ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ 6ನೇ ಹಂತದ ಯೋಜನೆ: ಡಿಪಿಆರ್‌ಗೆ ಸಜ್ಜು

ಬೆಂಗಳೂರು, ಸುತ್ತಮುತ್ತಲಿನ ಪಟ್ಟಣಗಳಿಗೆ 500 ಎಂಎಲ್‌ಡಿ ನೀರು ಪೂರೈಸಲು ಯೋಜನೆ
Published 8 ಫೆಬ್ರುವರಿ 2024, 4:52 IST
Last Updated 8 ಫೆಬ್ರುವರಿ 2024, 4:52 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಯ ಪಟ್ಟಣಗಳಿಗೆ ಕಾವೇರಿ ನೀರು ಪೂರೈಸಲು ಬೆಂಗಳೂರು ಜಲಮಂಡಳಿ ಮತ್ತೊಂದು ಹೆಜ್ಜೆ ಇರಿಸಿದ್ದು, ಕಾವೇರಿ 6ನೇ ಹಂತದ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಸಜ್ಜಾಗಿದೆ.

ಬೆಂಗಳೂರಿನ ಕೆಲವು ಭಾಗಗಳು ಸೇರಿದಂತೆ ಸುತ್ತಮುತ್ತಲಿನ ಪಟ್ಟಣಗಳ ಕೇಂದ್ರ ಭಾಗಕ್ಕೆ ಪ್ರತಿನಿತ್ಯ 500 ದಶಲಕ್ಷ ಲೀಟರ್‌ ನೀರು ಪೂರೈಸಲು ಕಾವೇರಿ 6ನೇ ಹಂತದಲ್ಲಿ ಯೋಜಿಸಲಾಗಿದೆ.

ಸುಪ್ರೀಂ ಕೋರ್ಟ್‌ ಆದೇಶದಂತೆ 6 ಟಿಎಂಸಿ ಅಡಿ ಕಾವೇರಿ ನೀರನ್ನು ಹೆಚ್ಚುವರಿಯಾಗಿ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳ ಬಹುದು. ಈ ನೀರನ್ನು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪಟ್ಟಣಗಳಿಗೆ ಪೂರೈಸಲು ಸರ್ಕಾರ ಆದೇಶಿಸಿದೆ. ಇದೂ ಸೇರಿದಂತೆ, ಒಟ್ಟಾರೆ 24 ಟಿಎಂಸಿ ಅಡಿ ಕಾವೇರಿ ನೀರು ಕುಡಿಯುವುದಕ್ಕಾಗಿ ಸರಬರಾಜು ಆದಂತಾಗುತ್ತದೆ.

ಸರ್ಕಾರದ ಆದೇಶದಂತೆ ಜಲಮಂಡಳಿ ಜನವರಿ 25ರಂದು ನಡೆಸಿದ ಮಂಡಳಿ ಸಭೆಯಲ್ಲಿ ಯೋಜನೆಯ ಮುಖ್ಯ ಎಂಜಿನಿಯರ್‌ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಡಿಪಿಆರ್ ರಚಿಸುವ ಹೊಣೆ ನೀಡಲಾಗಿದೆ. ಫೆ.6ರಂದು ಜಲಮಂಡಳಿ ಟೆಂಡರ್‌ ಕರೆದಿದ್ದು, ಫೆ.21ರವರೆಗೆ ಬಿಡ್‌ ಸಲ್ಲಿಸಬಹುದಾಗಿದೆ. ಗುತ್ತಿಗೆ ನೀಡಿದ ನಂತರದ ಆರು ತಿಂಗಳಲ್ಲಿ ಡಿಪಿಆರ್‌ ಸಲ್ಲಿಸಬೇಕಾಗಿದೆ.

ಶಿವನಸಮುದ್ರದಿಂದ ತೊರೆಕಾಡನಹಳ್ಳಿಗೆ ಕಾವೇರಿ ನೀರು ಬರಲಿದ್ದು, ಅಲ್ಲಿ ಸಂಸ್ಕರಣೆಯಾಗುತ್ತದೆ. ಅಲ್ಲಿಂದ ಪಂಪಿಂಗ್‌ ಸ್ಟೇಷನ್‌ ಮೂಲಕ ಹೊರ ವರ್ತುಲ ರಸ್ತೆ, ನೈಸ್‌ ರಸ್ತೆಗಳ ಮೂಲಕ ಪಟ್ಟಣಗಳಿಗೆ 6ನೇ ಹಂತದಲ್ಲಿ ಕಾವೇರಿ ನೀರು ಪೂರೈಸಲು ಯೋಜಿಸಲಾಗಿದೆ. ಕೊಳವೆ ಮಾರ್ಗ ಎಲ್ಲಿ ಬರಬೇಕು, ಹೇಗೆ ಬರಬೇಕು, ಅದರ ವಿನ್ಯಾಸ, ಈಗಿರುವ ಸೌಲಭ್ಯ, ಮೂಲಸೌಕರ್ಯಗಳ ಬಳಕೆ, ಪರಿಸರದ ಮೇಲಾಗುವ ಪರಿಣಾಮ, ವಿವರವಾದ ಅಂದಾಜು ಪಟ್ಟಿ, ಕಾಮಗಾರಿಗೆ ಹಣ ಒದಗಿಸಬಹುದಾದ ಆಯ್ಕೆಗಳು, ಸಂಬಂಧಿಸಿದ ಪ್ರಾಧಿಕಾರ, ಸಚಿವಾಲಯಗಳಿಂದ ಸಮ್ಮತಿ ಸೇರಿದಂತೆ ಈ ಯೋಜನೆ ರೂಪುರೇಷೆಯನ್ನು ಸಿದ್ಧಪಡಿಸಲು ಅಂದಾಜು ₹96 ಲಕ್ಷ ವೆಚ್ಚದ ಟೆಂಡರ್‌ ಆಹ್ವಾನಿಸಲಾಗಿದೆ.

ಕೇಂದ್ರ ಭಾಗಕ್ಕೆ ನೀರು:

‘ಕಾವೇರಿ 6ನೇ ಹಂತದಲ್ಲಿ 500 ಎಂಎಲ್‌ಡಿ ನೀರು ಪೂರೈಸಲು ಯೋಜಿಸಲಾಗಿದ್ದು, ಇದರಲ್ಲಿ ಬಹುಪಾಲು ನೀರು ಪಟ್ಟಣಗಳನ್ನೇ ತಲುಪುತ್ತದೆ.  ಪಟ್ಟಣದ ಕೇಂದ್ರ ಸ್ಥಾನಕ್ಕೆ ಕೊಳವೆ ಮಾರ್ಗದ ಮೂಲಕ ನೀರನ್ನು ‘ಸಗಟು’ (ಬಲ್ಕ್‌) ಆಗಿ ಪೂರೈಸಲಾಗುತ್ತದೆ. ಅಲ್ಲಿಂದ ಸ್ಥಳೀಯ ಸಂಸ್ಥೆಗಳು ನಾಗರಿಕರಿಗೆ ಸರಬರಾಜು ಮಾಡುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದೆ’ ಎಂದು ಜಲಮಂಡಳಿ ಎಂಜಿನಿಯರ್‌ ಮಾಹಿತಿ ನೀಡಿದರು.

‘ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದಲ್ಲಿ ಕಾವೇರಿ ನೀರು ಪಡೆಯುವ ವ್ಯವಸ್ಥೆ ಇದ್ದು, ಅಲ್ಲಿಂದ ತೊರೆಕಾಡನಹಳ್ಳಿಗೆ ಪಂಪ್‌ ಮಾಡಲಾಗುತ್ತಿದೆ. ಅಲ್ಲಿಂದ ಪಟ್ಟಣಗಳಿಗೆ ನೀರು ಪೂರೈಸಲು ಯೋಜಿಸಲಾಗಿದೆ. ಅಲ್ಲದೆ, ತಾತಗುಣಿ ಸೇವಾಕೇಂದ್ರದಿಂದ ಬೆಂಗಳೂರು ನಗರದ ಕೆಲವು ಭಾಗಕ್ಕೆ ನೀರು ಒದಗಿಸಲು ಯೋಜಿಸಲಾಗಿದೆ’ ಎಂದರು.

‘ಕಾವೇರಿ 6ನೇ ಹಂತದ ಯೋಜನೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, ಹಣದ ಹೊಂದಾಣಿಕೆಯಾಗಿ ಯೋಜನೆ ಆರಂಭವಾಗಲು ಇನ್ನೂ ಒಂದು ವರ್ಷ ಬೇಕಾಗುತ್ತದೆ. ಅದಾದ ಮೇಲೆ ಕನಿಷ್ಠ ಮೂರು ವರ್ಷ ಕಾಮಗಾರಿ ನಡೆಯುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT