ಗುರುವಾರ , ಸೆಪ್ಟೆಂಬರ್ 23, 2021
27 °C
ಸೂರ್ಯನಗರ 4ನೇ ಹಂತ ಭೂಸ್ವಾಧೀನ ಚುರುಕು l ಶೀಘ್ರವೇ ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರ – ಸಿಇ

ಇಎಸ್‌ಜೆಡ್‌: ನಿರ್ಧಾರಕ್ಕೆ ಕಾಯದ ಕೆಎಚ್‌ಬಿ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯದ (ಇಎಸ್‌ಜೆಡ್) ವ್ಯಾಪ್ತಿಯ ಬಗ್ಗೆ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅಂತಿಮ ಅಧಿಸೂಚನೆ ಪ್ರಕಟಿಸುವ ಮುನ್ನವೇ ಕರ್ನಾಟಕ ಗೃಹ ಮಂಡಳಿಯು (ಕೆಎಚ್‌ಬಿ) ಸೂರ್ಯನಗರ ಬಡಾವಣೆಯ ನಾಲ್ಕನೇ ಹಂತದ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಮುಂದಾಗಿದೆ.

ಸೂರ್ಯನಗರ ನಾಲ್ಕನೇ ಹಂತದಲ್ಲಿ ರಾಷ್ಟ್ರೀಯ ಉದ್ಯಾನದ ಆಸುಪಾಸಿನ ಐದು ಗ್ರಾಮಗಳಾದ ಕೋನಸಂದ್ರ, ಬೊಮ್ಮಂಡಹಳ್ಳಿ, ಕಾಡುಜಕ್ಕನಹಳ್ಳಿ, ಇಂಡಲವಾಡಿ, ಬಗ್ಗನದೊಡ್ಡಿ ಗ್ರಾಮಗಳಲ್ಲಿ ಭೂಸ್ವಾಧೀನ ನಡೆಸಲು ಕೆಎಚ್‌ಬಿ ಭೂಸ್ವಾಧೀನ ಕಾಯ್ದೆಯ ಸೆಕ್ಷನ್‌ 4 (1) ಹಾಗೂ 6 (1) ಅಡಿಯಲ್ಲಿ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಈ ಭೂಮಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಇಎಸ್‌ಜೆಡ್‌ ವ್ಯಾಪ್ತಿಯಲ್ಲಿ ಬರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡುವಂತೆ ಕೆಲವು ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇಎಸ್‌ಜೆಡ್‌ಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಸಚಿವಾಲಯ ಅಂತಿಮ ನಿರ್ಧಾರ ಕೈಗೊಂಡ ಬಳಿಕ →ಭೂಸ್ವಾಧೀನ →ಪ್ರಕ್ರಿಯೆ ಪೂರ್ಣಗೊಳಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು.

ಸಚಿವಾಲಯವು 2016ರಲ್ಲಿ ಹೊರಡಿಸಲಾಗಿದ್ದ ಕರಡು ಅಧಿಸೂಚನೆ ಪ್ರಕಾರ, ಇಎಸ್‌ಜೆಡ್ ವ್ಯಾಪ್ತಿ 268.96 ಚದರ ಕಿ.ಮೀ. ಇತ್ತು. ಆದರೆ, ಈ ಕುರಿತ ಅಂತಿಮ ಅಧಿಸೂಚನೆ ಪ್ರಕಟವಾಗಿರಲಿಲ್ಲ. ಬಳಿಕ ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಸಚಿವಾಲಯವು ಇಎಸ್‌ಜೆಡ್‌ಗೆ ವ್ಯಾಪ್ತಿಯನ್ನು 168.84 ಚದರ ಕಿ.ಮೀ.ಗೆ ಕಡಿತಗೊಳಿಸಲು 2018ರ ನವೆಂಬರ್‌ 2ರಂದು ಕರಡು ಅಧಿಸೂಚನೆ ಪ್ರಕಟಿಸಿತ್ತು. ಇದರ ಪ್ರಕಾರ ರಾಷ್ಟ್ರೀಯ ಉದ್ಯಾನದ ಸಂರಕ್ಷಿತ ಪ್ರದೇಶಕ್ಕೆ ತಾಗಿಕೊಂಡಿರುವ ಗ್ರಾಮಗಳಲ್ಲಿ ಕನಿಷ್ಠ 100 ಮೀಟರ್‌ಗಳಿಂದ ಗರಿಷ್ಠ 1 ಕಿ.ಮೀ ವ್ಯಾಪ್ತಿಯಷ್ಟು ಪರಿಸರ ಸೂಕ್ಷ್ಮ ಪ್ರದೇಶ ಮಾತ್ರ ಉಳಿಯುತ್ತದೆ.

ಇಎಸ್‌ಜೆಡ್‌ಗೆ ವ್ಯಾಪ್ತಿಯನ್ನು ಕಡಿತಗೊಳಿಸುವುದಕ್ಕೆ ಪರಿಸರ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದರೂ ಲೆಕ್ಕಿಸದ ಕೇಂದ್ರ ಇಎಸ್‌ಜೆಡ್‌ಗೆ ತಜ್ಞರ ಸಮಿತಿ 2019ರ ಫೆ. 28ರಂದು ನಡೆಸಿದ 33ನೇ ಸಭೆಯಲ್ಲಿ ಕರಡು ಅಧಿಸೂಚನೆಗೆ ಅನುಮೋದನೆ ನೀಡುವ ತೀರ್ಮಾನ ಕೈಗೊಂಡಿತ್ತು. ಈ ನಡುವೆ ಪರಿಸರ ಕಾರ್ಯಕರ್ತರು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ನೇತೃತ್ವದಲ್ಲಿ ಕೇಂದ್ರ ಪರಿಸರ ಸಚಿವ ಡಾ. ಹರ್ಷವರ್ಧನ ಅವರನ್ನು ಭೇಟಿ ಮಾಡಿ, ‘ಯಾವುದೇ ಕಾರಣಕ್ಕೂ ಇಎಸ್‌ಜೆಡ್‌ ವ್ಯಾಪ್ತಿಯನ್ನು ಕುಗ್ಗಿಸಬಾರದು’ ಎಂದು ಒತ್ತಾಯಿಸಿದ್ದರು. ಬಳಿಕ ಸಮಿತಿಯ ನಿರ್ಣಯವನ್ನು ಕೇಂದ್ರ ಪರಿಸರ ಸಚಿವಾಲಯ ತಡೆಹಿಡಿದಿತ್ತು.

‘ಸೂರ್ಯನಗರ ನಾಲ್ಕನೇ ಹಂತಕ್ಕೆ ಬೇಕಾಗಿರುವ 1,938 ಎಕರೆ ಜಮೀನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ 2 ಕಿ.ಮೀ ದೂರದಲ್ಲಿದೆ. ಇದರ ನಡುವೆ, ಪರಿಸರ ಸೂಕ್ಷ್ಮ ವಲಯವನ್ನು 1.ಕಿ.ಮೀ ವ್ಯಾಪ್ತಿಗೆ ಸೀಮಿತಗೊಳಿಸಲು ಕೇಂದ್ರ ಪರಿಸರ ಸಚಿವಾಲಯ ನಿರ್ಧಾರ ಕೈಗೊಂಡಿದೆ. ಹಾಗಾಗಿ, ನಾವು ಭೂಸ್ವಾಧೀನ ಪೂರ್ಣಗೊಳಿಸುವುದಕ್ಕೆ ಯಾವುದೇ ತಕರಾರು ಇಲ್ಲ’ ಎನ್ನುತ್ತಾರೆ ಕೆಎಚ್‌ಬಿಯ ಮುಖ್ಯ ಎಂಜಿನಿಯರ್‌ ನಂಜುಂಡಪ್ಪ.

‘ಇನ್ನೊಂದು ತಿಂಗಳ ಒಳಗೆ ಭೂಸ್ವಾಧೀನಕ್ಕೆ ಸಂಬಂಧಿಸಿ ಪರಿಹಾರ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಲಿದ್ದೇವೆ. ನಂತರ ಬಡಾವಣೆಯ ಯೋಜನೆಗೆ ಆನೇಕಲ್‌ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾತಿ ಪಡೆದು, ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಿದ್ದೇವೆ.
ಬಳಿಕ ಗುತ್ತಿಗೆದಾರರ ನೇಮಕಕ್ಕೆ ಟೆಂಡರ್‌ ಆಹ್ವಾನಿಸಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ರಾಷ್ಟ್ರೀಯ ಉದ್ಯಾನದ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್‌ ಪ್ರಕಾರ, ಇಎಸ್‌ಜೆಡ್‌ ಬಗ್ಗೆ ಕೇಂದ್ರ ಪರಿಸರ ಇಲಾಖೆ ಇನ್ನೂ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ‘ಸದ್ಯಕ್ಕೆ ಸೂರ್ಯನಗರ ನಾಲ್ಕನೇ ಹಂತವು ಪರಿಸರ ಸೂಕ್ಷ್ಮವಲಯದ ವ್ಯಾಪ್ತಿಯಲ್ಲೇ ಇದೆ. ಹಾಗಾಗಿ, ಈ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಅಗತ್ಯ. ಬಡಾವಣೆಯ ವಿಸ್ತೀರ್ಣ 10 ಎಕರೆಗಿಂತ ಹೆಚ್ಚು
ಇರುವ ಕಾರಣ ಪರಿಸರ ಇಲಾಖೆಯಿಂದಲೂ ನಿರಾಕ್ಷೇಪಣೆ ಪತ್ರ ಪಡೆದುಕೊಳ್ಳಬೇಕಾಗುತ್ತದೆ’ ಎಂದರು.

‘ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರವನ್ನು ಇನ್ನೂ ಪಡೆದಿಲ್ಲ. ಶೀಘ್ರವೇ ಪಡೆಯುತ್ತೇವೆ’ ಎಂದು ನಂಜುಂಡಪ್ಪ ತಿಳಿಸಿದರು.

ಬಡಾವಣೆ ಬೇಡ; ಪರಿಸರ ಉಳಿಸಿ: ಸಿಎಂಗೆ ಪತ್ರ ಬರೆದ ಗ್ರಾಮಸ್ಥರು

‘ನಮ್ಮ ಗ್ರಾಮಗಳ ಜಮೀನು ರಾಷ್ಟ್ರೀಯ ಉದ್ಯಾನದ ಅರಣ್ಯದ ಅಂಚಿನಲ್ಲಿವೆ. ಕೆಎಚ್‌ಬಿಯವರು ಈ ಜಮೀನುಗಳಲ್ಲಿ ವಸತಿ ಬಡಾವಣೆ ನಿರ್ಮಾಣ ಮಾಡಿದರೆ ಇಲ್ಲಿ ಉಂಟಾಗುವ ಕೊಳಚೆ ನೀರಿನಿಂದ ಕಾಡುಪ್ರಾಣಿಗಳಿಗೂ ಅಪಾಯ ಉಂಟಾಗಬಹುದು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆಸುಪಾಸಿನ 29 ಊರುಗಳ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಕಾಡು ಕಡಿಯಲಾಗಿದೆ. ಬಡಾವಣೆ ನಿರ್ಮಾಣವಾದರೆ ಇನ್ನಷ್ಟು ಕಾಡು ನಾಶವಾಗುವ ಅಪಾಯವಿದೆ. ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸುವಂತೆ ಕೆಎಚ್‌ಬಿಯವರಿಗೆ ಸೂಚನೆ ನೀಡಬೇಕು’ ಎಂದು ಗ್ರಾಮಸ್ಥರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

‘ನಾವು ತರಕಾರಿ ಬೆಳೆದುಕೊಂಡು ಬದುಕುತ್ತಿದ್ದೇವೆ. ಇಲ್ಲಿಯ ಭೂಮಿಯನ್ನು ಬಡಾವಣೆ ನಿರ್ಮಾಣಕ್ಕೆ ಬಳಸಿ ಕೃಷಿಯೇತರ ಉದ್ದೇಶಕ್ಕೆ ಬಳಸುವುದಕ್ಕೆ ನಮ್ಮ ಸಹಮತವಿಲ್ಲ’ ಎಂದು ಕೋನಸಂದ್ರದ ರೈತ ವೆಂಕಟೇಶ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಗ್ರಾಮದಲ್ಲಿ ಕೊಳವೆಬಾವಿ ತೋಡಿಸಿದರೆ ಈ ಹಿಂದೆ 400 ಅಡಿಗೆ ನೀರು ಸಿಗುತ್ತಿತ್ತು. ಈಗ 1200 ಅಡಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ರಾಷ್ಟ್ರೀಯ ಉದ್ಯಾನದ ಇಎಸ್‌ಜೆಡ್‌ ವ್ಯಾಪ್ತಿ ಕಡಿಮೆ ಮಾಡದೇ ಹಿಂದಿನಷ್ಟೇ ಉಳಿಸಿಕೊಂಡರೆ ಮಾತ್ರ ಅಲ್ಪಸ್ವಲ್ಪ ಕಾಡು ಉಳಿಯುತ್ತದೆ. ಕಾಡು ಉಳಿದರೆ ಮಾತ್ರ ರೈತರು ಬದುಕಲು ಸಾಧ್ಯ. ಕಾಡು ಕಡಿದಿದ್ದರಿಂದ ಮಡಿಕೇರಿಯಲ್ಲಿ ಏನೆಲ್ಲ ಅನಾಹುತಗಳಾದವು ಎಂಬುದನ್ನು ನೋಡಿದ್ದೇವೆ. ಅಂತಹ ದುರಂತಗಳಿಗೆ ಅವಕಾಶ ಮಾಡಿಕೊಡಬಾರದು. ಇಎಸ್‌ಜೆಡ್‌ ವ್ಯಾಪ್ತಿಯನ್ನು ಯಾವುದೇ ಕಾರಣಕ್ಕೂ ಕಡಿಮೆಗೊಳಿಸಬಾರದು’ ಎಂದು ಅವರು ಒತ್ತಾಯಿಸಿದರು.

‘ಕೆಎಚ್‌ಬಿ ರೈತರ ಜಮೀನು ಪಡೆದ ದುಡ್ಡು ನೀಡಬಹುದು. ಅದನ್ನು ಪಡೆದು ನಾವೇನು ಮಾಡಲು ಸಾಧ್ಯ. ನಾವು ಕೃಷಿ ಮಾಡಿಕೊಂಡು ಬದುಕುವವರು. ನಮ್ಮನ್ನು ನಮ್ಮ ಪಾಡಿಗೆ ಬಿಡಲಿ’ ಎಂದು ಇಂಡಲವಾಡಿಯ ರೈತ ಶ್ರೀನಿವಾಸ ಬಿ. ಹೇಳಿದರು.

‘ಬೆಂಗಳೂರು ನಗರಕ್ಕೆ ನೀರು ಪೂರೈಸುವುದಕ್ಕೇ ಜಲಮಂಡಳಿ ತಿಣುಕಾಡುತ್ತಿದೆ. ಇನ್ನು ಸೂರ್ಯನಗರ ನಾಲ್ಕನೇ ಹಂತಕ್ಕೆ ನೀರನ್ನು ಎಲ್ಲಿಂದ ತರುತ್ತಾರೆ’ ಎಂದು ಅವರು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು