ಬುಧವಾರ, ಏಪ್ರಿಲ್ 8, 2020
19 °C
ನಾಯಿ ಸಾಕಣೆಗೆ ಪರವಾನಗಿ l 2018ರ ಬೈಲಾ ತಿದ್ದುಪಡಿ l 2020ರ ಬೈಲಾ ಕರಡು ಸಿದ್ಧ

ಆಕ್ರಮಣಕಾರಿ ನಾಯಿ ಫ್ಲ್ಯಾಟ್‌ನಲ್ಲಿ ಸಾಕುವಂತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಕುನಾಯಿ ಪರವಾನಗಿ ಉಪವಿಧಿಯನ್ನು (ಬೈಲಾ) ಪರಿಷ್ಕರಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಅದರ ಪ್ರಕಾರ ಫ್ಲ್ಯಾಟ್‌ಗಳಲ್ಲಿ ಡಾಬರ್‌ಮನ್, ಜರ್ಮನ್ ಶೆಫರ್ಡ್, ರಾಟ್‌ವೆಯ್ಲರ್, ಹೌಂಡ್ ಮುಂತಾದ ಆಕ್ರಮಣಕಾರಿ ತಳಿಯ ನಾಯಿಗಳನ್ನು ಸಾಕುವಂತಿಲ್ಲ ಎಂದು ವಿಶೇಷವಾಗಿ ಸೂಚಿಸಲಾಗಿದೆ.

ಫ್ಲ್ಯಾಟ್‌ಗಳು ಹಾಗೂ ಅನೇಕ ಕುಟುಂಬಗಳು ಒಟ್ಟಿಗೆ ನೆಲೆಸಿರುವ ವಸತಿ ಸಮುಚ್ಚಯಗಳಲ್ಲಿ ನೆರೆಹೊರೆಯವರಿಗೆ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ಅಲ್ಲಿ ಜನರೊಂದಿಗೆ ಚೆನ್ನಾಗಿ ಬೆರೆಯುವ ಹಾಗೂ ಆಕ್ರಮಣಕಾರಿಯಲ್ಲದ ನಾಯಿಗಳನ್ನು ಸಾಕುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. 

ನಾಯಿಗಳನ್ನು ಸಾಕುವುದಕ್ಕೂ ಪರವಾನಗಿ ಪಡೆಯುವುದನ್ನು ಕಡ್ಡಾಯ ಮಾಡಲು ಪಾಲಿಕೆ 2012ರಲ್ಲೇ ಬೈಲಾ ರಚಿಸಿತ್ತು. ಅದಕ್ಕೆ 2018ರಲ್ಲಿ ತಿದ್ದುಪಡಿಗಳನ್ನು ಮಾಡಲಾಗಿತ್ತು. 2018ರ ಬೈಲಾ ಪ್ರಕಾರ ನಾಯಿ ಸಾಕಲು ಪರವಾನಗಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿತ್ತು. ಫ್ಲ್ಯಾಟ್‌ಗಳಲ್ಲಿ ಒಂದು ನಾಯಿಯನ್ನು ಮಾತ್ರ ಸಾಕಬಹುದು. ಸ್ವತಂತ್ರ ಮನೆಗಳಲ್ಲಿ ಗರಿಷ್ಠ ಮೂರು ನಾಯಿಗಳನ್ನು ಸಾಕಬಹುದು ಎಂಬ ನಿರ್ಬಂಧ ವಿಧಿಸಲಾಗಿತ್ತು. ಸಾಕುನಾಯಿಗಳಿಗೆ ಮೈಕ್ರೊಚಿಪ್‌ಗಳನ್ನು ಅಳವಡಿಸಬೇಕಿತ್ತು. ಆದರೆ, ಈ ನಿಯಮಗಳನ್ನು ಪಾಲಿಕೆ ಕಟ್ಟುನಿಟ್ಟಾಗಿ ಜಾರಿಗೆ ತಂದಿರಲಿಲ್ಲ. 

ಪಾಲಿಕೆಯ ಪಶುವೈದ್ಯಕೀಯ ವಿಭಾಗದ ಅಧಿಕಾರಿಗಳು ರೂಪಿಸಿರುವ ‘ಸಾಕು ನಾಯಿ ಪರವಾನಗಿ ಬೈಲಾ 2020’ರ ಕರಡು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ನಾಯಿ ಸಾಕುವವರ ಜವಾಬ್ದಾರಿ ಹೆಚ್ಚಿಸುವ ಹಾಗೂ ದತ್ತು ಸ್ವೀಕಾರ ಪ್ರೋತ್ಸಾಹಿಸುವ ಕೆಲವು ಅಂಶಗಳ ಸೇರ್ಪಡೆ ಮಾಡುವ ಮೂಲಕ ಹಳೆ ಬೈಲಾವನ್ನು ಮತ್ತಷ್ಟು ಬಲಪಡಿಸಲಾಗಿದೆ. ಅವುಗಳಿಗೆ ಕಾಲ ಕಾಲಕ್ಕೆ ಲಸಿಕೆ ಹಾಕುವುದು, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಕಡ್ಡಾಯಗೊಳಿಸುವುದು, ನಾಯಿಯಲ್ಲಿ ರೇಬಿಸ್‌ ಲಕ್ಷಣಗಳು ಕಂಡುಬಂದರೆ ದಯಾಮರಣಕ್ಕೆ ಪಶುವೈದ್ಯಾಧಿಕಾರಿಗಳು ಶಿಫಾರಸು ಮಾಡುವ ಅಂಶ ಉಳಿಸಿಕೊಳ್ಳಲಾಗಿದೆ.

ಸ್ವತಂತ್ರ ಮನೆಗಳಲ್ಲಿ 3ಕ್ಕಿಂತ ಹೆಚ್ಚು ನಾಯಿ ಸಾಕುವಂತಿಲ್ಲ ಎಂಬ ನಿಯಮ ಈ ಹಿಂದೆ ಜಾರಿಯಲ್ಲಿತ್ತು.  ಪರಿತ್ಯಕ್ತ ನಾಯಿಗಳು, ರಕ್ಷಿಸಿದ ನಾಯಿಗಳು ಮತ್ತು ಸ್ಥಳೀಯ ದೇಸಿ ನಾಯಿಗಳ ಹಿತದೃಷ್ಟಿಯಿಂದ ಈ ನಿಯಮವನ್ನು ಮಾರ್ಪಾಡು ಮಾಡಲಾಗಿದೆ. ಬಿಬಿಎಂಪಿಯ ಅಧಿಕಾರಿಗಳಿಂದ ಪ್ರಮಾಣೀಕರಿಸಿದ ಬಳಿಕ ಸಾಕು ನಾಯಿಗಳ ಸಂಖ್ಯೆಯ ಮಿತಿಯನ್ನು ಸಡಿಲಗೊಳಿಸಬಹುದು. ಸಾಕು ನಾಯಿಯ ಮಾಲೀಕತ್ವವನ್ನು ವರ್ಗಾಯಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. 

ಪೂರ್ವಾನ್ವಯ ಇಲ್ಲ: ನಾಯಿ ಸಾಕುವುದಕ್ಕೆ ಸಂಬಂಧಿಸಿದ ಕೆಲವು ನಿರ್ಬಂಧಗಳು ಈಗಾಗಲೇ ಪರ
ವಾನಗಿ ಪಡೆದಿರುವ ಸಾಕುನಾಯಿ ಮಾಲೀಕರಿಗೆ ಅನ್ವಯಿಸುವುದಿಲ್ಲ. ಭವಿಷ್ಯದಲ್ಲಿ ಹೊಸದಾಗಿ ಪರವಾನಗಿ ಪಡೆದು ನಾಯಿ ಸಾಕುವವರಿಗೆ ಮಾತ್ರ ಅನ್ವಯವಾಗಲಿವೆ. ಈ ಬೈಲಾ ಕುರಿತು ಅಂತಿಮ ಅಧಿಸೂಚನೆ ಪ್ರಕಟವಾದ ದಿನದಿಂದ ಆರು ತಿಂಗಳ ನಂತರ ಜಾರಿಗೆ ಬರಲಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

ಆನ್‌ಲೈನ್ ಪರವಾನಗಿ

ಸಾಕುನಾಯಿ ಪರವಾನಗಿ ಪಡೆಯಲು ಆನ್‌ಲೈನ್‌ನಲ್ಲೇ ಅವಕಾಶ ಕಲ್ಪಿಸುವುದಾಗಿ ಬೈಲಾ ಕರಡಿನಲ್ಲಿ ಹೇಳಲಾಗಿದೆ. ನಿಗದಿತ ನಮೂನೆಗಳನ್ನು ಬಿಬಿಎಂಪಿ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅಪ್‌ಲೋಡ್ ಮಾಡುವ ಮೂಲಕ ಪರವಾನಗಿ ಪಡೆಯಬಹುದು ಎಂದು ಪಾಲಿಕೆ ಹೇಳಿದೆ.  

ದತ್ತು ಪಡೆಯಲು ಅವಕಾಶ

ಪರಿತ್ಯಕ್ತವಾದ ನಾಯಿ ಪತ್ತೆಯಾದರೆ ಅದರ ಮಾಲೀಕರನ್ನು ಗುರುತಿಸಿ ಅವರಿಗೆ ನೋಟಿಸ್ ಕಳುಹಿಸಲಾಗುತ್ತದೆ. ಅವರು ನಿಗದಿತ ಸಮಯದೊಳಗೆ ಅದನ್ನು ಕರೆದೊಯ್ಯದಿದ್ದಲ್ಲಿ, ಆ ನಾಯಿಯನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಬಹುದು. ನಾಯಿಯನ್ನು ತ್ಯಜಿಸಿದ ಮಾಲೀಕರಿಗೆ ಆಯುಕ್ತರು ದಂಡ ವಿಧಿಸಬಹುದು ಮತ್ತು ಶಿಸ್ತುಕ್ರಮ ಕೈಗೊಳ್ಳಬಹುದು.

ಮಾಲೀಕರೇ ಶುಚಿಗೊಳಿಸಬೇಕು

ಬೈಲಾ ಪ್ರಕಾರ ಮಾಲೀಕರಿಗೆ ಕೆಲವೊಂದು ಜವಾಬ್ದಾರಿ ಕಡ್ಡಾಯಗೊಳಿಸಲಾಗಿದ್ದು, ಅವುಗಳಲ್ಲಿ ಪ್ರಮುಖವಾದವು ಇಂತಿವೆ.

* ಉದ್ಯಾನ, ಪಾದಚಾರಿ ಮಾರ್ಗ, ರಸ್ತೆ ಮುಂತಾದ ಸ್ಥಳಗಳಲ್ಲಿ ಸಾಕುನಾಯಿ ಮಲ ವಿಸರ್ಜಿಸಿದರೆ  ಅದನ್ನು ಸಂಗ್ರಹಿಸಿ ಗೊತ್ತುಪಡಿಸಿದ ಸ್ಥಳದಲ್ಲಿ ವಿಲೇ ಮಾಡುವುದು ಮಾಲೀಕರ ಹೊಣೆ.

* ನಾಯಿಗೆ ಸಾಕಷ್ಟು ಜಾಗವನ್ನು ಮತ್ತು ಕಾಳಜಿಯನ್ನು ಒದಗಿಸಬೇಕು. ಕ್ರೌರ್ಯ ಮತ್ತು ಪ್ರಾಣಿ ಕಲ್ಯಾಣ ಕಾಯ್ದೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಬಾರದು.

* ಸಾಕುನಾಯಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಕರೆದೊಯ್ಯುವಾಗ ಅದು ಇತರ ಪ್ರಾಣಿಗೆ ಅಥವಾ ವ್ಯಕ್ತಿಗೆ ಕಚ್ಚುವುದನ್ನು ಅಥವಾ ಗಾಯಗೊಳಿಸುವುದನ್ನು ತಪ್ಪಿಸಲು ಕಡ್ಡಾಯವಾಗಿ ಸರಪಳಿಯಿಂದ ಕಟ್ಟಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು