ಗುರುವಾರ , ಜನವರಿ 23, 2020
19 °C
* ನಿಷೇಧಾಜ್ಞೆ ವೇಳೆಯೇ ಹೋರಾಟ * ಮಾರಕಾಸ್ತ್ರ ಹಿಡಿದು ಗಲಭೆ ಆರೋಪ

ಪ್ರತಿಭಟಿಸಿದ್ದವರ ವಿರುದ್ಧ ಎಂಟು ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಷೇಧಾಜ್ಞೆ ಜಾರಿಯಲ್ಲಿರುವ ವೇಳೆ ಹೋರಾಟ ನಡೆಸಿದ್ದ ಪ್ರತಿಭಟನಕಾರರ ವಿರುದ್ಧ ನಗರದ ಪೊಲೀಸರು ಸ್ವಯಂಪ್ರೇರಿತವಾಗಿ ಎಂಟು ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ನಗರದ ಪುರಭವನ ಸೇರಿದಂತೆ ಹಲವೆಡೆ ಪ್ರತ್ಯೇಕ ಗುಂಪುಗಳು ಗುರುವಾರ ಪ್ರತಿಭಟನೆ ನಡೆಸಿದ್ದವು. ಅದೇ ವೇಳೆ ಕೆಲ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದರು.

ಅನುಮತಿ ಇಲ್ಲದೇ ಗುಂಪು ಕೂಡುವುದು (ಐಪಿಸಿ 143), ದೊಂಬಿ (ಐಪಿಸಿ 147), ಮಾರಕಾಸ್ತ್ರಗಳನ್ನು ಹಿಡಿದು ಗಲಭೆ (ಐಪಿಸಿ 148), ಎರಡು ಧರ್ಮಗಳ ಜನರ ನಡುವೆ ವೈಷಮ್ಯ ಸೃಷ್ಟಿಸಲು ಯತ್ನಿಸಿದ (ಐಪಿಸಿ 153) ಹಾಗೂ ಸರ್ಕಾರಿ ಅಧಿಕಾರಿಯ ಆದೇಶ ಪಾಲಿಸದ (ಐಪಿಸಿ 188) ಆರೋಪದಡಿ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಹಲಸೂರು ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಹಾಗೂ ಎಸ್‌.ಜೆ.ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಇದುವರೆಗೂ 50ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು, ಹಲವರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸಿಪಿಐಎಂ ಮುಖಂಡರಾದ ಕೆ.ಎನ್.ಉಮೇಶ್, ಲೀಲಾವತಿ, ವರಲಕ್ಷ್ಮಿ, ಗೌರಮ್ಮ, ಗೌರಿ ಕೃಷ್ಣ ಹಾಗೂ ಇತರರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಪುರಭವನ ಎದುರು ಗುರುವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದ್ದ ಜಬೀವುಲ್ಲಾ, ಇರ್ಷಾದ್ ಪಾಷ್‌ ಸೇರಿದಂತೆ 21 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣದ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಎಸ್‌.ಜೆ.ಪಿ ರಸ್ತೆಯ ದಾಸಪ್ಪ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದ ಹರುಮ್ ರಷೀದ್, ಸುಧಾ ನಾಗರಾಜ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಎನ್.ಆರ್. ರಸ್ತೆಯ ಆಂಧ್ರ ಬ್ಯಾಂಕ್ ಎದುರು ಹಾಗೂ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದ ಎದುರು ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದಾರೆ’ ಎಂದರು.

‘ಪ್ರತಿಭಟನಾ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್‌ಸ್ಪೆಕ್ಟರ್‌ ತನ್ವೀರ್‌ ಅಹ್ಮದ್, ಎಎಸ್‌ಐಗಳಾದ ಎನ್‌.ಮುನಿಯಪ್ಪ, ವಸಂತಕುಮಾರ್ ಹಾಗೂ ಎಚ್‌.ಬಿ. ಚಂದ್ರೇಗೌಡ ಅವರೇ ದೂರುದಾರರಾಗಿದ್ದಾರೆ. ಪ್ರತಿಭಟನೆಯ ವಿಡಿಯೊ ಹಾಗೂ ಫೋಟೊಗಳ ಆಧಾರದಲ್ಲಿ ಆರೋಪಿಗಳ ಗುರುತು ಪತ್ತೆ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು