿಗೆ ಇರಿಸು ಮುರಿಸು ತಂದಿರಬಹುದು. ಆದರೆ, ನಮ್ಮ ಕಾಳಜಿ ಅವರಿಗೆ ಮನವರಿಕೆ ಆಗತೊಡಗಿದೆ’ ಎಂದು ಅವರು ತಿಳಿಸಿದರು.

‘ಕೆರೆಗೆ ಮತ್ತೆ ಒಳಚರಂಡಿಯ ಕೊಳಚೆ ನೀರು ಸೇರಿದರೆ, ಇದು ಮತ್ತೆ ನಗರ ಉಳಿದ ಜಲಕಾಯಗಳಂತೆಯೇ ಆಗಲಿದೆ. ಮಳೆ ನೀರು ಮಾತ್ರ ಈ ಕೆರೆಯನ್ನು ಸೇರುವಂತಾದರೆ ಮಾತ್ರ ಈ ಕೆರೆ ಮತ್ತೆ ಹಿಂದಿನಂತೆ ಜೀವಕಳೆ ಪಡೆಯಲಿದೆ ಎಂಬ ಬಗ್ಗೆ ನಮ್ಮಲ್ಲಿ ಖಚಿತತೆ ಇತ್ತು. ಹಾಗಾಗಿ ಆಸುಪಾಸಿನಲ್ಲಿ ಕನಿಷ್ಠ ಪಕ್ಷ 500 ಮೀ ವ್ಯಾಪ್ತಿಯಲ್ಲಿ ಬೀಳುವ ಮಳೆ ನೀರು ಈ ಜಲಕಾಯದ ಒಡಲು ಸೇರುವಂತಾಗಬೇಕು ಎಂಬುದು ನಮ್ಮ ಪ್ರಮುಖ ಒತ್ತಾಯವಾಗಿತ್ತು. ಇದನ್ನು ಮನವರಿಕೆ ಮಾಡಿಕೊಟ್ಟ ಬಳಿಕ ಬಿಬಿಎಂ‍ಪಿ ಅಧಿಕಾರಿಗಳು ಆಸುಪಾಸಿನ ರಸ್ತೆಗಳ ಮಳೆನೀರು ಕೆರೆಗೆ ಹರಿದುಬರುವಂತೆ ಮಾಡಲು ನೀಲನಕ್ಷೆ ರೂಪಿಸಿದ್ದಾರೆ’ ಎನ್ನುತ್ತಾರೆ ಆ್ಯಕ್ಷನ್‌ ಏಯ್ಡ್‌ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ರಾಘವೇಂದ್ರ ಬಿ.ಪಚ್ಚಾಪುರ್.

‘ಪುನರುಜ್ಜೀವನಗೊಂಡ ಕೆರೆಗೆ ಮಳೆ ನೀರು ಮಾತ್ರ ಸೇರಬೇಕು ಎಂಬುದು ಸ್ಥಳೀಯರ ಒತ್ತಾಸೆ. ಈ ಕೆರೆಯನ್ನು ನೇರವಾಗಿ ಸಂಪರ್ಕಿಸುವ ರಾಜಕಾಲುವೆ ಇಲ್ಲ. ಹಾಗಾಗಿ ಸಮೀಪದ ಮೂರು ವಿಶಾಲ ರಸ್ತೆಗಳ ಇಕ್ಕೆಲಗಳಲ್ಲಿರುವ ಮಳೆ ನೀರು ಹರಿಯುವ ಚರಂಡಿಗಳ ನೀರನ್ನು ಕೆರೆಗೆ ಹರಿಸಲು ಅವಕಾಶ ಇದೆ. ಅಲ್ಲಿ ಸಂಗ್ರಹವಾಗುವ ಮಳೆ ನೀರು ಕೆರೆಗೆ ಸೇರುವಂತೆ ಮಾಡಲು ಯೋಜನೆ ರೂಪಿಸಿದ್ದೇವೆ. ನೀರು ಕೆರೆಯನ್ನು ಸೇರುವ ಬಳಿ ಹೂಳನ್ನು ಪ್ರತ್ಯೇಕಿಸಲು ತೊಟ್ಟಿ ಕಟ್ಟಲಿದ್ದೇವೆ’ ಎಂದು ಬಿಬಿಎಂಪಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಿವಲಿಂಗಪ್ಪ ಮಾಹಿತಿ ನೀಡಿದರು.

‘ಜೀವವೈವಿಧ್ಯ ವೈಭವ ಮರಳಲಿ’

ಜಲಕಾಯಕ್ಕೆ ಮಳೆ ನೀರು ಹರಿಯುವಂತೆ ಮಾಡುವ ಚರಂಡಿಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ನಿಟ್ಟಿನಲ್ಲೂ ನಾವು ವಾರ್ಡ್‌ ಮಟ್ಟದ ಎಂಜಿನಿಯರ್‌ಗಳ ಜೊತೆ ಸೇರಿ ಕೆಲಸ ಮಾಡುತ್ತೇವೆ. ದೊಡ್ಡ ಕಲ್ಲಸಂದ್ರ ಕೆರೆ ಮತ್ತೆ ಮಳೆನೀರಿನಿಂದ ತುಂಬುವಂತಾಗಬೇಕು. ತನ್ಮೂಲಕ ಈ ಕೆರೆ ಪರಿಸರದಲ್ಲಿ ಮತ್ತೆ ಹಕ್ಕಿಗಳ ಕಲರವ ಮೊಳಗುವಂತಾಗಬೇಕು. ಈ ಕೆರೆ ಜೀವವೈವಿಧ್ಯದ ವೈಭವವನ್ನು ಮರಳಿ ಪಡೆಯಬೇಕು.

– ಸೌಂದರಾಜನ್‌, ಸೌದಾಮಿನಿ ಬಡಾವಣೆ ನಿವಾಸಿ

‘ಕೆರೆ, ರಾಜಕಾಲುವೆ ಒತ್ತುವರಿಯೂ ತೆರವಾಗಲಿ’

‘ಈ ಕೆರೆಯ ಮೂಲ ವಿಸ್ತೀರ್ಣ 21 ಎಕರೆ 16 ಗುಂಟೆ. ಇದಕ್ಕೆ ಮಳೆ ನೀರು ಹೊತ್ತು ತರುವ 25 ಅಡಿ ಅಗಲದ ರಾಜಕಾಲುವೆಯೂ ಇದೆ. ಇದು ಒತ್ತುವರಿಯಾಗಿದೆ. ಈ ಒತ್ತುವರಿ ತೆರವುಗೊಳಿಸಬೇಕಾದರೆ ಭೂಸರ್ವೇಕ್ಷಣಾ ಇಲಾಖೆಯ ಹೆಚ್ಚುವರಿ ನಿರ್ದೇಶಕರ (ಎಡಿಎಲ್‌ಆರ್‌) ಕಚೇರಿಯವರು ಜಾಗದ ಸರ್ವೆ ಕಾರ್ಯ ನಡೆಸಿ ರಾಜಕಾಲುವೆಯ ಗಡಿ ಗುರುತಿನ ನಕ್ಷೆಯನ್ನು ಒದಗಿಸಬೇಕು. ಒಂದೂವರೆ ವರ್ಷಗಳಿಂದ ಎಡಿಎಲ್‌ಆರ್‌ ಕಚೇರಿಗೆ ಅಲೆಯುತ್ತಿದ್ದೇವೆ. ಆದರೂ ಸರ್ವೆ ನಡೆಸಲು ಈ ಕಚೇರಿಯವರು ಆಸಕ್ತಿ ತೋರಿಸುತ್ತಿಲ್ಲ.

– ಕೆ.ವಿ.ಮಂಜುನಾಥ ರೆಡ್ಡಿ, ಅಧ್ಯಕ್ಷ, ದೊಡ್ಡಕಲ್ಲಸಂದ್ರ ಕೆರೆ ಅಭಿವೃದ್ಧಿ ಸಮಿತಿ

‘ಮಳೆ ನೀರ ಹನಿ ಹನಿಯನ್ನೂ ಕೆರೆಗೆ ಹರಿಸಿ’

‘ಕರ್ನಾಟಕದ ಸರೋವರಗಳ ನೀರಿನ ಗುಣಮಟ್ಟ’ ಮತ್ತು ಮಳೆ ನೀರ ಹನಿ ಹನಿಯನ್ನೂ ಕೆರೆಗೆ ಹರಿಸುವ ಕುರಿತ ಅಧ್ಯಯನಗಳನ್ನು ಆಧರಿಸಿ ಕೆರೆ ಅಭಿವೃದ್ಧಿ ಕುರಿತ ನೀತಿಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಆಕ್ಷನ್ ಏಯ್ಡ್‌ ಸಂಸ್ಥೆಯು ಬಿಬಿಎಂಪಿ ಮತ್ತು ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಕೆಟಿಸಿಡಿಎ) ಶಿಫಾರಸು ಮಾಡಿದೆ. ಕೆರೆಗಳಿಗೆ ಮಳೆನೀರು ಹರಿವನ್ನು ಸುಗಮಗೊಳಿಸಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಸಲಹೆ ನೀಡಿದೆ. ಪುನರುಜ್ಜೀವನಗೊಂಡ ಬಳಿಕ ಕೆರೆಗೆ ಮಳೆನೀರನ್ನು ಬಳಸಿಕೊಳ್ಳುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗಳ ನಕ್ಷೆಗಳನ್ನು ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆಗೆ ನೀಡುವ ಸಂದರ್ಭದಲ್ಲೇ ಕಡ್ಡಾಯವಾಗಿ ಹಾಜರುಪಡಿಸುವಂತೆ ಕೆಟಿಸಿಡಿಎಯನ್ನು ಕೋರಿದ್ದೇವೆ.

– ರಾಘವೇಂದ್ರ ಬಿ. ಪಚ್ಚಾಪುರ್, ಕಾರ್ಯಕ್ರಮ ವ್ಯವಸ್ಥಾಪಕ, ಆಕ್ಷನ್ ಏಯ್ಡ್‌ ಸಂಸ್ಥೆ

‘ಮಳೆ ನೀರಿನಿಂದ ಕೆರೆ ತುಂಬಿಸಲು ಆದ್ಯತೆ’

ಕೆರೆಗಳನ್ನು ಅಭಿವೃದ್ಧಿಪಡಿಸಿದ ಬಳಿಕ ಅದಕ್ಕೆ ನೀರು ಹರಿದುಬರುವುದಕ್ಕೆ ವ್ಯವಸ್ಥೆ ಕಲ್ಪಿಸದಿದ್ದರೆ ಮಾಡಿದ ಕೆಲಸ ಎಲ್ಲವೂ ವ್ಯರ್ಥ. ನಗರೋತ್ಥಾನ ಹಾಗೂ ಶುಭ್ರ ಬೆಂಗಳೂರು ಯೋಜನೆಗಳ ಅಡಿ ಬಿಬಿಎಂಪಿಯು ಅನೇಕ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಿದೆ. ಪುನರುಜ್ಜೀವನಗೊಂಡ ಕೆರೆಗಳಿಗೆ ಮಳೆ ನೀರು ಹರಿದುಬರುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಕ್ಕೆ ಆದ್ಯತೆ ನೀಡಿದ್ದೇವೆ. ಕೆರೆಗೆ ಮಳೆನೀರು ನೀರು ತುಂಬಿಸುವುದಕ್ಕೆ ಇರುವ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳುವಂತೆ ಕಾಮಗಾರಿಯ ವಿನ್ಯಾಸ ರೂಪಿಸಲಾಗುತ್ತಿದೆ.

– ಬಿ.ಟಿ.ಮೋಹನ ಕೃಷ್ಣ, ಸೂಪರಿಂಟೆಂಡಿಂಗ್ ಎಂಜಿನಿಯರ್‌, ಕೆರೆ ಅಭಿವೃದ್ಧಿ ವಿಭಾಗ, ಬಿಬಿಎಂ‍ಪಿ

ಅಂಕಿ ಅಂಶ

21-16 ಎಕರೆ – ದೊಡ್ಡಕಲ್ಲಸಂದ್ರ ಕೆರೆ ವಿಸ್ತೀರ್ಣ

₹ 5.93 ಕೋಟಿ – ಕೆರೆ ಪುನರುಜ್ಜೀವನ ಕಾಮಗಾರಿಯ ಅಂದಾಜು ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT