ಭಾನುವಾರ, ಸೆಪ್ಟೆಂಬರ್ 19, 2021
23 °C

ಕೊರೊನಾ ಸಂಕಷ್ಟ: ರೈತನ ಕೈ ಹಿಡಿದ ನುಗ್ಗೆಪುಡಿ, ಏನಿದರ ಉಪಯೋಗ? ಇಲ್ಲಿದೆ ವಿವರ

ಸಿ.ಎಸ್‌.ನಿರ್ವಾಣ ಸಿದ್ದಯ್ಯ Updated:

ಅಕ್ಷರ ಗಾತ್ರ : | |

Prajavani Photo

ಹೆಸರಘಟ್ಟ: ಕೊರೊನಾ ಸಂಕಷ್ಟದಲ್ಲಿ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೇ ರೈತರು ಬವಣೆಪಡುತ್ತಿರುವಾಗ ಬ್ಯಾತ ಗ್ರಾಮದ ರೈತ ಬಸವರಾಜು ಅವರು ನುಗ್ಗೆ ಮರಗಳನ್ನು ಬೆಳೆಸಿ ಸಂಕಷ್ಟವನ್ನು ದಿಟ್ಟವಾಗಿ ಎದುರಿಸಿದ್ದಾರೆ.

ಹಲ ಕೃಷಿ ಮೇಳದಲ್ಲಿ ಭಾಗವಹಿಸಿ ಕೃಷಿಯ ಬಗ್ಗೆ ತಿಳಿವಳಿಕೆ ಸಂಪಾದಿಸಿರುವ ಅವರು ತಮ್ಮ ಜಮೀನಿನಲ್ಲಿ ಸಾವಯವ ಕೃಷಿಯ ಮೂಲಕ ಲಾಭದಾಯಕ ಬೆಳೆ ತಮ್ಮದಾಗಿಸಿಕೊಂಡಿದ್ದಾರೆ. ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಜೀವಾಮೃತದ ಮೂಲಕ ಉತ್ತಮ ಫಸಲನ್ನು ಪಡೆದ ಹೆಗ್ಗಳಿಕೆ ಇವರದ್ದು.

‘ದಾಕ್ಷಿ ಮತ್ತು ತೊಂಡೆ ಹಣ್ಣನ್ನು ಬೆಳೆದಿದ್ದೆ. ಎರಡು ಬೆಳೆಗಳಿಗೆ ಲಾಕ್‍ಡೌನ್ ಸಮಯದಲ್ಲಿ ಮಾರುಕಟ್ಟೆ ಸಿಗದೇ ತತ್ತರಿಸಿ ಹೋದೆ. ಒಂದೇ ಒಂದು ಕೆ.ಜಿ. ಮಾರಾಟವಾಗುತ್ತಿರಲಿಲ್ಲ. ಹಣ್ಣುಗಳು ಕೊಳೆತು ಹೋಗುತ್ತಿದ್ದವು. ಹಣ್ಣು ಹಾಳಾಗುವುದು ಬೇಡ ಎಂದು ರಸ್ತೆ ಬದಿಯಲ್ಲಿ ನಿಂತು ಉಚಿತವಾಗಿ ಹಂಚುತ್ತಿದ್ದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಕಷ್ಟವಾಗುತ್ತದೆ ಎಂದು ಪರ್ಯಾಯ ಮಾರ್ಗ ಹುಡುಕುತ್ತಿದ್ದೆ. ಆಗ ನೆರವಿಗೆ ಬಂದಿದ್ದೆ ನುಗ್ಗೆಪುಡಿಯ ಆಲೋಚನೆ’ ಎನ್ನುತ್ತಾರೆ ಬಸವರಾಜು.

ಕೊರೊನಾ ಸಮಯದಲ್ಲಿ ನುಗ್ಗೆಪುಡಿ ಒಳಿತು:

‘ನುಗ್ಗೆ ಸೊಪ್ಪಿನಲ್ಲಿ ಹೇರಳ ವಿಟಮಿನ್ ಇರುತ್ತದೆ ಎಂದು ಅನೇಕ ಆರ್ಯುವೇದ ವೈದ್ಯರು ಹೇಳಿದ್ದರು. ನುಗ್ಗೆ ಸೊಪ್ಪಿನ ಪುಡಿಯನ್ನು ಟೀ–ಕಾಫಿಯಂತೆ ದಿನಾ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಕೊರೊನಾದ ಸಮಯದಲ್ಲಿ ನುಗ್ಗೆಪುಡಿಯನ್ನು ಜನರಿಗೆ ನೀಡಿದರೆ ಒಳಿತಾಗುತ್ತದೆ ಎಂದು ಆಲೋಚನೆ ಮಾಡಿ ನುಗ್ಗೆ ಮರಗಳನ್ನು ಬೆಳೆಸಲು ತೀರ್ಮಾನಿಸಿದೆ. ಒಂದು ಎಕರೆ ಪ್ರದೇಶದಲ್ಲಿ ನುಗ್ಗೆ ಮರಗಳನ್ನು ಹಾಕಿದೆ. ಜೀವಾಮೃತವನ್ನು ತಯಾರಿಸಿ ಗಿಡಗಳಿಗೆ ನೀಡಿದೆ. ಸಾವಯವ ಕೃಷಿಯ ಮೂಲಕ ನುಗ್ಗೆ ಗಿಡಗಳನ್ನು ಸಮೃದ್ದವಾಗಿ ಬೆಳೆದೆ. ನುಗ್ಗೆ ಎಲೆಗಳನ್ನು ಕಿತ್ತು ಒಣಗಿಸಿ ಯಂತ್ರದಿಂದ ಪುಡಿ ಮಾಡಿ ಕೊಡಲು ಪ್ರಾರಂಭಿಸಿದೆ. ಸಾಕಷ್ಟು ಜನರು ಬಂದು ತೆಗೆದುಕೊಳ್ಳಲು ಪ್ರಾರಂಭಿಸಿದರು. ಅನೇಕ ಆಯುರ್ವೇದ ಕಂಪನಿಗಳು ತಾವೇ ಮುಂದೆ ಬಂದು ನುಗ್ಗೆಪುಡಿಯನ್ನು ಖರೀದಿ ಮಾಡಿದವು’ ಎಂದರು.


ಬಸವರಾಜು ಕುಟುಂಬ

‘ಈಗ ವಾರಕ್ಕೆ 500 ಕೆ.ಜಿ.ಯಷ್ಟು ನುಗ್ಗೆಪುಡಿಯನ್ನು ಮಾರಾಟ ಮಾಡುತ್ತಿದ್ದೇನೆ. ಕೊರೊನಾ ಸಮಯದಲ್ಲಿ ನಷ್ಟವಾಗಿದ್ದ ಎಲ್ಲವನ್ನೂ ಇದರಿಂದ ತುಂಬಿಕೊಂಡಿದ್ದೇನೆ’ ಎನ್ನುವುದು ಅವರ ವಿಶ್ವಾಸದ ಮಾತು.

‘ಬಸವರಾಜು ಅವರು ಓದಿದ್ದು ತುಂಬಾ ಕಡಿಮೆ. ಆದರೆ, ಕೃಷಿ ಮೇಳಗಳ ಮೂಲಕ ಅವರು ಕೃಷಿ ಬಗ್ಗೆ ತುಂಬಾ ಕಲಿತು ಕೊಂಡಿದ್ದಾರೆ. ಹಾಗಾಗಿ ಅವರು ಸದಾ ಪ್ರಯೋಗಶೀಲತೆ ಇರುವ ನಮ್ಮ ಗ್ರಾಮದ ರೈತ’ ಎನ್ನುತ್ತಾರೆ ಗ್ರಾಮದ ನಿವಾಸಿ ಜಯಸಿಂಹ.

"ಕೃಷಿಯಿಂದ ಯಾವ ರೈತನೂ ಹಾಳಾಗಲಾರ. ಕೃಷಿ ನಂಬಿ ಯಾರೂ ಕೆಡುವುದಿಲ್ಲ. ಆಧುನಿಕ ಜಗತ್ತಿನ ಜೊತೆ ಹೆಜ್ಜೆ ಹಾಕಿ ಕೃಷಿಯನ್ನು ಬಳಸಿಕೊಂಡರೆ ಕೈ ತುಂಬಾ ಸಂಪಾದನೆ ಮಾಡಬಹುದು.

- ಬಸವರಾಜು, ಬ್ಯಾತ ಗ್ರಾಮದ ರೈತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು