ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಬಿಬಿಎಂಪಿಯಿಂದ ರಸ್ತೆಗಳಲ್ಲಿ ಡಕ್ಟ್‌ ಅಳವಡಿಕೆ –ತುಷಾರ್‌ ಗಿರಿನಾಥ್‌

Published 20 ನವೆಂಬರ್ 2023, 16:19 IST
Last Updated 20 ನವೆಂಬರ್ 2023, 16:19 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರ ವ್ಯಾಪ್ತಿಯಲ್ಲಿ ಡಕ್ಟ್‌ ಮಾದರಿಯಲ್ಲಿ ದೊಡ್ಡ ಅಳತೆಯ ಪೈಪ್‌ಗಳನ್ನು ರಸ್ತೆಗಳಲ್ಲಿ ಅಳವಡಿಸಿ, ಅದನ್ನು ದೂರಸಂಪರ್ಕ ಅಥವಾ ಕೇಬಲ್‌ ಸಂಸ್ಥೆಗಳಿಗೆ ಬಾಡಿಗೆ ಆಧಾರದಲ್ಲಿ ನೀಡಲು ಬಿಬಿಎಂಪಿ ಯೋಜಿಸಿದೆ’ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

‘ವೈಟ್‌ಟಾಪಿಂಗ್‌ ಹಾಗೂ ಕೆಲವು ಪ್ರಮುಖ ರಸ್ತೆಗಳಲ್ಲಿ ಡಕ್ಟ್‌ ವ್ಯವಸ್ಥೆ ಇದೆ. ಇತರೆ ರಸ್ತೆಗಳಲ್ಲಿ ಈ ವ್ಯವಸ್ಥೆಯಿಲ್ಲ. ಹೀಗಾಗಿ ಹಲವು ಸಂಸ್ಥೆಗಳು ಕೇಬಲ್‌ ಅಥವಾ ಒಎಫ್‌ಸಿ ಅಳವಡಿಸಲು ರಸ್ತೆ ಅಗೆಯುತ್ತಿರುತ್ತವೆ. ಇದನ್ನು ತಪ್ಪಿಸಲು ಯೋಜಿಸಲಾಗಿದೆ’ ಎಂದು ಸುದ್ದಿಗಾರರಿಗೆ ಸೋಮವಾರ ಮಾಹಿತಿ ನೀಡಿದರು.

‘ರಸ್ತೆಯಲ್ಲಿ ದೊಡ್ಡ ಅಳತೆಯ ಪೈಪ್‌ ಅಳವಡಿಸುವುದರಿಂದ ಮತ್ತೆ ಮತ್ತೆ ರಸ್ತೆ ಅಗೆಯುವುದು ತಪ್ಪುತ್ತದೆ. ಆದ್ದರಿಂದ ಬಿಬಿಎಂಪಿ ವತಿಯಿಂದಲೇ ಪೈಪ್‌ ಅಳವಡಿಸಲು ಯೋಜಿಸಲಾಗಿದೆ. ಈ ಯೋಜನೆಗೆ ಸದ್ಯದಲ್ಲಿಯೇ ಟೆಂಡರ್‌ ಕರೆಯಲಾಗುತ್ತದೆ’ ಎಂದರು.

‘ಬಿಬಿಎಂಪಿಗೆ ಹೋಲಿಸಿದರೆ ಬೆಸ್ಕಾಂ, ನಗರದಲ್ಲಿ ಡಕ್ಟ್‌ ಮೂಲಕ ಹೆಚ್ಚು ಕೇಬಲ್ ಅಳವಡಿಸಿದೆ. ಸುಮಾರು 400 ಕಿ.ಮೀ ಡಕ್ಟ್‌ ಇದೆ. ಬಿಬಿಎಂಪಿಯ ಕೆಲವು ರಸ್ತೆಗಳಲ್ಲಿ ಡಕ್ಟ್‌ ಇವೆ. ಇದರಲ್ಲೇ ಒಎಫ್‌ಸಿ ಹಾಗೂ ಕೇಬಲ್‌ ಸಂಸ್ಥೆಗಳು ತಮ್ಮ ಕೇಬಲ್‌ಗಳನ್ನು ಅಳವಡಿಸಿಕೊಳ್ಳಬೇಕು. ಇದಲ್ಲದೆ ಬೇರೆಡೆ ಕೇಬಲ್‌ ಅಳವಡಿಸಲು ಅವಕಾಶವಿಲ್ಲ’ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

‘ಪಾದಚಾರಿ ಮಾರ್ಗ ಹಾಗೂ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಕೇಬಲ್‌ಗಳನ್ನು ಮಹದೇವಪುರ ವಲಯ ಸೇರಿದಂತೆ ನಗರ ಹಲವೆಡೆ ತೆರವುಗೊಳಿಸಲಾಗುತ್ತಿದೆ. ಈ ಬಗ್ಗೆ ಕೇಬಲ್‌ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. ಅನಧಿಕೃತ ಕೇಬಲ್‌ ಅವರೇ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಾವು ತೆರವು ಮಾಡುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT