ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮತ್ತೆ ಬರಲಿವೆ ಡಬಲ್ ಡೆಕ್ಕರ್ ಬಸ್‌

ಸಂಚಾರ ದಟ್ಟಣೆ, ಜೋತುಬಿದ್ದ ಕೇಬಲ್‌ಗಳ ನಡುವೆ ಸಂಚಾರ ಕಷ್ಟ – ತಜ್ಞರ ಅಭಿಪ್ರಾಯ
Last Updated 26 ಸೆಪ್ಟೆಂಬರ್ 2022, 20:20 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಡಬಲ್ ಡೆಕ್ಕರ್ ಬಸ್‌ಗಳ ಸಂಚಾರಕ್ಕೆ ಮತ್ತೊಮ್ಮೆ ಕಾಲ ಕೂಡಿ ಬರುತ್ತಿದೆ. ಈ ಬಸ್‌ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ಸಿದ್ಧತೆ ಮಾಡಿಕೊಂಡಿದೆ. ಸಂಚಾರ ದಟ್ಟಣೆ, ಜೋತುಬಿದ್ದ ಕೇಬಲ್‌ಗಳ ನಡುವೆ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಕಾರ್ಯಸಾಧುವೆ ಎಂಬ ಪ್ರಶ್ನೆಯೂ ಉದ್ಭವವಾಗಿವೆ.

15ನೇ ಹಣಕಾಸು ಆಯೋಗದ ಅನುದಾನ ಬಳಸಿಕೊಂಡು ರಾಷ್ಟ್ರೀಯ ವಾಯು ಶುದ್ಧೀಕರಣ ಕಾರ್ಯಕ್ರಮದ(ಎನ್‌ಸಿಎಪಿ) ಅಡಿಯಲ್ಲಿ ಈ ಯೋಜನೆ ಅನುಷ್ಠಾನವಾಗುತ್ತಿದೆ. ಈ ಅನುದಾನದಲ್ಲಿ ಬಿಬಿಎಂಪಿಗೆ ₹140 ಕೋಟಿ ಲಭ್ಯವಾಗಿದೆ. ಪರಿಸರಸ್ನೇಹಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿರುವ ಬಿಬಿಎಂಪಿ, ಡಬಲ್ ಡೆಕ್ಕರ್ ಬಸ್‌ ಖರೀದಿಗೂ ₹10 ಕೋಟಿ ನಿಗದಿ ಮಾಡಿದೆ.

₹10 ಕೋಟಿಯಲ್ಲಿ ಐದು ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಸಾಧ್ಯವಿದ್ದು, ಇನ್ನೂ ಐದು ಬಸ್‌ಗಳ ಖರೀದಿಗೆ ಬೇರೆ ಮೂಲಗಳಿಂದ ಅನುದಾನ ಪಡೆಯುವ ಪ್ರಯತ್ನವನ್ನು ಬಿಎಂಟಿಸಿ ಮಾಡುತ್ತಿದೆ. ನಗರ ಭೂಸಾರಿಗೆ ನಿರ್ದೇಶನಾಲಯದ(ಡಲ್ಟ್‌) ಜತೆಗೂ ಮಾತುಕತೆ ನಡೆಸುತ್ತಿದೆ.

ಡಬಲ್ ಡೆಕ್ಕರ್ ಬಸ್‌ಗಳನ್ನು ಖರೀದಿಸುವ ಜತೆಗೆ ಅವುಗಳನ್ನು ರಸ್ತೆಗಿಳಿಸುವುದು ಸವಾಲಿನ ಕೆಲಸ. ಎಲ್ಲಾ ಮಾರ್ಗಗಳಲ್ಲೂ ಈ ಬಸ್‌ಗಳ ಕಾರ್ಯಾಚರಣೆ ಸುಲಭ ಅಲ್ಲ. ಆದ್ದರಿಂದ ಡಬಲ್ ಡೆಕ್ಕರ್ ಬಸ್‌ಗಳ ಸಂಚಾರಕ್ಕೆ ಯೋಗ್ಯ ಇರುವ ರಸ್ತೆಗಳ ಹುಡುಕಾಟದಲ್ಲಿ ಬಿಎಂಟಿಸಿ ಅಧಿಕಾರಿಗಳು ನಿರತರಾಗಿದ್ದಾರೆ.

ಮೊದಲ ಹಂತದಲ್ಲಿ ಹೊರ ವರ್ತುಲ ರಸ್ತೆಯಲ್ಲಿ ಈ ಬಸ್‌ಗಳ ಕಾರ್ಯಾಚರಣೆ ಮಾಡಲು ಸಾಧ್ಯವೇ ಎಂಬ ಆಲೋಚನೆ ನಡೆಸುತ್ತಿದ್ದಾರೆ. ‘ಐದು ಬಸ್‌ಗಳ ಖರೀದಿಗೆ ಅನುದಾನ ಮಂಜೂರಾಗಿದೆ. ಒಟ್ಟಾರೆ 10 ಡಬಲ್ ಡೆಕ್ಕರ್ ಬಸ್‌ಗಳನ್ನು ರಸ್ತೆಗಿಳಿಸುವ ಆಲೋಚನೆ ಇದೆ. ಎಲ್ಲಾ ಮಾರ್ಗಗಳಲ್ಲೂ ಈ ಬಸ್‌ಗಳ ಕಾರ್ಯಾಚರಣೆ ಸಾಧ್ಯವಿಲ್ಲ. ಯಾವ ಮಾರ್ಗದಲ್ಲಿ ಸಾಧ್ಯವಿದೆ ಎಂಬುದನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯುತ್ ತಂತಿಗಳು, ಜೋತುಬಿದ್ದ ಆಪ್ಟಿಕಲ್ ಕೇಬಲ್‌ಗಳು, ಅಲ್ಲಲ್ಲೇ ಇರುವ ಪಾದಚಾರಿ ಮೇಲ್ಸೇತುವೆಗಳು, ಅಂಡರ್ ಪಾಸ್‌ಗಳು, ಮೇಲ್ಸೇತುವೆಗಳು, ಗ್ರೇಡ್ ಸೆಪರೇಟರ್‌ಗಳ ನಡುವೆ ಈ ಬಸ್‌ಗಳ ಕಾರ್ಯಾಚರಣೆ ಹಿಂದಿನಷ್ಟು ಸುಲಭವಲ್ಲ ಎನ್ನುತ್ತಾರೆ ಸಾರಿಗೆ ತಜ್ಞರು.

ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಬಸ್‌ಗಳ ಕಾರ್ಯಾಚರಣೆಗೆ ಇತಿಹಾಸವೇ ಇದೆ. ಡಬಲ್ ಡೆಕ್ಕರ್, ರೋಡ್‌ ಟ್ರೈನ್, ಜಾಯಿಂಟ್ ಬಸ್‌ಗಳನ್ನು ನಗರದ ಜನ ಕಂಡಿದ್ದಾರೆ.

ಡಬಲ್ ಡೆಕ್ಕರ್ ಬಸ್‌ ಎಂದರೆ ಪ್ರಯಾಣಿಕರು ಎರಡು ಸ್ತರಗಳಲ್ಲಿ ಕೂರುವ ಮಹಡಿ ಬಸ್‌ ಎಂದೇ ಜನಜನಿತ. ಎಂಜಿನ್‌ನ ಬಲ ಭಾಗದಲ್ಲಿ ಚಾಲಕ ಕೂರಲು ಪ್ರತ್ಯೇಕ ಕೋಣೆ ಇತ್ತು.

‘ಒಂದು ಮಹಡಿಗೆ ಹತ್ತಿದ ಪ್ರಯಾಣಿಕ ಇನ್ನೊಂದು ಮಹಡಿಗೆ ಹೋಗಲು ಅವಕಾಶ ಇರಲಿಲ್ಲ. ಎರಡೂ ಮಹಡಿಗಳಿಗೆ ಪ್ರತ್ಯೇಕ ಬಾಗಿಲುಗಳು ಮತ್ತು ನಿರ್ವಾಹಕರು ಇರುತ್ತಿದ್ದರು. ನಂತರದ ದಿನಗಳಲ್ಲಿ ಸುಧಾರಿತ ವಿನ್ಯಾಸದ ಡಬಲ್ ಡೆಕ್ಕರ್ ಬಸ್‌ಗಳನ್ನು ಪರಿಚಯಿಸಲಾಯಿತು. ಈ ಬಸ್‌ ರಾಮಕೃಷ್ಣ ಆಶ್ರಮದ ಬಳಿ ಪಲ್ಟಿ ಹೊಡೆದ ಬಳಿಕ ಡಬಲ್ ಡೆಕ್ಕರ್ ಬಸ್‌ಗಳ ಸಂಚಾರ ಕ್ರಮೇಣ ಕಡಿಮೆ ಆಯಿತು‘ ಎನ್ನುತ್ತಾರೆ ಸಾರಿಗೆ ತಜ್ಞ ಕೃಷ್ಣಪ್ರಸಾದ್.

ನಂತರ ರೋಡ್ ಟ್ರೈನ್‌ ಎಂಬ ಬಸ್‌ಗಳನ್ನು ಪರಿಚಯಿಸಲಾಯಿತು. ಈ ಬಸ್‌ಗಳಲ್ಲಿ ಒಂದರ ಹಿಂದೆ ಮತ್ತೊಂದು ಬಸ್‌ ಜೋಡಿಸಲಾಗಿತ್ತು. ಜೆ.ಸಿ. ರಸ್ತೆಯಲ್ಲಿ ತೆರಳುತ್ತಿದ್ದ ರೋಡ್‌ ಟ್ರೈನ್‌ನಲ್ಲಿ ಹಿಂಬದಿಯ ಬಸ್‌ ಬೇರ್ಪಟ್ಟು, ರವೀಂದ್ರ ಕಲಾಕ್ಷೇತ್ರದ ಆವರಣಕ್ಕೆ ನುಗ್ಗಿತ್ತು. ಆ ಬಳಿಕ ಈ ಬಸ್‌ಗಳ ಸಂಚಾರವನ್ನೂ ಕ್ರಮೇಣ ನಿಲ್ಲಿಸಲಾಯಿತು ಎಂದು ಅವರು ನೆನಪಿಸಿಕೊಂಡರು.

ಕೆಲವೇ ವರ್ಷಗಳ ಹಿಂದೆ ಒಂದಕ್ಕೆ ಮತ್ತೊಂದು ಬಸ್‌ ಜೋಡಿಸಿದ ‘ಜಂಟಿ ವಾಹನ’ವನ್ನು ಬಿಎಂಟಿಸಿ ಪರಿಚಯಿಸಿತು. ಇದರಲ್ಲಿ ನಿರ್ವಾಹಕ ಮತ್ತು ಪ್ರಯಾಣಿಕರು ಒಂದು ಬಾಗಿಲಿನಲ್ಲಿ ಹತ್ತಿದರೆ ಎಲ್ಲಾ ಕಡೆಯೂ ಓಡಾಡಲು ಅವಕಾಶ ಇತ್ತು. ತಿರುವುಗಳಲ್ಲಿ ಬಸ್‌ಗಳನ್ನು ಚಾಲನೆ ಮಾಡಲು ಚಾಲಕರು ತಿಣುಕಾಡುವ ಸ್ಥಿತಿ ಇತ್ತು. ಬಳಿಕ ಇವುಗಳ ಕಾರ್ಯಾಚರಣೆಯೂ ನಿಂತಿತು ಎಂದು ಹೇಳಿದರು.

‘ನೈಸ್‌ ರಸ್ತೆಯೊಂದೇ ಸೂಕ್ತ’

‘ಈಗ ಡಬಲ್ ಡೆಕ್ಕರ್ ಬಸ್‌ಗಳನ್ನು ಪರಿಚಯಿಸಲು ಬಿಎಂಟಿಸಿ ಮುಂದಾಗಿದೆ. ರಸ್ತೆ ಬದಿಯ ಮರಗಳು, ಮೇಲ್ಸೇತುವೆ, ಕೆಳಸೇತುವೆಗಳಲ್ಲಿ ಈ ಬಸ್‌ಗಳ ಸಂಚಾರ ಕಷ್ಟ’ ಎನ್ನುತ್ತಾರೆ ಕೃಷ್ಣ ಪ್ರಸಾದ್.

‘ಹೊರ ವರ್ತುಲ ರಸ್ತೆಗಳಲ್ಲೂ ಪಾದಚಾರಿ ಮೇಲ್ಸೇತುವೆ, ಮೆಟ್ರೊ ರೈಲು ಮಾರ್ಗಗಳಿವೆ. ಸಂಚಾರದಟ್ಟಣೆ ಈಗ ವಿಪರೀತ
ವಾಗಿದ್ದು, ಸಾಮಾನ್ಯ ಬಸ್‌ಗಳ ಚಾಲನೆಯೇ ಕಷ್ಟವಾಗಿದೆ. ಈ ಸಂದರ್ಭದಲ್ಲಿ ಡಬಲ್ ಡೆಕ್ಕರ್ ಬಸ್‌ಗಳನ್ನು ರಸ್ತೆಗಿಳಿಸಿದರೆ ದಟ್ಟಣೆ ಇನ್ನಷ್ಟು ಹೆಚ್ಚಾಗಬಹುದು’ ಎಂದು ಅವರು ಹೇಳುತ್ತಾರೆ.

‘ಸದ್ಯಕ್ಕೆ ನೈಸ್ ರಸ್ತೆಯೊಂದೇ ಈ ಬಸ್‌ಗಳ ಸಂಚಾರಕ್ಕೆ ಯೋಗ್ಯ ಎಂಬಂತೆ ಕಾಣಿಸುತ್ತಿದೆ. ಅಲ್ಲಿ ಈ ಬಸ್‌ಗಳು ಸಂಚರಿಸಿದರೆ ಯಾರಿಗೆ ಪ್ರಯೋಜನ’ ಎನ್ನುವುದು ಅವರ ಪ್ರಶ್ನೆ.

‘ಡಬಲ್ ಡೆಕ್ಕರ್: ಒಳ್ಳೆಯ ಬೆಳವಣಿಗೆ’

‘ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಬಸ್‌ಗಳ ಕಾರ್ಯಾಚರಣೆ ಸಂಖ್ಯೆ ಹೆಚ್ಚಿಸುವುದೇ ಮಾರ್ಗೋಪಾಯ. ಆದ್ದರಿಂದ ಡಬಲ್ ಡೆಕ್ಕರ್ ಬಸ್‌ ಪರಿಚಯಿಸುವುದು ಒಳ್ಳೆಯ ಬೆಳವಣಿಗೆ’ ಎಂದು ನಗರ ಸಂಚಾರ ತಜ್ಞ ಎಚ್.ಎಸ್.ಸುಧೀರ್ ಹೇಳಿದರು.

‘ಸಂಚಾರ ದಟ್ಟಣೆ ಹೆಚ್ಚಾಗಿರುವುದು ಬಸ್‌ಗಳಿಂದ ಅಲ್ಲ. ಕಾರು ಮತ್ತು ದ್ವಿಚಕ್ರ ವಾಹನಗಳಿಂದ. ಡಬಲ್ ಡೆಕ್ಕರ್ ಬಸ್‌ ಬಂದರೆ ಇನ್ನಷ್ಟು ಜನ ಸಾಮೂಹಿಕ ಪ್ರಯಾಣ ಮಾಡಲು ಅನುಕೂಲ ಆಗಲಿದೆ. ಎಲ್ಲಾ ಮಾರ್ಗಗಳಲ್ಲೂ ಸಂಚಾರ ಸಾಧ್ಯವಾಗದೆ ಇರಬಹುದು. ಸಾಧ್ಯವಿರುವ ಮಾರ್ಗಗಳಲ್ಲಿ ಈ ಬಸ್ ಕಾರ್ಯಾಚರಣೆ ಮಾಡಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT