ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತೋಟಿರಹಿತ ಜೀವನದಿಂದ ದುಷ್ಪರಿಣಾಮ: ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್

ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅಭಿಮತ
Last Updated 30 ಆಗಸ್ಟ್ 2020, 15:23 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಕೃತಿಯ ಮೇಲೆ ಸಂಪೂರ್ಣ ಅಧಿಕಾರವಿದೆ ಎಂಬ ಮನೋಭಾವದಿಂದ ನಾವು ಜೀವಿಸುತ್ತಿದ್ದೇವೆ. ಇದರಿಂದಾಗಿಯೇ ಹತೋಟಿ ರಹಿತ ಜೀವನದ ದುಷ್ಪರಿಣಾಮಗಳು ಇಂದು ಬೆಳಕಿಗೆ ಬರುತ್ತಿವೆ. ಇನ್ನಾದರೂ ಪ್ರಕೃತಿ ಬಗೆಗಿನ ನಮ್ಮ ನಡವಳಿಕೆ ಬಗ್ಗೆ ಸ್ವಲ್ಪ ಯೋಚಿಸಿ, ಶೋಷಣೆ ನಿಲ್ಲಿಸಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ತಿಳಿಸಿದರು.

ಹಿಂದೂ ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನವು (ಎಚ್ಎಸ್ಎಸ್ಎಫ್) ಪರಿಸರ ದಿನಾಚರಣೆಯ ಪ್ರಯುಕ್ತ ಆನ್‌ಲೈನ್ ಮೂಲಕ ಭಾನುವಾರ ಏರ್ಪಡಿಸಿದ್ದ ‘ಪ್ರಕೃತಿ ವಂದನಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಕೃತಿ ನಾಶದ ಪರಿಣಾಮ ದಿನಗಳು ಉರುಳಿದಂತೆ ನಮಗೆ ಭಯಾನಕ ಅನುಭವ ಉಂಟುಮಾಡುತ್ತಿದೆ. ಇದೇ ಜೀವನ ಶೈಲಿಯನ್ನು ನಾವು ಮುಂದುವರೆಸಿದಲ್ಲಿ ದೊಡ್ಡ ಪ್ರಮಾಣದ ಬೆಲೆ ತೆರಬೇಕಾಗುತ್ತದೆ.ಮನುಷ್ಯ ಸಂಬಂಧವು ಸೃಷ್ಟಿಯೊಂದಿಗೆ ಬೆರೆತು ಹೋಗಿದ್ದು, ನಾವು ಈ ಪ್ರಕೃತಿಯ ಒಂದು ಭಾಗವಾಗಿದ್ದೇವೆ. ಹಾಗಾಗಿ ಈ ಜಗತ್ತನ್ನು ಪೋಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು’ ಎಂದರು.

‘ಪೂರ್ವಜರು ನಮ್ಮ ಅಸ್ತಿತ್ವದ ಸತ್ಯವನ್ನು ಪರಿಪೂರ್ಣವಾಗಿ ಅರಿತುಕೊಂಡಿದ್ದರು. ನಾವೆಲ್ಲರೂ ಈ ಪರಿಸರದ ಒಂದು ಭಾಗ ಎಂಬುದನ್ನು ತಿಳಿದುಕೊಂಡಿದ್ದರು. ನಮ್ಮ ಶರೀರದಲ್ಲಿ ಪ್ರಾಣವಾಯು ಇರುವವರೆಗೆ ನಮ್ಮ ಅಂಗಗಳೆಲ್ಲವೂ ಕಾರ್ಯನಿರ್ವಹಿಸುತ್ತವೆ. ಪ್ರಕೃತಿಯಿಂದ ನಮಗೆ ಬೇಕಾಗಿದ್ದೆಲ್ಲವನ್ನೂ ಹಿಂಡಿಕೊಂಡಿದ್ದೇವೆ. ಪ್ರಕೃತಿಯನ್ನು ಉಳಿಸುವ ಜವಾಬ್ದಾರಿ ಹೊಸ ಪೀಳಿಗೆಯ ಮೇಲಿದ್ದು, ಅವರಿಗೆ ಪ್ರಕೃತಿಯ ಮಹತ್ವ ಹಾಗೂ ನಮ್ಮಲ್ಲಿನ ಧಾರ್ಮಿಕಆಚರಣೆಗಳ ಅರ್ಥಗಳನ್ನು ಮನವರಿಕೆ ಮಾಡಿಸಬೇಕು. 350 ವರ್ಷಗಳ ಅವಧಿಯಲ್ಲಿ ಹಾನಿಗೊಂಡ ನಮ್ಮ ಪ್ರಕೃತಿಯನ್ನು ಮುಂದಿನ 100ರಿಂದ 200 ವರ್ಷಗಳಲ್ಲಿ ಪುನರ್‌ ಸೃಷ್ಟಿಸಲು ಶ್ರಮಿಸಬೇಕು’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT