ಬುಧವಾರ, 10 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಇಲಾಖೆ | ಇ.ವಿ ಬಳಕೆಗೆ ಪ್ರಸ್ತಾವ: ಸಚಿವ ಸುನಿಲ್ ಕುಮಾರ್‌

ದಿಕ್ಸೂಚಿ ವರದಿ ಬಿಡುಗಡೆ ಸಮಾರಂಭದಲ್ಲಿ
Last Updated 9 ಜೂನ್ 2022, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಇಂಧನ ಇಲಾಖೆ ಕಚೇರಿಗಳಲ್ಲಿ ಮುಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ (ಇವಿ) ಬಳಕೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ತಿಳಿಸಿದರು.

ಕರ್ನಾಟಕ ಇವಿ ಜಾಗೃತಿ ಪೋರ್ಟಲ್‌ ಮತ್ತು ಬೆಂಗಳೂರು ನಗರವನ್ನು ಜಾಗತಿಕ ಇವಿ ವಲಯವನ್ನಾಗಿ ಪರಿವರ್ತಿಸುವ ದಿಕ್ಸೂಚಿ ವರದಿ ಬಿಡುಗಡೆ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಈ ಸಂಬಂಧ ಮೂರು ತಿಂಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.

‘ವಿದ್ಯುತ್ ಚಾಲಿತ ವಾಹನಗಳ ಬೆಲೆ, ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬೆಲೆಗಿಂತ ದುಬಾರಿ ಇದೆ. ಹೀಗಾಗಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಇನ್ನೂ ಒಪ್ಪಿಗೆ ದೊರೆತಿಲ್ಲ. ವಿದ್ಯುತ್‌ ಚಾಲಿತ ವಾಹನ ಬಳಸುವುದು ನಮ್ಮ ಇಲಾಖೆಯ ಆದ್ಯತೆಯಾಗಿದ್ದು, ಹಣಕಾಸು ಇಲಾಖೆ ಸಮ್ಮತಿಸಿದರೆ, ಮುಂದಿನ ದಿನಗಳಲ್ಲಿ ಇಂಧನ ಇಲಾಖೆಯ ಎಲ್ಲ ಕಚೇರಿಗಳಲ್ಲೂ ವಿದ್ಯುತ್‌ ಚಾಲಿತ ವಾಹನಗಳನ್ನೇ ಬಳಸಲಾಗುವುದು’ ಎಂದು ಹೇಳಿದರು.

ಇದಕ್ಕೂ ಮೊದಲು ಇವಿ ಜಾಗೃತಿ ಪೋರ್ಟಲ್‌ ಮತ್ತು ದಿಕ್ಸೂಚಿ ವರದಿ ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ‘ರಾಜ್ಯದಲ್ಲಿ ವಿದ್ಯುತ್‌ ಚಾಲಿತ ವಾಹನ ಬಳಕೆಗೆ ಸರ್ಕಾರ ಉತ್ತೇಜನ ನೀಡುತ್ತಿದ್ದು, ಜೂನ್‌ 23ರಿಂದ ಜೂನ್‌ 30ರ ವರೆಗೆ ರಾಜ್ಯದಲ್ಲಿ ಇವಿ ಚಾರ್ಜಿಂಗ್ ಸೆಂಟರ್‌ಗಳ ಕುರಿತು ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.

ರಾಜ್ಯದಲ್ಲಿ 1,000ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್‌ಗಳಿದ್ದು, 3,000 ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಭಾರತದ ಬ್ರಿಟಿಷ್‌ ಹೈಕಮಿಷನರ್‌ ಅಲೆಕ್ಸ್‌ ಇಲ್ಲಿಸ್‌ ಮಾತನಾಡಿ, ‘ಭಾರತದಲ್ಲಿ ಸುಮಾರು 22 ಕೋಟಿ ಜನರು ನಗರ ಪ್ರದೇಶಕ್ಕೆ ಮುಂದಿನ ದಿನಗಳಲ್ಲಿ ವಲಸೆ ಹೋಗಲಿದ್ದಾರೆ. ಈ ನಿಟ್ಟಿನಲ್ಲಿ ನಗರ ಪ್ರದೇಶಗಳ ಸಮರ್ಥ ಅಭಿವೃದ್ಧಿ ಅತಿ ಮುಖ್ಯ’ ಎಂದು ತಿಳಿಸಿದರು.

‘ಭಾರತದಲ್ಲಿ ವಿದ್ಯುತ್‌ ವಾಹನಗಳ ಬಳಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ನಾನು ಮಾತನಾಡಿದ್ದೇನೆ. ಅವರು ಈ
ಕುರಿತು ಸಕಾರಾತ್ಮಕ ಧೋರಣೆ ಹೊಂದಿದ್ದು, ಕೇಂದ್ರ ಸರ್ಕಾರದ ವತಿಯಿಂದ ಎಲ್ಲ ರೀತಿಯ ಸಹಕಾರದ ಭರವಸೆಯನ್ನು ನೀಡಿದ್ದಾರೆ. ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಇವಿ ಚಲನಶೀಲತೆ ಬಗ್ಗೆ ಸಹಭಾಗಿತ್ವ ಹೊಂದಲು ಬ್ರಿಟನ್‌ ಉತ್ಸುಕತೆ ಹೊಂದಿದೆ’ ಎಂದು ಅವರು ತಿಳಿಸಿದರು.

ಬೆಸ್ಕಾಂ ಆಡಳಿತ ನಿರ್ದೇಶಕ ಪಿ.ರಾಜೇಂದ್ರ ಚೋಳನ್‌ ಮಾತನಾಡಿ, ‘ಬೆಸ್ಕಾಂ ಚಾರ್ಜಿಂಗ್‌ ಸ್ಟೇಷನ್‌ಗಳಿಂದ ತಿಂಗಳಿಗೆ 6,000ಕ್ಕೂ ಹೆಚ್ಚು ವಹಿವಾಟು ನಡೆಯುತ್ತಿದೆ. ಸುಮಾರು 30 ಸಾವಿರ ಕಿ.ವ್ಯಾಟ್‌ ಇಂಧನ ಮಾರಾಟ ಮಾಡಲಾಗುತ್ತಿದೆ. ₹2.5 ಲಕ್ಷ ಆದಾಯ ಗಳಿಸುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT