ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಕಿಂಗ್ ನೀತಿ ಜಾರಿಗೊಳಿಸಿ: ಬಿಬಿಎಂಪಿಗೆ ನಿರ್ದೇಶನ ನೀಡಿದ ಹೈಕೋರ್ಟ್

Published 22 ಮೇ 2024, 16:07 IST
Last Updated 22 ಮೇ 2024, 16:07 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಮಹಾ ನಗರದಲ್ಲಿ ವಾಹನ ನಿಲುಗಡೆ ನೀತಿ 2.0 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

‘ಪಾರ್ಕಿಂಗ್ ನೀತಿಯನ್ನು ಯಾವ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂಬುದರ ಕುರಿತಾದ ವಿಸ್ತೃತ ಯೋಜನಾ ವರದಿಯನ್ನು ಜೂನ್ 20ರೊಳಗೆ ಕೋರ್ಟ್‌ಗೆ ಸಲ್ಲಿಸಬೇಕು‘ ಎಂದು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದೆ.

ಈ ಸಂಬಂಧ ಎಚ್‌.ಎಸ್‌.ಆರ್‌. ಬಡಾವಣೆಯ ನಾಗಭೂಷಣ ರೆಡ್ಡಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಭಾಗಶಃ ಮಾನ್ಯ ಮಾಡಿದೆ.

‘ಪಾರ್ಕಿಂಗ್‌ ನೀತಿಯು 2.0, 2020ರ ಡಿಸೆಂಬರ್‌ನಿಂದಲೂ ಚಾಲ್ತಿಯಲ್ಲಿದೆ. ಅದರಂತೆ ಬಿಬಿಎಂಪಿ ವಾಹನ ನಿಲುಗಡೆ ಪ್ರದೇಶ, ವಾಹನ ನಿಲುಗಡೆ ಶುಲ್ಕ, ಬೀದಿ ಬದಿ ಪಾರ್ಕಿಂಗ್‌ ವ್ಯವಸ್ಥೆ ಉತ್ತಮಗೊಳಿಸುವುದು, ಪೈಲಟ್‌ ಪರ್ಮಿಟ್‌ ವ್ಯವಸ್ಥೆ ಆರಂಭಿಸುವುದೂ ಸೇರಿದಂತೆ ಹಲವು ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಈತನಕ ಬಿಬಿಎಂಪಿ ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಿಲ್ಲ. ಬಿಬಿಎಂಪಿ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯದ ನಿಷ್ಕ್ರಿಯತೆಯಿಂದಾಗಿ ಸಾರ್ವಜನಿಕರು ಅನಗತ್ಯ ತೊಂದರೆ ಎದುರಿಸುವಂತಾಗಿದೆ’ ನ್ಯಾಯಪೀಠ ಹೇಳಿದೆ.

‘ಕಟ್ಟಡ ಬೈ-ಲಾ ಪ್ರಕಾರ ನಿರ್ಮಾಣವಾಗುವ ಪ್ರತಿಯೊಂದು ವಸತಿ ಸಮುಚ್ಚಯದಲ್ಲೂ ಪಾರ್ಕಿಂಗ್‌ ಜಾಗವನ್ನು ಒದಗಿಸಬೇಕಾಗುತ್ತದೆ. ಜತೆಗೆ ಬೆಂಗಳೂರು ಮಹಾ ನಗರದಲ್ಲಿನ ವಸತಿ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಪಾರ್ಕಿಂಗ್‌ ಸಮಸ್ಯೆ ಮಾಮೂಲಾಗಿದೆ. ಇದೇ ಕಾರಣಕ್ಕೆ ಕೆಲವು ಖಾಲಿ ನಿವೇಶನ ಹೊಂದಿರುವವರು ಪಾರ್ಕಿಂಗ್‌ಗೆ ಅವಕಾಶ ನೀಡುವ ವಿನೂತನ ಉಪಾಯ ಕಂಡುಕೊಂಡು ಹಣ ಸಂಪಾದಿಸುತ್ತಿದ್ದಾರೆ. ಇಂತಹ ಕ್ರಮಗಳಿಗೆ ಬಿಬಿಎಂಪಿ ಕಡಿವಾಣ ಹಾಕಬೇಕು’ ಎಂದು ನ್ಯಾಯಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT