ಬೆಂಗಳೂರು: ನಗರದಲ್ಲಿ ಸೋಮವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ರಸ್ತೆ ಚರಂಡಿ ಹಾಗೂ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ, ಕೆಲವು ಪ್ರದೇಶಗಳು, ಹಲವು ರಸ್ತೆಗಳು ಜಲಾವೃತವಾಗಿದ್ದವು. ಮಧ್ಯಾಹ್ನದವರೆಗೂ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.
ನಗರದ ಪೂರ್ವ ಭಾಗದಲ್ಲಿ ಅತಿ ಹೆಚ್ಚಿನ ಮಳೆಯಾಗದಿದ್ದರೂ, ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಬಹಳಷ್ಟು ತೊಂದರೆಯಾಯಿತು. ರಾಜಕಾಲುವೆ ಒತ್ತುವರಿ ಹಾಗೂ ಕಟ್ಟಡ ತ್ಯಾಜ್ಯ, ಇತರೆ ತ್ಯಾಜ್ಯ ತುಂಬಿಕೊಂಡಿದ್ದರಿಂದ ನೀರು ಹರಿಯಲು ಸಾಧ್ಯವಾಗದೆ ಕೆಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು.
ರಾಮಮೂರ್ತಿನಗರದಿಂದ ಕಸ್ತೂರಿನಗರ, ಬಿಎಚ್ಇಎಲ್– ಕಿಮ್ಕೊ ಜಂಕ್ಷನ್, ಬನ್ನೇರುಘಟ್ಟ ರಸ್ತೆಯ ಜಯದೇವ ಆಸ್ಪತ್ರೆ ಬಳಿಯ ಕೆಳಸೇತುವೆಯ ಎರಡೂ ಬದಿ, ರೂಪೇನ ಅಗ್ರಹಾರದಿಂದ ರೇಷ್ಮೆ ಮಂಡಳಿ, ಎಂ.ಎಸ್. ಪಾಳ್ಯದಿಂದ ಯಲಹಂಕ, ಹೊರ ವರ್ತುಲ ರಸ್ತೆಯ ಮಾರತ್ ಹಳ್ಳಿ, ಕಾರ್ತಿಕ್ ನಗರ, ಕಲ್ಯಾಣನಗರ, ಪುಟ್ಟೇನಹಳ್ಳಿ, ವರ್ತೂರು ಕೋಡಿ, ಸಕ್ರಾ ಆಸ್ಪತ್ರೆಯಿಂದ ಬೆಳ್ಳಂದೂರು, ನಾಗವಾರ ಜಂಕ್ಷನ್, ಹೆಬ್ಬಾಳ– ಹೊರ ವರ್ತುಲ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಎಸ್ಟೀಮ್ ಮಾಲ್‌ನಿಂದ ಮೇಖ್ರಿ ವೃತ್ತ, ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ರಸ್ತೆಯಿಂದ ವೀರಸಂದ್ರದವರೆಗಿನ ರಸ್ತೆಗಳಲ್ಲಿ ಸೋಮವಾರ ಮಧ್ಯಾಹ್ನದವರೆಗೂ ನೀರು ನಿಂತಿತು. ಇದರಿಂದಾಗಿ ವಾಹನ ಸಂಚಾರ ನಿಧಾನಗತಿಯಲ್ಲಿತ್ತು.
ಕೆ.ಆರ್. ಮಾರುಕಟ್ಟೆಯ ನೆಲ ಮಾಳಿಗೆಯಲ್ಲಿ(ಸೆಲ್ಲಾರ್) ಸುಮಾರು ಎರಡು ಅಡಿ ಮಳೆ ನೀರು ತುಂಬಿಕೊಂಡು, ವ್ಯಾಪಾರರು ಸಂಗ್ರಹಿಸಿದ್ದ ತರಕಾರಿಗೆ ಹಾನಿಯಾಯಿತು.
ಬಾಣಸವಾಡಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಸೋಮವಾರ ಬೆಳಿಗ್ಗೆ ತೆರಳುತ್ತಿದ್ದ ಆರು ಜನರ ಮೇಲೆ ಮರವೊಂದರ ರೆಂಬೆಗಳು ಬಿದ್ದು ಗಾಯಗಳಾಗಿವೆ. ಎಲ್ಲರಿಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.
ಸುಬ್ಬಣ್ಣಪಾಳ್ಯ ನಿವಾಸಿ ಮಾಣಿಕ್ಯ ವೇಲು ಅವರ ಮೇಲೆ ಕೊಂಬೆ ಬಿದ್ದು, ಮೂರು ಪಕ್ಕೆಲುಬುಗಳು ಮುರಿದಿವೆ. ಬೆನ್ನು ಮೂಳೆಗೂ ಪೆಟ್ಟಾಗಿದೆ. ಇವರೊಂದಿಗಿದ್ದ ಒಂಬತ್ತು ವರ್ಷದ ಹರಿಣಿ ಮತ್ತು 13 ವರ್ಷದ ಭವಧರನ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಸುಬ್ಬಣ್ಣಪಾಳ್ಯ ನಿವಾಸಿ ವಿಶಾಲಾಕ್ಷಿ ಅವರು 13 ವರ್ಷದ ಪ್ರಣತಿ ಹಾಗೂ ಏಳು ವರ್ಷದ ತನಿಷ್ಕ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ, ಮರದ ಕೊಂಬೆ ಬಿದ್ದು ವಿಶಾಲಾಕ್ಷಿ ಅವರಿಗೆ ತೊಡೆಯ ಭಾಗದ ಮೂಳೆ ಮುರಿದಿದೆ. ಪ್ರಣತಿ ಮತ್ತು ತನಿಷ್ಕ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವರ ನೀಡಿದ್ದಾರೆ.
21 ಮರ ಧರೆಗೆ: ನಗರದಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರದ ಸಂಜೆವರೆಗೆ 21 ಮರಗಳು ಧರೆಗುರುಳಿವೆ. ಯಲಹಂಕ ವಲಯದಲ್ಲಿ ಏಳು, ಪಶ್ಚಿಮದಲ್ಲಿ ಐದು, ಪೂರ್ವದಲ್ಲಿ ನಾಲ್ಕು, ದಕ್ಷಿಣ, ರಾಜರಾಜೇಶ್ವರಿನಗರದಲ್ಲಿ ತಲಾ ಎರಡು, ದಾಸರಹಳ್ಳಿ ವಲಯದಲ್ಲಿ ಒಂದು ಮರ ಉರುಳಿದೆ. 31 ಸ್ಥಳಗಳಲ್ಲಿ ಮರದ ಕೊಂಬೆಗಳು ಬಿದ್ದಿವೆ.
ಪೂರ್ವ ವಲಯ:
* ಬಾಣಸವಾಡಿ ಮಾರುತಿ ಸೇವಾನಗರದ ಬಳಿ ದ್ವಿಚಕ್ರ ವಾಹನಗಳ ಮೇಲೆ ಮರದ ರೆಂಬೆಗಳು ಬಿದ್ದು, ನಾಲ್ವರಿಗೆ ಗಾಯಗಳಾಗಿವೆ. ಅವರಿಗೆ ಬಾಣಸವಾಡಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
* ಕಾಕ್ಸ್‌ಟೌನ್ ಸರ್ಕಾರಿ ಶಾಲೆಗೆ ನುಗ್ಗಿದ್ದ ನೀರನ್ನು ಹೊರಹರಿಸಲು, ಪಾಲಿಕೆ ಸಿಬ್ಬಂದಿ ಕಾಲುವೆ ಸ್ವಚ್ಛತಾ ಕಾರ್ಯ ನಡೆಸಿದರು.
* ನಾಗವಾರ ಜಂಕ್ಷನ್ ಎಚ್.ಬಿ.ಆರ್ ಲೇಔಟ್ 5ನೇ ಬ್ಲಾಕ್ ಸಮೀಪ ರಾಜಕಾಲುವೆಯಲ್ಲಿ ನೀರು ತುಂಬಿಕೊಂಡಿತ್ತು. ತ್ಯಾಜ್ಯ ತೆರವು ಮಾಡಿ ನೀರು ಹರಿಯುವಂತೆ ಮಾಡಲಾಯಿತು.
ಪಶ್ಚಿಮ ವಲಯ:
* ಕೆ.ಆರ್. ಮಾರುಕಟ್ಟೆ ನೆಲ ಮಾಳಿಗೆಯಲ್ಲಿ ನಿಂತಿದ್ದ ನೀರನ್ನು ಮೋಟಾರ್ ಪಂಪ್‌ನೊಂದಿಗೆ ಹೊರ ಹರಿಸಲಾಯಿತು.
* ಚಿಕ್ಕಪೇಟೆ ಮೆಟ್ರೊ ನಿಲ್ದಾಣದ ಮುಂಭಾಗ, ಬಿವಿಕೆ ಅಯ್ಯಂಗಾರ್ ರಸ್ತೆ, ಓಕಳಿಪುರಂ ಕೆಳಸೇತುವೆಯಲ್ಲಿ ನಿಂತಿದ್ದ ನೀರನ್ನು ಚರಂಡಿ ಸ್ವಚ್ಛಗೊಳಿಸಿ ಹರಿಯುವಂತೆ ಮಾಡಲಾಯಿತು.
ಯಲಹಂಕ ವಲಯ:
* ಅಮೃತಹಳ್ಳಿ ಕೆರೆ ಬಳಿ ಭುವನೇಶ್ವರಿ ನಗರ ಹಾಗೂ ಮುನಿಸ್ವಾಮಪ್ಪ ಲೇಔಟ್‌ನಲ್ಲಿ ಕೆಲವು ಮನೆಗಳಿಗೆ ನುಗ್ಗಿದ್ದ ನೀರು ಹೊರ ಹರಿಸಲು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
* ಜಕ್ಕೂರು ಕೆಳ ಸೇತುವೆ, ಕೋಗಿಲು ಮುಖ್ಯರಸ್ತೆ, ಹೆಬ್ಬಾಳ ಜಂಕ್ಷನಲ್ಲಿ ನಿಂತಿದ್ದ ನೀರನ್ನು ಕಾಲುವೆಯಲ್ಲಿ ಹರಿಯಲು ಅನುವು ಮಾಡಿಕೊಡಲಾಯಿತು.
ಮಹದೇವಪುರ ವಲಯ:
* ತೂಬರಹಳ್ಳಿ ಹತ್ತಿರ ಗೋಡೆ ಕುಸಿದು ಬೇಸ್‌ಮೆಂಟ್ ನುಗ್ಗಿದ್ದ ನೀರನ್ನು ಹೊರ ಹರಿಸಲಾಯಿತು.
* ಬಳಗೆರೆ ಮುಖ್ಯರಸ್ತೆ, ಸೀಗೇಹಳ್ಳಿ ರಸ್ತೆಯಲ್ಲಿದ್ದ ನೀರು ತೆರವುಗೊಳಿಸಲಾಯಿತು.
ದಕ್ಷಿಣ ವಲಯ:
* ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿಯ ಮುಖ್ಯರಸ್ತೆ, ಕಲಾಸಿಪಾಳ್ಯ ಮಾರುಕಟ್ಟೆ ಮುಖ್ಯರಸ್ತೆ, ಜಯದೇವ ಕೆಳಸೇತುವೆ ಬಳಿ ನೀರು ಹರಿಯಲು ಅನುವು ಮಾಡಿಕೊಡಲಾಯಿತು.
ಆರ್.ಆರ್ ನಗರ ವಲಯ:
* ಜೆ.ಪಿ ಪಾರ್ಕ್ ಸಮೀಪದ ಸಾಯಿ ಬಾಬ ದೇವಸ್ಥಾನ ರೈಲ್ವೆ ಅಂಡರ್ ಪಾಸ್ ನಲ್ಲಿ ನಿಂತಿರುವ ನೀರನ್ನು ತೆರವುಗೊಳಿಸಲಾಗಿದೆ.
ಸಂಪಂಗಿರಾಮನಗರ, ಕೆಂಗೇರಿ, ಮಾರುತಿಮಂದಿರ, ಹೊರಮಾವು, ನಾಗರಬಾವಿ, ಹೊರಮಾವು, ಉತ್ತರಹಳ್ಳಿ, ಹೆಮ್ಮಿಗೆಪುರ, ಬೊಮ್ಮನಹಳ್ಳಿ, ಕುಶಾಲನಗರ, ಬಸವನಗಪುರ, ನಂದಿನಿ ಲೇಔಟ್, ಮಾರತ್‌ಹಳ್ಳಿ, ಕೊನೇನ ಅಗ್ರಹಾರ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ಅಂಜನಾಪುರ, ರಾಜಮಹಲ್ ಗುಟ್ಟಹಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿ ಮೂರರಿಂದ ನಾಲ್ಕು ಸೆಂ.ಮೀಟರ್ ಮಳೆಯಾಗಿದೆ.
ದಯಾನಂದ ನಗರ, ಬೇಗೂರು, ಗೊಟ್ಟಿಗೆರೆ, ವನ್ನಾರ್‌ಪೇಟೆ, ಕೋರಮಂಗಲ, ರಾಜಾಜಿನಗರ, ಕೃಷ್ಣರಾಜಪುರ, ಸಿಂಗಸಂದ್ರ, ಕೋಣನಕುಂಟೆ, ಸಿಂಗಸಂದ್ರ, ಕಾಡುಗೋಡಿ, ಎಚ್. ಗೊಲ್ಲಹಳ್ಳಿ, ಪೀಣ್ಯ ಕೈಗಾರಿಕೆ ಪ್ರದೇಶ, ದೊಡ್ಡಬಿದರಕಲ್ಲು, ಬಾಗಲಕುಂಟೆ, ಯಶವಂತಪುರ, ಶೆಟ್ಟಿಹಳ್ಳಿ, ಬೆಳ್ಳಂದೂರು, ಬೆನ್ನಿಗಾನಹಳ್ಳಿ, ರಾಮಮೂರ್ತಿನಗರ, ಕೆಂಗೇರಿ, ದೊಮ್ಮಲೂರು, ಹೊಯ್ಸಳನಗರ, ಹೇರೋಹಳ್ಳಿ, ವಿಜ್ಞಾನನಗರ, ಕಮ್ಮನಹಳ್ಳಿ, ಚೊಕ್ಕಸಂದ್ರ ಪ್ರದೇಶಗಳಲ್ಲಿ ಒಂದು ಸೆಂ. ಮೀನಿಂದ ಎರಡು ಮೂರು ಸೆಂ.ಮೀನಷ್ಟು ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.