ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬೊಕ್ಕಸ ತುಂಬಿಸುವ ‘ಡಾರ್ಪರ್‌’ ತಳಿಯ ಟಗರು!

ಒಂದು ಟಗರಿನ ಮೌಲ್ಯ ₹ 5 ಲಕ್ಷ; ಕುರಿ ಸಾಕಾಣಿಕೆಯಿಂದ ವಾರ್ಷಿಕ ₹50 ಲಕ್ಷ ಆದಾಯ
Last Updated 11 ನವೆಂಬರ್ 2021, 20:29 IST
ಅಕ್ಷರ ಗಾತ್ರ

ಬೆಂಗಳೂರು: ಈ ಟಗರಿಗೆ ಕೊಂಬಿಲ್ಲ. ಬಾಲವೂ ಇಲ್ಲ. ಕಪ್ಪು ತಲೆಯ, ಉದ್ದನೆಯ ದೇಹಾಕಾರ ಹೊಂದಿರುವ ಅದರ ತೂಕ 100 ರಿಂದ 120 ಕೆ.ಜಿ. ದರ ₹5 ಲಕ್ಷ! ‌

ಡಾರ್ಪರ್‌ ತಳಿಯ ಈ ಟಗರುಕೃಷಿ ಮೇಳದಲ್ಲಿ ಎಲ್ಲರ ಆಕರ್ಷಣೆಯಾಗಿತ್ತು. ನೋಡಲು ಬಂದವರೆಲ್ಲಾ ಅದರ ದರ ಕೇಳಿ ಬೆರಗಾಗುತ್ತಿದ್ದರು.

ಬೆಂಗಳೂರು ಉತ್ತರ ತಾಲ್ಲೂಕು ಜಾಲ ಹೋಬಳಿಯ ಮಾರೇನಹಳ್ಳಿ ನಿವಾಸಿ ಸತೀಶ್‌ ಅವರು ತಮ್ಮ ಸಿಂಚನಾ ಕುರಿ ಮತ್ತು ಮೇಕೆ ಫಾರಂನಲ್ಲಿ ಈ ವಿಶೇಷ ತಳಿಯ ಕುರಿಗಳನ್ನು ಸಾಕುತ್ತಿದ್ದಾರೆ. ಅದರಿಂದ ವಾರ್ಷಿಕ ಸುಮಾರು ₹50 ಲಕ್ಷ ಆದಾಯ ಗಳಿಸುತ್ತಿದ್ದಾರೆ.

‘ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಡಾರ್ಪರ್‌ ಟಗರಿನ ಮಾಂಸಕ್ಕೆ ಹೆಚ್ಚು ಬೇಡಿಕೆ ಇರುವುದು ತಿಳಿಯಿತು. ಹೀಗಾಗಿ ಆ ತಳಿಯ ಬಗ್ಗೆ ಆಸಕ್ತಿ ಮೂಡಿತ್ತು. ನಮ್ಮ ರಾಜ್ಯದ ರವಿಪ್ರಸಾದ್‌ ಎಂಬುವವರು ಕನಕಪುರದ ತಮ್ಮ ಫಾರಂನಲ್ಲಿ ಆ ತಳಿಯ ಕುರಿಗಳನ್ನು ಸಾಕಿರುವ ವಿಚಾರ ಗೊತ್ತಾಯಿತು.ಅವರಿಂದ ಎರಡು ಟಗರುಗಳನ್ನು ಖರೀದಿಸಿದ್ದೆ’ ಎಂದು ಸತೀಶ್‌ ತಿಳಿಸಿದರು.

‘ರವಿಪ್ರಸಾದ್‌ ಅವರು ದಕ್ಷಿಣ ಆಫ್ರಿಕಾದಿಂದ ಭ್ರೂಣ ತರಿಸಿ ಅದರಿಂದ ಡಾರ್ಪರ್‌ ಕುರಿಗಳನ್ನು ಅಭಿವೃದ್ಧಿಪಡಿಸಿದ್ದರು. ಅವರ ಫಾರಂನಿಂದ ಖರೀದಿಸಿದ್ದ ಟಗರುಗಳಿಂದ 300 ನಾಟಿ ಕುರಿಗಳಿಗೆ ಸಂಕರ ಮಾಡಿಸಿದ್ದೆ. ಆ ಮರಿಗಳು ವರ್ಷದೊಳಗೆ50 ರಿಂದ 70 ಕೆ.ಜಿ. ತೂಕ ವೃದ್ಧಿಸಿಕೊಂಡಿದ್ದವು. ಅವುಗಳ ಮಾಂಸಕ್ಕೂ ಭಾರಿ ಬೇಡಿಕೆ ಇತ್ತು’ ಎಂದರು.

‘ಡಾರ್ಪರ್‌ ಟಗರಿಗೆ ದಿನಕ್ಕೆ ಕನಿಷ್ಠ 12 ಕೆ.ಜಿ. ಮೇವು ನೀಡಬೇಕು.ಮೆಕ್ಕೆಜೋಳ, ನುಗ್ಗೆ ಸೊಪ್ಪು, ಅಗಸೆ, ಬೇಲಿ ಮೆಂತೆ, ಹಿಪ್ಪು ನೇರಳೆ ಸೇರಿದಂತೆ ಒಟ್ಟು 7 ಬಗೆಯ ಮೇವು ಹಾಕುತ್ತೇವೆ. 40 ಎಕರೆ ಜಮೀನಿನಲ್ಲಿ ಮೇವು ಬೆಳೆಯುತ್ತಿದ್ದು 10 ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದೇನೆ. ಸದ್ಯ ನಮ್ಮ ಫಾರಂನಲ್ಲಿರ‍್ಯಾಂಬ್ಲೆಟ್‌ ತಳಿಯ 700, ಎಳಗ ಮತ್ತು ಡೆಕ್ಕನಿ ತಳಿಯ ತಲಾ 50 ಹಾಗೂ ನಾಟಿ ತಳಿಯ 50 ಕುರಿಗಳಿವೆ’ ಎಂದೂ
ಹೇಳಿದರು.

‘ಈ ತಳಿಯ ಕುರಿಗಳು ಅವಳಿ ಮರಿಗಳನ್ನು ಹಾಕುತ್ತವೆ. ಇವುಗಳ ಮಾಂಸ ಮೃದು ಹಾಗೂ ರುಚಿಯಾಗಿರುತ್ತದೆ. ಇಷ್ಟು ವರ್ಷ ಈ ತಳಿಯ ಕುರಿ ಹಾಗೂ ಟಗರಿನ ಭ್ರೂಣ ಮತ್ತು ವೀರ್ಯ ತರುವುದಕ್ಕಷ್ಟೇ ಅವಕಾಶ ಇತ್ತು. ಈಗ ದಕ್ಷಿಣ ಆಫ್ರಿಕಾದಿಂದ ಕುರಿ ಹಾಗೂ ಟಗರುಗಳನ್ನು ಆಮದು ಮಾಡಿಕೊಳ್ಳಬಹುದು. ಹಾಗೆ ತಂದ ಕುರಿಗಳನ್ನು ಕೆಲ ದಿನ ಕ್ವಾರಂಟೈನ್‌ನಲ್ಲಿ ಇಡಬೇಕಾಗುತ್ತದೆ’ ಎಂದು ಜಿಕೆವಿಕೆಯ ಪಶುವಿಜ್ಞಾನಗಳ ವಿಭಾಗದ ಮುಖ್ಯಸ್ಥ ಡಾ.ಬಿ.ಎಲ್‌.ಚಿದಾನಂದ ತಿಳಿಸಿದರು.

ಡಾರ್ಪರ್‌ ದಕ್ಷಿಣ ಆಫ್ರಿಕಾದ ತಳಿ. 1930ರಲ್ಲಿ ಡಾರ್ಸಟ್‌ ಹಾರ್ನ್‌ ಮತ್ತು ಕಪ್ಪು ತಲೆಯ ಪರ್ಷಿಯನ್‌ ಕುರಿಗಳ ಸಂಕರದಿಂದ ಇದನ್ನು ಅಭಿವೃದ್ಧಿಪಡಿಸಲಾಗಿತ್ತು.

ಈ ಕುರಿಗಳು ಕಡಿಮೆ ಕೂದಲು ಹೊಂದಿರುತ್ತವೆ. ಅವು ಕ್ರಮೇಣ ಉದುರಿ ಹೋಗುವ ಲಕ್ಷಣ ಹೊಂದಿರುತ್ತವೆ.ರಾಜ್ಯದಲ್ಲಿ ಡಾರ್ಪರ್‌ ತಳಿಯ ಕುರಿಗಳನ್ನು ನಾಲ್ವರು ಸಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT