ಬೆಂಗಳೂರು: ಕೆಥೋಲಿಕ್ ಧರ್ಮಸಭೆಯಲ್ಲಿ ಭಾಷಾ ಸಮಸ್ಯೆಯನ್ನು ಕೊನೆಗೊಳಿಸಿ, ಎಲ್ಲ ಕ್ರೈಸ್ತರನ್ನು ಒಂದೇ ವೇದಿಕೆಯಲ್ಲಿ ತರಬೇಕು ಎಂದು ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ರಫಾಯಲ್ ರಾಜ್ ಆಗ್ರಹಿಸಿದರು.
ಬೆಂಗಳೂರು ಮಹಾಧರ್ಮಕ್ಷೇತ್ರದ ನೂತನ ಸಹಾಯಕ ಧರ್ಮಾಧ್ಯಕ್ಷರಿಗೆ ಅಖಿಲ ಕರ್ನಾಟಕ ಕೆಥೋಲಿಕ್ ಕ್ರೈಸ್ತರ ಕನ್ನಡ ಸಂಘ, ಕರ್ನಾಟಕ ಕ್ರೈಸ್ತರ ಕನ್ನಡ ಅಭಿಮಾನಿಗಳ ಸಂಘ, ಕನ್ನಡ ಮತ್ತು ಜಾಗೃತಿ ವೇದಿಕೆ ಶುಕ್ರವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಲೂ ಜೀವಂತವಾಗಿರುವ ಭಾಷಾ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಮೂಲಕ ಜನಸಾಮಾನ್ಯರು ಕೂಡ ಕನ್ನಡ ಭಾಷೆ, ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು ಎಂದು ಒತ್ತಾಯಿಸಿದರು.
ಸಂಘದ ಪದಾಧಿಕಾರಿ ಐಸಾಕ್ ಆರೋಗ್ಯಸ್ವಾಮಿ ಮಾತನಾಡಿ, ‘ಕನ್ನಡದ ಮಕ್ಕಳಿಗಾಗಿ ಪ್ರಾದೇಶಿಕ ಗುರುಮಠ ಸ್ಥಾಪನೆ ಮಾಡಬೇಕು’ ಎಂದು ಸಲಹೆ ನೀಡಿದರು.
ನೂತನ ಸಹಾಯಕ ಧರ್ಮಾಧ್ಯಕ್ಷರಾದ ಧರ್ಮಗುರು ಆರೋಕ್ಯರಾಜ್ ಸತೀಶ್ ಕುಮಾರ್ ಮತ್ತು ಧರ್ಮಗುರು ಜೋಸೆಫ್ ಸೂಸೈನಾದನ್ ಅವರನ್ನು ಗೌರವಿಸಲಾಯಿತು.