ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜೀಪುರ ಮೇಲ್ಸೇತುವೆ: ಶೇ 45 ಕಾಮಗಾರಿ ಪೂರ್ಣ

ಕಾಮಗಾರಿ ಪರಿಶೀಲಿಸಿದ ಮಂಜುನಾಥ ಪ್ರಸಾದ್‌
Last Updated 18 ಸೆಪ್ಟೆಂಬರ್ 2020, 20:14 IST
ಅಕ್ಷರ ಗಾತ್ರ

ಬೆಂಗಳೂರು: ಕೋರಮಂಗಲ ಸೋನಿ ವರ್ಲ್ಡ್ ಜಂಕ್ಷನ್ ಬಳಿ ನಡೆಯುತ್ತಿರುವ ಮೇಲ್ಸೇತುವೆ (ಎಲಿವೇಟೆಡ್ ಕಾರಿಡಾರ್) ಕಾಮಗಾರಿಯನ್ನು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಶುಕ್ರವಾರ ಪರಿಶೀಲನೆ ನಡೆಸಿದರು.

ಕೊರಮಂಗಲ 100 ಅಡಿ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈಜೀಪುರ ಸಿಗ್ನಲ್‌ನಿಂದ ಕೇಂದ್ರೀಯ ಸದನ ಜಂಕ್ಷನ್‌ನವರೆಗಿನ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಗೆ ವೇಗ ನೀಡಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

’2.5 ಕಿ.ಮಿ ಉದ್ದದ ಮೇಲ್ಸೇತುವೆಯನ್ನು ₹203 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಶೇ 45ರಷ್ಟು ಕಾಮಗಾರಿ ಮುಗಿದಿದೆ. ಶೇ 32 ರಷ್ಟು ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆಗೊಳಿಸಲಾಗಿದ್ದು, ಉಳಿದ ಮೊತ್ತವನ್ನು ಬಿಡುಗಡೆಗೊಳಿಸಲು ಕ್ರಮವಹಿಸಲಾಗುವುದು‘ ಎಂದು ಆಯುಕ್ತರು ತಿಳಿಸಿದರು.

’ಸೇಂಟ್ ಜಾನ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಕಾಲೇಜಿನ ಬಳಿ 1 ರ‍್ಯಾಂಪ್ ಬರಲಿದ್ದು, ಜಾಗ ನೀಡುವಂತೆ ಸೇಂಟ್ ಜಾನ್ಸ್ ಕಾಲೇಜಿನವರಿಗೆ ವಿನಂತಿಸಲಾಗಿತ್ತು. ಆದರೆ, ಇದುವರೆಗೆ ಜಾಗ ಹಸ್ತಾಂತರ ಮಾಡಿಲ್ಲ. ಈ ಸಂಬಂಧ ಕಾಲೇಜಿನ ಮುಖ್ಯಸ್ಥರ ಜೊತೆ ಸಭೆ ನಡೆಸಿ ಜಾಗ ಪಡೆದು ಕಾಮಗಾರಿಗೆ ವೇಗ ನೀಡಲಾಗುವುದು. ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಪ್ರತಿ ತಿಂಗಳಿಗೊಮ್ಮೆ ಗುತ್ತಿಗೆದಾರರ ಜೊತೆ ಪರಿಶೀಲನಾ ಸಭೆ ನಡೆಸಲಾಗುವುದು‘ ಎಂದು ಅವರು ತಿಳಿಸಿದರು.

’ಮೇಲ್ಸೇತುವೆಯಲ್ಲಿ ಒಟ್ಟು 81 ಪಿಲ್ಲರ್‌ಗಳು ಇರಲಿದ್ದು, ಈಗಾಗಲೇ 67 ಪಿಲ್ಲರ್‌ಗಳನ್ನು ಅಳವಡಿಸಲಾಗಿದೆ.
ಎಲಿವೇಟೆಡ್‌ ಮಾರ್ಗದಲ್ಲಿ 7 ಜಂಕ್ಷನ್‌ಗಳು ಬರಲಿದ್ದು, 4 ರ‍್ಯಾಂಪ್‌ಗಳನ್ನು ಅಳವಡಿಸಲಾಗುತ್ತಿದೆ. ರಸ್ತೆಯ ಎರಡು ಬದಿಯಲ್ಲಿ ತಲಾ ಎರಡು ಪಥಗಳು ಬರಲಿವೆ. ಮೇಲ್ಸೇತುವೆ ಮಾರ್ಗದಲ್ಲಿ 25 ಮರಗಳನ್ನು ಸ್ಥಳಾಂತರಿಸಲಾಗುವುದು. ರಸ್ತೆ ಮಾರ್ಗದಲ್ಲಿ ಬರುವ 83 ಮರಗಳ ರೆಂಬೆ-ಕೊಂಬೆಗಳನ್ನು ಕತ್ತರಿಸಲಾಗುವುದು‘ ಎಂದರು.

ಶಾಸಕ ರಾಮಲಿಂಗಾ ರೆಡ್ಡಿ ಮಾತನಾಡಿ, ’ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ರಸ್ತೆ ದುರಸ್ತಿ ಮಾಡಬೇಕು. ಪಾದಚಾರಿ ಮಾರ್ಗ, ರಸ್ತೆ ಇಕ್ಕೆಲಗಳಲ್ಲಿರುವ ಮೋರಿಯಲ್ಲಿ ಹೂಳು ತೆಗೆಯಬೇಕು ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸಬೇಕು’ ಎಂದರು. ದುರಸ್ತಿ ಕಾಮ
ಗಾರಿ ನಡೆಸುವಂತೆ, ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ಆಯುಕ್ತರು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT