ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಾಯಿ ಕಚ್ಚಿದ್ದಕ್ಕೆ ದೂರು ನೀಡಿದವರ ದ್ವಿಚಕ್ರ ವಾಹನಗಳಿಗೆ ಬೆಂಕಿ

Published 25 ಅಕ್ಟೋಬರ್ 2023, 15:34 IST
Last Updated 25 ಅಕ್ಟೋಬರ್ 2023, 15:34 IST
ಅಕ್ಷರ ಗಾತ್ರ

ಬೆಂಗಳೂರು: ಕೊತ್ತನೂರು ಠಾಣೆ ವ್ಯಾಪ್ತಿಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಎರಡು ದ್ವಿಚಕ್ರ ವಾಹನಗಳು ಬೆಂಕಿಯಿಂದ ಸುಟ್ಟಿದ್ದು, ನಾಯಿ ಕಚ್ಚಿದ್ದ ಪ್ರಕರಣದ ದ್ವೇಷದಿಂದ ಕೃತ್ಯ ನಡೆದಿರುವುದಾಗಿ ದೂರು ಸಲ್ಲಿಕೆಯಾಗಿದೆ.

‘ವೇಣುಗೋಪಾಲಸ್ವಾಮಿ ದೇವಸ್ಥಾನದ ರಸ್ತೆಯಲ್ಲಿರುವ ಮನೆ ಎದುರು ಅ. 23ರಂದು ನಸುಕಿನಲ್ಲಿ ಎರಡು ಬೈಕ್‌ಗಳು ಬೆಂಕಿ ಹೊತ್ತಿಕೊಂಡು ಸುಟ್ಟಿವೆ. ಈ ಸಂಬಂಧ ಪುಷ್ಪಾ ಅವರು ದೂರು ನೀಡಿದ್ದಾರೆ. ಆರೋಪಿಗಳಾದ ನಂಜುಂಡಬಾಬು ಹಾಗೂ ಗೌರಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಗಳು ನಾಯಿಯೊಂದನ್ನು ಸಾಕಿದ್ದಾರೆ. ಅದೇ ನಾಯಿ, ಇತ್ತೀಚೆಗೆ ದೂರುದಾರರಿಗೆ ಕಚ್ಚಿತ್ತು. ಗಾಯಗೊಂಡಿದ್ದ ದೂರುದಾರರು ಚಿಕಿತ್ಸೆ ಪಡೆಯುತ್ತಿದ್ದರು. ನಾಯಿ ಕಚ್ಚಿದ್ದ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಜೊತೆಗೆ, ಆರೋಪಿಗಳು ಹಾಗೂ ದೂರುದಾರರ ನಡುವೆ ಚೀಟಿ ವ್ಯವಹಾರವಿತ್ತು. ಈ ಸಂಬಂಧವೂ ವೈಮನಸ್ಸಿಗೆ ಕಾರಣವಾಗಿತ್ತು’ ಎಂದು ತಿಳಿಸಿವೆ.

‘ಅ. 22ರಂದು ಚೀಟಿ ಹಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳು ಹಾಗೂ ದೂರುದಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ನಾಯಿ ಕಚ್ಚಿದ್ದರಿಂದ ಚೀಟಿ ಹಣವನ್ನು ಚಿಕಿತ್ಸೆಗೆ ಬಳಸಿಕೊಂಡಿರುವುದಾಗಿ ದೂರುದಾರರು ಹೇಳಿದ್ದರು. ಆರೋಪಿಗಳು, ‘ನಾಯಿ ಕಚ್ಚಿರುವ ಸಂಬಂಧ ದೂರು ನೀಡಿದವರನ್ನು ಸುಮ್ಮನೇ ಬಿಡುವುದಿಲ್ಲ’ ಎಂದು ಬೆದರಿಸಿದ್ದರು. ಇದಾದ ಮರುದಿನವೇ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಸುಡಲಾಗಿದೆ.’

‘ನಾಯಿ ಕಚ್ಚಿದ್ದ ಸಂಬಂಧ ದೂರು ನೀಡಿದ್ದಕ್ಕೆ ದ್ವೇಷದಿಂದ ವಾಹನಗಳನ್ನು ಸುಟ್ಟಿರುವುದಾಗಿ ದೂರುದಾರರು ಹೇಳುತ್ತಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಿ, ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT