ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮನೆಗೆ ನೀರು ನುಗ್ಗಿದರೆ ಎಂಜಿನಿಯರ್‌ಗಳೇ ಹೊಣೆ: ಸಿಎಂ ಸಿದ್ದರಾಮಯ್ಯ

ಬಿಬಿಎಂಪಿ ಅಧಿಕಾರಿಗಳಿಗೆ ಕಟ್ಟೆಚ್ಚರ
Published 22 ಮೇ 2024, 15:54 IST
Last Updated 22 ಮೇ 2024, 15:54 IST
ಅಕ್ಷರ ಗಾತ್ರ

ಬೆಂಗಳೂರು: ಎಷ್ಟೇ ಪ್ರಭಾವಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರೂ ಅದನ್ನು ಶೀಘ್ರ ತೆರವುಗೊಳಿಸಬೇಕು. ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗಿದರೆ ಎಂಜಿನಿಯರ್‌ಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ನಗರದಲ್ಲಿ ಮಳೆಯಿಂದ ಸಮಸ್ಯೆಗೆ ಒಳಗಾಗುವ ಪ್ರದೇಶಗಳಿಗೆ ಮುಖ್ಯಮಂತ್ರಿಯವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಾರು ಮಳೆಗೂ ಮುನ್ನ ಪ್ರವಾಹ ಉಂಟಾಗಬಾರದೆಂದು ಚುನಾವಣಾ ಆಯೋಗದಿಂದ ಅನುಮತಿ ಪಡೆದು 7ರಿಂದ 8 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು ಎಂದರು.

ವಿಳಂಬವಾಗಿರುವ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು. ಮರಗಳಲ್ಲಿ ಒಣಗಿರುವ ಕೊಂಬೆಗಳನ್ನು ಕತ್ತರಿಸಬೇಕು. ಪಾದಚಾರಿ ಮಾರ್ಗಗಳನ್ನು ಸರಿಪಡಿಸಬೇಕು. ರಾಜಕಾಲುವೆಗೆ ಕಸ ಹಾಕುವುದನ್ನು ತಡೆಗಟ್ಟಬೇಕು. ಮುಂಗಾರು ಪ್ರಾರಂಭವಾಗುವ ಮುಂಚಿತವಾಗಿ ರಾಜಕಾಲುವೆಗಳ ಹೂಳು ತೆಗೆಯಬೇಕೆಂದು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ನಗರದಲ್ಲಿ 860 ಕಿ.ಮೀ. ರಾಜಕಾಲುವೆ ಇದೆ. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 491 ಕಿ.ಮೀ. ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡಲಾಗಿತ್ತು. ಹಿಂದಿನ ಸರ್ಕಾರ 2023ರ ಜನವರಿಯಲ್ಲಿ 193 ಕಿ.ಮೀ. ರಾಜಕಾಲುವೆ ಒತ್ತುವರಿ ತೆರವು ಮಾಡಲು ಕ್ರಮ ಕೈಗೊಂಡಿತ್ತು. ಅದನ್ನು ಮೊದಲೇ ಮಾಡಿದ್ದರೆ ಇಂದು ಸಮಸ್ಯೆ ಇರುತ್ತಿರಲಿಲ್ಲ. ಬಾಕಿ ಉಳಿದಿರುವ 176 ರಾಜಕಾಲುವೆ ಒತ್ತುವರಿ ತೆರವು ಹಾಗೂ ಅಭಿವೃದ್ಧಿಗೆ ₹1,800 ಕೋಟಿ ಅಗತ್ಯವಿದ್ದು, ವಿಶ್ವಬ್ಯಾಂಕ್‌ ಸುಮಾರು ₹2,000 ಕೋಟಿ ನೀಡಲಿದೆ. ಇದನ್ನು ಉಪಯೋಗಿಸಿಕೊಂಡು ಶೀಘ್ರ ಕಾಮಗಾರಿ ನಡೆಸಲಾಗುತ್ತದೆ ಎಂದರು.

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಬಿಬಿಎಂಪಿ ಚುನಾವಣೆ ಬಗ್ಗೆ ಚಿಂತನೆ ನಡೆಸಲಾಗುವುದು.
ಸಿದ್ದರಾಮಯ್ಯ, ಮುಖ್ಯಮಂತ್ರಿ

12.15 ಕಿ.ಮೀ. ರಾಜಕಾಲುವೆ ಒತ್ತುವರಿಯ 12 ಪ್ರಕರಣಗಳು ಸಿವಿಲ್ ನ್ಯಾಯಾಲಯದಲ್ಲಿವೆ. ಅಗತ್ಯ ಬಿದ್ದರೆ ವಿಶೇಷ ವಕೀಲರನ್ನು ನೇಮಿಸಿ ಪ್ರಕರಣ ಇತ್ಯರ್ಥಗೊಳಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ 400 ಕೆರೆಗಳಿದ್ದವು. ಈಗಿರುವ ಅನೇಕ ಕೆರೆಗಳು ಹೂಳಿನಿಂದ ತುಂಬಿವೆ ಹಾಗೂ ಒತ್ತುವರಿಯಾಗಿವೆ. ಒತ್ತುವರಿ ತೆರವು ಮಾಡಿ ನೀರು ಹರಿಯಲು ಕಾಲುವೆ ನಿರ್ಮಾಣ ಮಾಡಲು ಸೂಚಿಸಲಾಗಿದೆ. ಕೆರೆಗಳಿಂದ ತೆಗೆಯಲಾಗುವ ಹೂಳನ್ನು ಗುರುತು ಮಾಡಿರುವ ಕ್ವಾರಿಗಳಿಗೆ ಹಾಕಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಗರ ಸುತ್ತಾಟ ಸಂದರ್ಭದಲ್ಲಿ ಬಸ್‌ನಲ್ಲಿ ನಾಯಂಡಹಳ್ಳಿ ಬಳಿ ಬಂದಾಗ ಪೌರಕಾರ್ಮಿಕರು ಕೈಬೀಸಿದರು ಪ್ರಜಾವಾಣಿ ವಾರ್ತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಗರ ಸುತ್ತಾಟ ಸಂದರ್ಭದಲ್ಲಿ ಬಸ್‌ನಲ್ಲಿ ನಾಯಂಡಹಳ್ಳಿ ಬಳಿ ಬಂದಾಗ ಪೌರಕಾರ್ಮಿಕರು ಕೈಬೀಸಿದರು ಪ್ರಜಾವಾಣಿ ವಾರ್ತೆ

ಪ್ರವಾಹ ನಿಯಂತ್ರಣಕ್ಕೆ ₹11.5 ಕೋಟಿ ಯೋಜನೆ

ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಪ್ರವಾಹ ನಿಯಂತ್ರಿಸಲು ಸಮಾನಾಂತರ ಕಾಲುವೆ ನಿರ್ಮಿಸಬೇಕು. ₹11.5 ಕೋಟಿ ವೆಚ್ಚದ ಈ ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ನಗರದಲ್ಲಿ ಮಳೆಯಿಂದ ಸಮಸ್ಯೆಗೆ ಒಳಗಾಗುವ ಪ್ರದೇಶಗಳಿಗೆ ಮುಖ್ಯಮಂತ್ರಿಯವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು. ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ  ರಾಜಕಾಲುವೆಗೆ ಸಾರ್ವಜನಿಕರು ಕಸ ಎಸೆಯುವುದನ್ನು ತಡೆಗಟ್ಟಲು ಕ್ರಮ ವಹಿಸಬೇಕು. ಕಾಲಮಿತಿಯಲ್ಲಿ ಕೆಲಸವಾಗಬೇಕು. ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಅಮಾನತು ಮಾಡಲಾಗುತ್ತದೆ ಎಂದು ಬಿಬಿಎಂಪಿ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ಗೆ ಸೂಚಿಸಿದರು.

ನಾಯಂಡಹಳ್ಳಿ: ‘ಇಲ್ಲಿನ ರಾಜಕಾಲುವೆಯಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತದೆ. ನೀರು ಸರಾಗವಾಗಿ ಹರಿದುಹೋಗಲು ಹೆಚ್ಚುವರಿ ಕಾಲುವೆ ಅಗತ್ಯವಿದೆ. ₹7 ಕೋಟಿ ವೆಚ್ಚದ ಕಾಮಗಾರಿ ಅನುಮೋದನೆಯಾಗಿದ್ದು ಹಣಕಾಸು ಇಲಾಖೆ ಹಾಗೂ ಕಂದಾಯ ಇಲಾಖೆಯ ಅನುಮೋದನೆ ಅಗತ್ಯವಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

‘ಹಣಕಾಸು ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಅನುಮೋದನೆ ಕೊಡಿಸಿ’ ಎಂದು ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರಿಗೆ ಮುಖ್ಯಮಂತ್ರಿ ಸೂಚಿಸಿದರು. ಒಂದು ವರ್ಷದಲ್ಲಿ ಕಾಮಗಾರಿ ಮುಗಿಯಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ತಾಕೀತು ಮಾಡಿದರು.

ಕೋಡಿ ಚಿಕ್ಕನಹಳ್ಳಿ: 'ರಾಜಕಾಲುವೆಯಿಂದ ನೀರು ಹೊರಗೆ ಹರಿದು ಮನೆಗಳಿಗೆ ನೀರು ನುಗ್ಗುತ್ತಿದೆ. ಹೊರ ಬರುವ ನೀರನ್ನು ಪಂಪ್‌ ಮಾಡಿ ಮಡಿವಾಳ ಕೆರೆಗೆ ಹರಿಸಬೇಕು. ಮಡಿವಾಳ ಕೆರೆಗೆ ಕಾಲುವೆ ನಿರ್ಮಾಣದ ₹4.3 ಕೋಟಿ ವೆಚ್ಚದ ಕಾಮಗಾರಿ ಆರಂಭಿಸಲು ಸಿದ್ದರಾಮಯ್ಯ ಸೂಚಿಸಿದರು.

ಸಿಲ್ಕ್‌ ಬೋರ್ಡ್‌ ಹೊಸೂರು ಮುಖ್ಯರಸ್ತೆ: ನಮ್ಮ ಮೆಟ್ರೊ ಕಾಮಗಾರಿಯಿಂದಾಗಿ ಮಳೆನೀರು ಚರಂಡಿ ವಿಸ್ತೀರ್ಣ ಕಡಿಮೆಯಾಗಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಪರ್ಯಾಯ ವ್ಯವಸ್ಥೆ ಮಾಡಲು ₹4.5 ಕೋಟಿ ಕಾಮಗಾರಿ ಅಗತ್ಯವಿದೆ. ಇದಕ್ಕೆ ಸರ್ಕಾರದ ಉನ್ನತಾಧಿಕಾರ ಸಮಿತಿಯ ಅನುಮತಿ ಅಗತ್ಯವಿದೆ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

10-15 ವರ್ಷಗಳ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು ಕ್ರಿಯಾಯೋಜನೆ ರೂಪಿಸಿ ಮುಂದಿನ ಉನ್ನತಾಧಿಕಾರ ಸಮಿತಿ ಸಭೆ ಮುಂದೆ ಯೋಜನೆಯನ್ನು ಮಂಡಿಸಿ ಎಂದು ಮುಖ್ಯಮಂತ್ರಿ ಹೇಳಿದರು.

ಗುತ್ತಿಗೆದಾರರ ಬದಲಿಸಿ: ‘ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈಜಿಪುರ ಮೇಲ್ಸೇತುವೆ ಕಾಮಗಾರಿ ವಿಳಂಬವಾಗುತ್ತಿದೆ. 2023ರ ನ.20ರಂದು ಬಿಎಸ್‌ಸಿಪಿಎಲ್‌ ಕಂಪನಿಗೆ ಕಾಮಗಾರಿ ಮುಂದುವರಿಸಲು ಕಾರ್ಯಾದೇಶ ನೀಡಲಾಗಿದೆ. ಶೇ 4ರಿಂದ 6ರಷ್ಟು ಮಾತ್ರ ಪ್ರಗತಿಯಾಗಿದೆ’ ಎಂದು ತುಷಾರ್‌ ಗಿರಿನಾಥ್‌ ಹೇಳಿದರು. 

ಸ್ಥಳದಲ್ಲಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಯವರು ‘ಕಾಮಗಾರಿ ಮಾಡಲು ಸಾಧ್ಯವಿಲ್ಲದಿದ್ದರೆ ಜಾಗ ಖಾಲಿ ಮಾಡು’ ಎಂದರು.

‘ಗುತ್ತಿಗೆದಾರರಿಗೆ ನಿಯಮಾನುಸಾರ ನೋಟಿಸ್‌ ನೀಡಿ ಸ್ಪಂದಿಸದಿದ್ದರೆ ಕಾನೂನು ಪ್ರಕಾರ ಟೆಂಡರ್‌ ರದ್ದುಪಡಿಸಿ ಬೇರೆಯವರಿಗೆ ಗುತ್ತಿಗೆ ನೀಡಿ’ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮುಖ್ಯಮಂತ್ರಿಯವರೊಂದಿಗೆ ಸುತ್ತಾಟ ನಡೆಸಿದರು.

‘ಒಣಮರ ಬಿಟ್ಟಿರುವುದು ಅನಾಹುತ ಆಗಲಿ ಅಂತಾನಾ?’

‘ಒಣಗಿದ ಮರಗಳನ್ನು ಯಾಕೆ ಬಿಟ್ಟಿದ್ದೀರಿ? ಅನಾಹುತ ಆಗಲಿ ಅಂತಾನಾ?’ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬನಶಂಕರಿ 2ನೇ ಹಂತದ 100 ಅಡಿ ರಸ್ತೆಯಲ್ಲಿ ಒಣಗಿದ ಮರಗಳನ್ನು ಕಂಡು ಅವರು ಸಿಟ್ಟಾದರು. ‘ನಗರದಾದ್ಯಂತ ಒಣಮರ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು. ನಗರ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡಬೇಕು. ಪದ್ಮನಾಭನಗರ ಮೇಲ್ಸೇತುವೆ ಬಳಿ ಪಾದಚಾರಿ ಮಾರ್ಗ ದುರಸ್ತಿಗೊಳಿಸಿ. ಕಟ್ಟಡ ತ್ಯಾಜ್ಯ(ಡೆಬ್ರಿಸ್‌)ಗಳನ್ನು ತೆರವುಗೊಳಿಸಿ’ ಎಂದು ಸೂಚಿಸಿದರು.

‘ಡಬ್ಬಲ್‌ ಡೆಕ್ಕರ್‌ ಇತರ ಭಾಗದಲ್ಲೂ ಬರಲಿ’

‘ಸಂಚಾರ ದಟ್ಟಣೆ ನಿವಾರಣೆಗೆ ನಮ್ಮ ಮೆಟ್ರೊದ ‘ಡಬ್ಬಲ್ ಡೆಕ್ಕರ್’ ಮಾದರಿಯನ್ನು ನಗರದ ಇತರ ಭಾಗಗಳಲ್ಲಿಯೂ ಅಳವಡಿಸಬೇಕು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶಿಸಿದರು.

‘ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಸಂಚಾರ ದಟ್ಟಣೆಗೆ ಪರಿಹಾರವಾಗಿ ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಇದಲ್ಲದೇ ಬಿಟಿಎಂನಿಂದ ಬನಶಂಕರಿ ಕಡೆಯ ರಾಘವೇಂದ್ರಸ್ವಾಮಿ ಟೆಂಪಲ್‌ ಸರ್ಕಲ್‌ ಜಯನಗರ 5ನೇ ಬ್ಲಾಕ್‌ನಲ್ಲಿ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಬೇಡಿಕೆ ಇದೆ ಅಂಡರ್‌ಪಾಸ್‌ ನಿರ್ಮಿಸಿ’ ಎಂದು ಸೂಚಿಸಿದರು.

‘ರಸ್ತೆ ನಿರ್ವಹಣೆಗೆ ಶಾಶ್ವತ ವ್ಯವಸ್ಥೆ’

ರಸ್ತೆ ಹಾಗೂ ಗುಂಡಿಗಳನ್ನು ನಿರ್ವಹಿಸಲು ಒಂದು ಶಾಶ್ವತ ನಿರ್ವಹಣಾ ವ್ಯವಸ್ಥೆ ರೂಪಿಸಲು ಬಿಬಿಎಂಪಿ ಹಾಗೂ ಬಿಡಿಎಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದ ವಾರ್ಡ್ ರಸ್ತೆಗಳಲ್ಲಿ 5500 ಗುಂಡಿಗಳು ಬಿದ್ದಿದ್ದು ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಲ್ಲಿ 557 ಗುಂಡಿಗಳಿವೆ. ಈ ತಿಂಗಳಲ್ಲಿ ಅವುಗಳನ್ನು ಮುಚ್ಚಬೇಕು. ಬಿಬಿಎಂಪಿ ಬಿಡಿಎ ಬೆಸ್ಕಾಂ ಜಲಮಂಡಳಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಲು ಸೂಚಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT