ಶನಿವಾರ, ಫೆಬ್ರವರಿ 4, 2023
18 °C

ಮುರುಘಾ ಶರಣರ ಬಂಧನಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಚಿತ್ರದುರ್ಗ ಮುರುಘಾಮಠದ ಪೀಠಾಧ್ಯಕ್ಷ ಶಿವಮೂರ್ತಿ ಶರಣರನ್ನು ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ದಸಂಸ ಒಕ್ಕೂಟದ ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷ ಡಾ.ಆರ್‌.ಮೋಹನ್‌ರಾಜ್‌ ಒತ್ತಾಯಿಸಿದ್ದಾರೆ.

ಪೋಕ್ಸೋ ಕಾಯ್ದೆ ಮತ್ತು ದೌರ್ಜನ್ಯ ತಡೆ ಕಾಯ್ದೆ 1989 ರ ಅನ್ವಯ ಪ್ರಕರಣ ದಾಖಲಾದ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿ ಮಹಾನಗರ ಮ್ಯಾಜಿಸ್ಟ್ರೇಟ್‌ ಅಥವಾ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ಅವರ ಸಮ್ಮುಖದಲ್ಲಿ ಹಾಜರುಪಡಿಸಬೇಕು. 164(5ಎ) ಸಿಆರ್‌ಪಿಸಿ ಹಾಗೂ ಸರ್ಕಾರಿ ಮಹಿಳಾ ವೈದ್ಯರ ಸಮ್ಮಖದಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಇದೇ ರೀತಿ ದೂರಿಗೆ ಸಂಬಂಧಿಸಿದಂತೆ ಯಾರ ವಿರುದ್ಧ ದೂರು ನೀಡಲಾಗಿದೆಯೋ ಅವರನ್ನು ಸಹ ಕೂಡಲೇ ಪೊಲೀಸ್‌ ವಶಕ್ಕೆ ಪಡೆದು ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.

ಆದರೆ, ರಾಜ್ಯ ಸರ್ಕಾರ ಬಲಾಢ್ಯರಿಗೆ ಒಂದು ಕಾನೂನು, ಬಡವರಿಗೆ ಒಂದು ಕಾನೂನು ಎಂಬಂತೆ ವರ್ತಿಸುತ್ತಿದೆ. ಪೊಲೀಸ್‌ ಕೂಡ ಕಾನೂನು ಮತ್ತು ಕರ್ತವ್ಯವನ್ನು ಮರೆತಿದೆ. ಈ ಮಧ್ಯೆ ಮುರುಘಾ ಶರಣರು ಬಹಿರಂಗವಾಗಿ ಹೇಳಿಕೆ ನೀಡಿ, ಈ ನೆಲದ ಕಾನೂನು ಗೌರವಿಸುವುದಾಗಿ ಹೇಳಿದ್ದಾರೆ. ದಲಿತ ಹೆಣ್ಣು ಮಕ್ಕಳು ಬಲಾಢ್ಯರ ಸ್ವತ್ತಲ್ಲಾ. ಈ ಸಂಬಂಧವಾಗಿ ಸರ್ಕಾರ ನಿರ್ಲಕ್ಷ್ಯ ತೋರಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮುರುಘಾ ಶರಣರನ್ನು ಕೂಡಲೇ ಪೊಲೀಸ್‌ ವಶಕ್ಕೆ ಪಡೆದು ಸಂತ್ರಸ್ತ ಹೆಣ್ಣು ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಪೊಲೀಸ್‌ ರಕ್ಷಣೆ ನೀಡಬೇಕು ಎಂದು ಎಸ್‌ಸಿ– ಎಸ್‌ಟಿ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ದಲಿತ ಮಾನಹಕ್ಕು ಸಮಿತಿ ರಾಜ್ಯ ಸಂಚಾಲಕರು ಬಸವರಾಜ್‌ ಕೌತಾಳ್‌, ಡಿಎಎಸ್‌ ಗೋಪಾಲಕೃಷ್ಣ ಹರಳಹಳ್ಳಿ, ಡಿಎಸ್‌ಎಸ್‌ ರಾಜ್ಯ ಅಧ್ಯಕ್ಷರು ವೆಂಕಟಗಿರಿಯಯ್ಯ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು