ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಪ್ರಗತಿಗೆ ಸಮುದಾಯ ಕಿಚನ್ ಅಗತ್ಯ: ಶಾಲಿನಿ

ಎಸಿಎಸ್‌ ಶಾಲಿನಿ ರಜನೀಶ್ ಅಭಿಮತ
Last Updated 18 ಮಾರ್ಚ್ 2023, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ಮನೆಯಲ್ಲಿ ಕುಟುಂಬದ ಸದಸ್ಯರ ಆರೈಕೆ, ಅಡುಗೆ ಸೇರಿ ವಿವಿಧ ಕೆಲಸಗಳಿಂದ ಮಹಿಳೆಯರು ಔದ್ಯೋಗಿಕ ಕ್ಷೇತ್ರದಲ್ಲಿ ಪ್ರಗತಿ ಹೊಂದಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಥಾಯ್ಲೆಂಡ್‌ ಮಾದರಿಯಲ್ಲಿ ಇಲ್ಲಿಯೂ ಸಮುದಾಯ ಅಡುಗೆಮನೆಗಳನ್ನು ನಿರ್ಮಿಸಬೇಕಾದ ಅಗತ್ಯತೆ ಇದೆ’ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಲೇಖಕಿಯರ ಸಂಘವು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶೇಷಾದ್ರಿಪುರಂ ಕಾಲೇಜು ಸಹಯೋಗದಲ್ಲಿ ನಗರದಲ್ಲಿ ಶನಿವಾರ ಹಮ್ಮಿಕೊಂಡ ಗಡಿನಾಡು ಪ್ರದೇಶದ ಲೇಖಕಿಯರ ಸಮಾವೇಶದಲ್ಲಿ ಭಾಗವಹಿಸಿ, ಮಾತನಾಡಿದರು.

‘ಥಾಯ್ಲೆಂಡ್‌ನಲ್ಲಿ ಎಲ್ಲೆಡೆ ಸಮುದಾಯ ಅಡುಗೆಮನೆಗಳನ್ನು ನಿರ್ಮಿಸಲಾಗಿದೆ. ಅಲ್ಲಿನ ಮನೆಗಳಲ್ಲಿ ಅಡುಗೆಕೋಣೆಗೆ ಅಷ್ಟಾಗಿ ಆದ್ಯತೆ ನೀಡುವುದಿಲ್ಲ. ಹೊರಗಡೆಯೇ ಆಹಾರ ಸೇವಿಸುತ್ತಾರೆ. ಇದರಿಂದಾಗಿ ಅಲ್ಲಿಯ ಮಹಿಳೆಯರು ಔದ್ಯೋಗಿಕ ಕ್ಷೇತ್ರದಲ್ಲಿ ಶೇ 100ರಷ್ಟು ಪ್ರಗತಿ ಹೊಂದಿದ್ದಾರೆ. ಅದೇ ನಮ್ಮಲ್ಲಿ ಈ ಪ್ರಮಾಣ ಶೇ 30ರಷ್ಟಿದೆ. ಹೆಚ್ಚಿನ ಸಮಯವನ್ನು ಅಡುಗೆಮನೆಗಳಲ್ಲಿ ಕಳೆಯಬೇಕಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಸಮುದಾಯ ಅಡುಗೆಮನೆಗಳ ನಿರ್ಮಾಣದಿಂದ ಸಾಮಾಜಿಕ ಬದಲಾವಣೆ ಸಾಧ್ಯ’ ಎಂದು ಹೇಳಿದರು.

‘ರಾಜ್ಯದಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಶೇ 65ಕ್ಕೆ ತಲುಪಿದೆ. ಲಿಂಗಾನುಪಾತವೂ ಪುರುಷರಿಗೆ ಸಮಾನವಾಗಿ ಇದೆ. ಶೇ 43ರಷ್ಟು ಹೆಣ್ಣು ಮಕ್ಕಳು ತಾಂತ್ರಿಕ ಶಿಕ್ಷಣ ಪಡೆಯುತ್ತಿದ್ದಾರೆ. ಔದ್ಯೋಗಿಕ ಕ್ಷೇತ್ರಕ್ಕೆ ಶೇ 30ರಷ್ಟು ಹೆಣ್ಣು ಮಕ್ಕಳು ಹೋಗುತ್ತಿದ್ದಾರೆ. ಇನ್ನುಳಿದ ಶೇ 70ರಷ್ಟು ಹೆಣ್ಣು ಮಕ್ಕಳು ಮನೆಗಳಲ್ಲಿ ವಿವಿಧ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸದ ಮೌಲ್ಯ ಎಷ್ಟು ಎಂದು ಲೆಕ್ಕ ಹಾಕುತ್ತಿಲ್ಲ. ಅಮೆರಿಕದಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರ ವೇತನ ಬಹುರಾಷ್ಟ್ರೀಯ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಮ. ಗೃಹಿಣಿಯರ ವೇತನವನ್ನು ಲೆಕ್ಕ ಹಾಕಿದರೆ ನಮ್ಮ ರಾಷ್ಟ್ರೀಯ ಉತ್ಪನ್ನ ಶೇ 27ರಷ್ಟು ಹೆಚ್ಚಳ ಆಗುತ್ತದೆ’ ಎಂದು ತಿಳಿಸಿದರು.

ಸಿಗದ ಆದ್ಯತೆ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿ. ಸೋಮಶೇಖರ, ‘ಈವರೆಗೆ ನಡೆದಿರುವ 86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ನಾಲ್ವರು ಮಹಿಳೆಯರಿಗೆ ಮಾತ್ರ ಸಮ್ಮೇಳನಾಧ್ಯಕ್ಷತೆ ದೊರೆತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಸಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರನ್ನು ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸಬೇಕು. ಗಡಿಭಾಗದ ಮಹಿಳೆಯರು ಮಕ್ಕಳಲ್ಲಿ ಕನ್ನಡದ ಪ್ರೀತಿ, ಅಭಿಮಾನವನ್ನು ಹೆಚ್ಚಿಸಬೇಕು’ ಎಂದು ಹೇಳಿದರು.

ಬಳಿಕ ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ನಡೆಯಿತು.

ಬೆಂಗಳೂರಿನಲ್ಲಿ ಸಮ್ಮೇಳನ ಹುಚ್ಚುತನ: ಲೀಲಾದೇವಿ ಆರ್. ಪ್ರಸಾದ್
‘ಗಡಿನಾಡು ಪ್ರದೇಶದ ಲೇಖಕಿಯರ ಸಮಾವೇಶವನ್ನು ಬೆಂಗಳೂರಿನಲ್ಲಿ ಮಾಡುವುದು ಹುಚ್ಚುತನ. ಅಲ್ಲಿನ ಸಮಸ್ಯೆಗಳನ್ನು ಅರಿಯಲು ಮುಂದಿನ ಸಮ್ಮೇಳನವನ್ನಾದರೂ ಆ ಭಾಗದಲ್ಲಿ ಮಾಡಬೇಕು. ಬೆಂಗಳೂರಿಗೆ ಸಂಬಂಧಿಸಿದ ವಿಷಯದ ಬಗ್ಗೆ ಗಡಿನಾಡಿನಲ್ಲಿ, ಗಡಿನಾಡಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೆಂಗಳೂರಿನಲ್ಲಿ ಚರ್ಚಿಸುವುದು ಸೂಕ್ತವಲ್ಲ’ ಎಂದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಹೇಳಿದರು.

‘ಮಹಿಳಾ ಬರಹಗಾರರ ಹಿತದೃಷ್ಟಿಯಿಂದ ಸಂಘವನ್ನು ಸ್ಥಾಪಿಸಲಾಯಿತು. ಆದರೆ, ಈಗ ಮಹಿಳೆಯರು ಸಂಘದ ವಿಚಾರವಾಗಿ ಕೋರ್ಟ್‌ಗೆ ಹೋಗಿರುವುದು ಬೇಸರವನ್ನುಂಟು ಮಾಡಿದೆ. ಅಷ್ಟಕ್ಕೂ ಸಂಘದಲ್ಲಿ ಆಸ್ತಿ ಇದೆಯಾ’ ಎಂದು ಪ್ರಶ್ನಿಸಿದರು.

ಮಹಿಳಾ ತವಕ ತಲ್ಲಣಗಳಿಗೆ ಧ್ವನಿಯಾದ ಕವನ
‘ಅವಳ ಕೆನ್ನೆಯ ಮೇಲೆ ಕಣ್ಣೀರು, ಇವಳ ಕೆನ್ನೆಯ ಮೇಲೂ. ಇಬ್ಬರೂ ಒಂದೇ ಧ್ವನಿಯಾಗಿ ಹೇಳಿದರು.. ಕೊಲೆಗೀಡಾದವರ ಹೆಂಡತಿಯರು ನಾವು, ನಮಗೆ ದಿಕ್ಕು ಯಾರು?...’

ಕರ್ನಾಟಕ ಲೇಖಕಿಯರ ಸಂಘ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಶೇಷಾದ್ರಿಪುರಂ ಕಾಲೇಜು ಕನ್ನಡ ಸಂಘದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ಕವಯಿತ್ರಿ ಸೌಮ್ಯಾ ಕೆ.ಆರ್. ವಾಚಿಸಿದ ಕವನದ ಸಾಲುಗಳು ರೈತರು, ಸೈನಿಕರನ್ನು ನಮ್ಮ ವ್ಯವಸ್ಥೆ ನಡೆಸಿಕೊಳ್ಳುತ್ತಿರುವ ರೀತಿಯ ಪ್ರತಿಫಲನವಾಗಿತ್ತು.

ಒಬ್ಬರ ಪತಿ ರೈತ, ಮತ್ತೊಬ್ಬರ ಪತಿ ಸೈನಿಕ. ಭೂಮಿ ನಂಬಿ ಬದುಕು ಕಟ್ಟಿಕೊಂಡ ರೈತರು ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ, ಗೊಬ್ಬರ ದೊರಕದೇ ಪ್ರತಿಭಟಿಸಿ ಗೋಲಿಬಾರ್‌ಗೆ ಒಳಗಾಗುವ ಸನ್ನಿವೇಶ, ಪ್ರಭುತ್ವದ ಯುದ್ಧದಾಹಕ್ಕೆ ಸೈನಿಕರ ಸಾವು. ಇಂತಹ ಸ್ಥಿತಿಯಲ್ಲಿ ಅವರ ಪತ್ನಿಯರ ಕೆನ್ನೆಯ ಮೇಲೆ ಇದ್ದದ್ದು ಕಣ್ಣೀರೋ? ವ್ಯವಸ್ಥೆ ಮಾಡಿದ ಕೊಲೆಗಳ ಕುರುಹೊ?.. ಎಂದು ಕವನದ ಮೂಲಕ ಪ್ರಶ್ನಿಸಿದರು.

ದೀಪದ ಮಲ್ಲಿ ಅವರ ‘ಇಕಾ, ನೀನ್‌ ಈಟೀಟೆ ಸಾಯ್ತಿ’ ಅನುವಾದಿತ ಕವನ ಬದುಕಿನ ಜಡತ್ವ, ಕೀಳರಿಮೆ ತೊರೆದು, ಸಮಾಜದ ಸಿಕ್ಕುಗಳಿಂದ ಹೊರಬಂದು ಸ್ವಾಭಿಮಾನದಿಂದ, ಪ್ರಾಮಾಣಿಕವಾಗಿ ಬದುಕಲು ಪ್ರಯತ್ನಿಸದೇ ಹೋದರೆ ನಿತ್ಯವೂ ಬದುಕಿದ್ದೂ ಸತ್ತಂತೆ’ ಎಂಬ ಸಂದೇಶ ಸಾರಿತು.

ಅಂಜಲಿ ಬೆಳಗಲ್‌ ಅವರ ‘ಗಡಿನಾಡ ಹೋರಾಟ’ ಮಂಜುಳಾ ಸರ್ಜಾಪುರ ಬಡವನ ಗೋಳು, ಸೌಮ್ಯಾ ಪ್ರವೀಣ್ ಅವರ ‘ಬೇಕಿತ್ತು ಕೋಪಾಗ್ರಹ’, ಜ್ಯೋತಿ ಬಾದಾಮಿ ಅವರ ‘ನಮ್ಮೂರ ಮುಗಿಲಿಗೆ ಸೂರ್ಯನ‌ ಮೇಲೆ ಮುನಿಸು’, ಕೆ.ಎಂ.ವಸುಂಧರ ಕದಲೂರು ಅವರ ‘ಮಾಧವಿಯ ವರ್ಜಿನಿಟಿ’ ಮಧುಪಾಂಡೆ ಮಾನ್ವಿ ಅವರ ‘ನಯವಂಚಕರೇ ತುಂಬಿದ್ದಾರೆ’, ಗೀತಾ ಡಿ.ಸಿ. ಅವರ ‘ಕುಳಿರ್ಗಾಳಿಯ ಬೆಚ್ಚನೆಯ ಪಿಸುಮಾತು’, ಅಸೀಫಾ ಬೇಗಂ ಅವರ ‘ಗಜಲ್‌’, ಚೈತ್ರಾ ಶಿವಯೋಗಿ ಮಠ ಅವರ ‘ಪ್ರತಿಫಲನ’ ಕವನಗಳು ಹೆಣ್ಣಿನ ತಲ್ಲಣ, ಭಾವನೆಗಳು, ಸಮಾಜದ ದೃಷ್ಟಿಕೋನಗಳನ್ನು ಅನಾವರಣಗೊಳಿಸಿದವು.

ದೂರದರ್ಶನ ಕಾರ್ಯಕ್ರಮ ಮುಖ್ಯಸ್ಥೆ ಡಾ.ನಿರ್ಮಲಾ ಎಲಿಗಾರ್ ಆಶಯ ಮಾತುಗಳನ್ನಾಡಿದರು. ಕವಯಿತ್ರಿ ಸುಕನ್ಯಾ ಮಾರುತಿ ಅಧ್ಯಕ್ಷತೆ ವಹಿಸಿದ್ದರು.

***

ಗಡಿ ಕನ್ನಡಿಗರ ಸಾಮಾಜಿಕ, ಶೈಕ್ಷಣಿಕ,ಸಾಂಸ್ಕೃತಿಕ ಸ್ಥಿತಿಗತಿ ಸುಧಾರಿಸಲು ವಿಶೇಷ ಆದ್ಯತೆ ನೀಡಿದೆ. ಸಂಸ್ಕೃತಿ ಬೆಳೆಸದೆ ಬದುಕನ್ನು ಬೆಳಗಿಸಲು ಸಾಧ್ಯವಿಲ್ಲ.
-ಸಿ. ಸೋಮಶೇಖರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT