ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿದುಳಿಗೆ ಹಾನಿ ಮಾಡದ ವಿದ್ಯುತ್ ಕಂಪನ ಚಿಕಿತ್ಸೆ: ನಿಮ್ಹಾನ್ಸ್‌ ವೈದ್ಯರು

ಚಿಕಿತ್ಸೆ ಬಗೆಗಿನ ಮಿಥ್ಯೆಗೆ ಕಿವಿಗೊಡದಂತೆ ನಿಮ್ಹಾನ್ಸ್ ವೈದ್ಯರ ಮನವಿ
Published 28 ಮಾರ್ಚ್ 2024, 14:39 IST
Last Updated 28 ಮಾರ್ಚ್ 2024, 14:39 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾನಸಿಕ ಅಸ್ವಸ್ಥರಿಗೆ ನೀಡಲಾಗುವ ವಿದ್ಯುತ್ ಕಂಪನ ಚಿಕಿತ್ಸೆಯು (ಇಸಿಟಿ) ಮಿದುಳಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ. ಈ ಚಿಕಿತ್ಸೆಗೆ ಗರಿಷ್ಠ 12 ವೋಲ್ಟ್‌ನ ಎಲ್‌ಇಡಿ ಬಲ್ಬ್‌ ಒಂದು ಸೆಕೆಂಡ್ ಬೆಳಗಲು ಸಾಕಾಗುವಷ್ಟು ವಿದ್ಯುತ್‌ ಮಾತ್ರ ಬಳಸಲಾಗುತ್ತದೆ’ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್‌) ವೈದ್ಯರು ತಿಳಿಸಿದರು.

ಇಸಿಟಿ ಚಿಕಿತ್ಸೆಯ ಬಗ್ಗೆ ಕೆಲವರಿಲ್ಲರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಹಾಗೂ ಜಾಗೃತಿ ಮೂಡಿಸಲು ಸಂಸ್ಥೆಯ ಮನೋವೈದ್ಯ ವಿಜ್ಞಾನ ವಿಭಾಗವು ‘ನಿಮ್ಹಾನ್ಸ್ ಹೆರಿಟೆಜ್ ಮ್ಯೂಸಿಯಂ’ನಲ್ಲಿ ಇಸಿಟಿ ಚಿಕಿತ್ಸೆ ಬಗ್ಗೆ ಪ್ರದರ್ಶನ ಹಮ್ಮಿಕೊಂಡಿದೆ. ಮೂರು ಗ್ಯಾಲರಿಗಳಲ್ಲಿ ಪ್ರದರ್ಶನ ನಡೆಯುತ್ತಿದ್ದು, ಮೊದಲ ಗ್ಯಾಲರಿಯಲ್ಲಿ ಚಿಕಿತ್ಸೆಯ ಇತಿಹಾಸದ ಬಗ್ಗೆ, ಎರಡನೇ ಗ್ಯಾಲರಿಯಲ್ಲಿ ಚಿಕಿತ್ಸೆ ಪಡೆದವರ ಅನುಭವ ಹಾಗೂ ಮೂರನೇ ಗ್ಯಾಲರಿಯಲ್ಲಿ ಈ ಚಿಕಿತ್ಸೆಯನ್ನು ವಿವಿಧ ಬಗೆಯಲ್ಲಿ ಬಿಂಬಿಸಿದ ಸಿನಿಮಾಗಳ ವಿವರ ಮತ್ತು ಚಿಕಿತ್ಸೆ ನೀಡುವ ವಿಧಾನದ ಬಗ್ಗೆ ವಿವರ ಒದಗಿಸಲಾಗಿದೆ.   

ಸಂಸ್ಥೆಯು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದಲ್ಲಿ ಇಸಿಟಿ ಬಗ್ಗೆ ಪ್ರಾಧ್ಯಾಪಕಿ ಡಾ. ಪ್ರೀತಿ ಸಿನ್ಹಾ ವಿವರಿಸಿದರು. ‘ಎಲೆಕ್ಟ್ರೋ ಕನ್ವಲ್ಸಿವ್ ಥೆರಪಿ ಎಂದು ಕರೆಯಲ್ಪಡುವ ಈ ಚಿಕಿತ್ಸೆಯ ಬಗ್ಗೆ ಜನರಿಗೆ ಈಗಲೂ ತಪ್ಪು ಕಲ್ಪನೆಗಳಿವೆ. ಸಿನಿಮಾ ಸೇರಿ ವಿವಿಧೆಡೆ ಇದನ್ನು ನಕಾರಾತ್ಮಕವಾಗಿ ಬಿಂಬಿಸಿರುವುದೇ ಮುಖ್ಯ ಕಾರಣ. ಕಳೆದ 85 ವರ್ಷಗಳಿಂದ ಈ ಚಿಕಿತ್ಸೆಯನ್ನು ಮಾನಸಿಕ ಅಸ್ವಸ್ಥರಿಗೆ ಒದಗಿಸಲಾಗುತ್ತಿದ್ದು, ಈಗ ಚಿಕಿತ್ಸೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಸಂಸ್ಥೆಯಲ್ಲಿ 75 ವರ್ಷಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೇಳಿದರು. 

‘ಇಸಿಟಿ ಮಿದುಳಿಗೆ ಹಾನಿ ಮಾಡುವುದಿಲ್ಲ. ಬುದ್ಧಿವಂತಿಕೆಯ ಮೇಲೂ ಪರಿಣಾಮ ಬೀರುವುದಿಲ್ಲ. ಈ ಚಿಕಿತ್ಸೆಯಿಂದ ಕೆಲ ರೋಗಿಗಳು ತಾತ್ಕಾಲಿಕ ಮರೆವು ಅನುಭವಿಸಿದರೂ ತೀವ್ರ ಸ್ವರೂಪದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಇಸಿಟಿ ಕೋರ್ಸ್ ಮುಗಿದ ಬಳಿಕ ಜ್ಞಾಪಕ ಶಕ್ತಿ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ರೋಗಿಗಳು ಅರಿವಳಿಕೆಗೆ ಒಳಗಾದಾಗ ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆಯ ಅವಧಿಯಲ್ಲಿ ರೋಗಿಯು ಯಾವುದೇ ನೋವು ಅಥವಾ ಅಸ್ವಸ್ಥತೆ ಅನುಭವಿಸುವುದಿಲ್ಲ’ ಎಂದು ತಿಳಿಸಿದರು. 

2ರಿಂದ 3 ತಿಂಗಳು:

‘ಇಸಿಟಿ ಚಿಕಿತ್ಸೆಯನ್ನು ವ್ಯಕ್ತಿಯ ಸ್ಥಿತಿಗತಿ ಅವಲೋಕಿಸಿ ನೀಡಲಾಗುತ್ತದೆ. ಕೆಲವರಿಗೆ ಆರರಿಂದ ಎಂಟು ಬಾರಿ ಇಸಿಟಿ ಸೆಶನ್ಸ್ ನಡೆಸಬೇಕಾಗುತ್ತದೆ. ಇದಕ್ಕೆ ಎರಡರಿಂದ ಮೂರು ತಿಂಗಳು ಅವಧಿ ಅಗತ್ಯ. 2022–23ರಲ್ಲಿ ನಿಮ್ಹಾನ್ಸ್‌ನಲ್ಲಿ 7,890 ಇಸಿಟಿ ಸೆಶನ್ಸ್ ನಡೆಸಲಾಗಿದೆ. ಚಿಕಿತ್ಸೆ ಪಡೆದವರಲ್ಲಿ ಕೆಲವರಿಗೆ ತಲೆನೋವಿನಂತಹ ಸಾಮಾನ್ಯ ಸಮಸ್ಯೆಗಳು ಕೆಲ ಗಂಟೆಗಳು ಕಾಣಿಸಿಕೊಳ್ಳುತ್ತವೆ’ ಎಂದು ಡಾ.ವರ್ಷ ಎಸ್. ವಿವರಿಸಿದರು. 

ಈ ಪ್ರದರ್ಶನವು ಮೇ 31ರವರೆಗೆ ನಡೆಯಲಿದೆ. ರಜಾದಿನ ಹೊರತುಪಡಿಸಿ ಉಳಿದ ದಿನಗಳು ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಪ್ರದರ್ಶನ ಇರಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT