2019ರಲ್ಲಿ ದಾಖಲಾಗಿದ್ದ ಪ್ರಕರಣ
ಬಿಬಿಎಂಪಿ ನಡೆಸಿದ ಕೊಳವೆಬಾವಿ ಮತ್ತು ಆರ್‌ಒ ಘಟಕ ಕಾಮಗಾರಿ ಗಳಲ್ಲಿ ₹969 ಕೋಟಿಯಷ್ಟು ಅಕ್ರಮ ನಡೆದಿದೆ ಎಂದು ಬಿಜೆಪಿಯ ಎನ್.ಆರ್.ರಮೇಶ್ ಅವರು 2019ರಲ್ಲಿ ಎಸಿಬಿಗೆ ದೂರು ನೀಡಿದ್ದರು. 2021ರಲ್ಲಿ ಇ.ಡಿಗೂ ಈ ಸಂಬಂಧ ಮಾಹಿತಿ ನೀಡಿದ್ದರು. 2022ರ ಡಿಸೆಂಬರ್‌ನಲ್ಲೇ ರಮೇಶ್ ಅವರಿಗೆ ಸಮನ್ಸ್ ನೀಡಿದ್ದ ಇ.ಡಿ, ಅವರಿಂದ ಮಾಹಿತಿ ಕಲೆಹಾಕಿತ್ತು. ನಂತರ ಬಿಬಿಎಂಪಿ ಆಯುಕ್ತರಿಗೆ ಸಮನ್ಸ್ ಜಾರಿ ಮಾಡಿ, ವಿಚಾರಣೆಗೆ ಸಹಕರಿಸುವಂತೆ ಸೂಚಿಸಿತ್ತು. ಇ.ಡಿಗೆ ಮಾಹಿತಿ ನೀಡಲು ಪಾಲಿಕೆಯ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ಆಯುಕ್ತ ತುಷಾರ್ ಗಿರಿನಾಥ್ ಅವರು ನೇಮಕ ಮಾಡಿದ್ದರು. 2022ರ ಡಿಸೆಂಬರ್‌ನಲ್ಲೇ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದರೂ ಇ.ಡಿಯು ಈವರೆಗೆ ಶೋಧಕಾರ್ಯ ನಡೆಸಿರಲಿಲ್ಲ. ಎರಡು ವರ್ಷಗಳ ಅಂತರದ ಬಳಿಕ ಈಗ ಶೋಧಕಾರ್ಯಕ್ಕೆ ಚಾಲನೆ ನೀಡಿದೆ.