ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಗ್ಗಿ, ಡೊನ್ಜೊ ‘ಬಾಯ್’ ಸೋಗಿನಲ್ಲಿ ಡ್ರಗ್ಸ್ ಸಾಗಣೆ –ಇಬ್ಬರ ಸೆರೆ

* ₹ 60 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ: ಉಡುಗೊರೆ, ಶುಭಾಶಯ ಪತ್ರದಲ್ಲಿ ಬಚ್ಚಿಟ್ಟು ಪೂರೈಕೆ
Last Updated 22 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಆಹಾರ ಪೂರೈಕೆ ಆ್ಯಪ್‌ಗಳ ‘ಡೆಲಿವರಿ ಬಾಯ್‌’ ಸೋಗಿನಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಜಾರ್ಖಂಡ್‌ನ ರವಿ ಹಾಗೂ ರವಿಪ್ರಕಾಶ್ ದಾಸ್ ಬಂಧಿತರು. ಅವರಿಂದ ₹ 60 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಸಾಬೂನು, ಫೋಟೊ ಚೌಕಟ್ಟು, ಶುಭಾಶಯ ಪತ್ರ, ಪುಸ್ತಕ, ಹುಟ್ಟುಹಬ್ಬದ ಉಡುಗೊರೆ ಹಾಗೂ ಇತರೆ ವಸ್ತುಗಳಲ್ಲಿ ಮಾದಕ ಪದಾರ್ಥ ಬಚ್ಚಿಟ್ಟು ಗ್ರಾಹಕರಿಗೆ ನೀಡಲಾಗುತ್ತಿತ್ತು. ಇದರ ಮೂಲಕ ಆರೋಪಿಗಳು, ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದರು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದರು.

‘ತಂತ್ರಜ್ಞಾನ ಬಳಕೆಯಲ್ಲಿ ಪರಿಣಿತರಾಗಿದ್ದ ಆರೋಪಿಗಳು, ‘ಡಾರ್ಕ್‌ನೆಟ್’ ಮೂಲಕ ವಿದೇಶದಲ್ಲಿರುವ ಡ್ರಗ್ಸ್ ಪೆಡ್ಲರ್‌ಗಳನ್ನು ಸಂಪರ್ಕಿಸುತ್ತಿದ್ದರು. ಆನ್‌ಲೈನ್‌ನಲ್ಲಿ ‘ಬಿಟ್‌ ಕಾಯಿನ್’ ಮೂಲಕ ಹಣ ಪಾವತಿಸುತ್ತಿದ್ದ ಆರೋಪಿಗಳು, ಪೆಡ್ಲರ್‌ಗಳಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು. ಈ ಜಾಲ ಬೆಂಗಳೂರು ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಸಕ್ರಿಯವಾಗಿರುವ ಮಾಹಿತಿ ಇದೆ’ ಎಂದೂ ತಿಳಿಸಿದರು.

‘ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ಇತರರು ಆರೋಪಿಗಳ ಗ್ರಾಹಕರಾಗಿದ್ದರು. ಪೊಲೀಸರಿಗೆ ಸುಳಿವು ಸಿಗದಂತೆ ಆರೋಪಿಗಳು, ತಮ್ಮದೇ ಜಾಲ ರೂಪಿಸಿಕೊಂಡು ಡ್ರಗ್ಸ್ ಪೂರೈಸುತ್ತಿದ್ದರು’ ಎಂದೂ ಹೇಳಿದರು.

ಡೆಲಿವರಿ ಬಾಯ್ ಸಮವಸ್ತ್ರ; ‘ಸ್ವಿಗ್ಗಿ, ಡೊನ್ಜೊ ಹಾಗೂ ಇತರೆ ಆ್ಯಪ್‌ಗಳ ಮೂಲಕ ಸಾವಿರಾರು ಡೆಲಿವರಿ ಬಾಯ್‌ಗಳು ಗ್ರಾಹಕರ ಮನೆಗೆ ಆಹಾರ ಪೂರೈಸುತ್ತಿದ್ದಾರೆ. ಬಹುಪಾಲು ಡೆಲಿವರಿ ಬಾಯ್‌ಗಳನ್ನು ಪೊಲೀಸರು ಹೆಚ್ಚು ತಪಾಸಣೆ ನಡೆಸುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಆರೋಪಿಗಳು, ಡೆಲಿವರಿ ಬಾಯ್‌ಗಳ ಸೋಗಿನಲ್ಲಿ ಡ್ರಗ್ಸ್ ಮಾರುತ್ತಿದ್ದರು’ ಎಂದೂ ಕಮಲ್ ಪಂತ್ ವಿವರಿಸಿದರು.

‘ಡೆಲಿವರಿ ಬಾಯ್‌ಗಳ ಸಮವಸ್ತ್ರ ಧರಿಸುತ್ತಿದ್ದ ಆರೋಪಿಗಳು, ಕಂಪನಿ ಬ್ಯಾಗ್‌ ಜೊತೆಯಲ್ಲೇ ದ್ವಿಚಕ್ರ ವಾಹನದಲ್ಲಿ ಸುತ್ತಾಡುತ್ತಿದ್ದರು. ಈ ಮೂಲಕವೇ ಗ್ರಾಹಕರ ಮನೆ ಬಾಗಿಲಿಗೆ ನಿತ್ಯವೂ ಡ್ರಗ್ಸ್ ಪೂರೈಸುತ್ತಿದ್ದರು’ ಎಂದೂ ಹೇಳಿದರು.

ಆ್ಯಪ್‌ ಮೂಲಕವೇ ಆರ್ಡರ್; ‘ಬಂಧಿತ ಆರೋಪಿಗಳಾಗ ರವಿ ಹಾಗೂ ರವಿಪ್ರಕಾಶ್‌, ದೆಹಲಿಯಲ್ಲಿರುವ ಪ್ರಮುಖ ಆರೋಪಿ ಸೂಚನೆಯಂತೆ ಕೆಲಸ ಮಾಡುತ್ತಿದ್ದರು. ಡ್ರಗ್ಸ್ ಆರ್ಡರ್ ಪಡೆಯಲೆಂದೇ ಪ್ರಮುಖ ಆರೋಪಿ, ಮೂರು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದ್ದ. ಇಂಥ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಿದ್ದ ಗ್ರಾಹಕರು, ಅದರ ಮೂಲಕವೇ ಡ್ರಗ್ಸ್ ಖರೀದಿಗೆ ಆರ್ಡರ್ ನೀಡುತ್ತಿದ್ದರು’ ಎಂದೂ ಕಮಲ್ ಪಂತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT