ಬುಧವಾರ, ಜನವರಿ 29, 2020
30 °C
‘ಎಕ್ಸ್‌ಕಾನ್‌’ ಕಟ್ಟಡ ನಿರ್ಮಾಣ ಉಪಕರಣಗಳ ವಸ್ತುಪ್ರದರ್ಶನದಲ್ಲಿ ಯಡಿಯೂರಪ್ಪ ವಿಶ್ವಾಸ

ರಾಜ್ಯದಲ್ಲಿ ₹ 2.87ಲಕ್ಷ ಕೋಟಿ ಹೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿದೇಶಿ ನೇರ ಹೂಡಿಕೆಯಲ್ಲಿ ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 2020ರ ಏಪ್ರಿಲ್‍ನಲ್ಲಿ ₹ 2.87ಲಕ್ಷ ಕೋಟಿ ಬಂಡವಾಳ ಹರಿದು ಬರಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ವತಿಯಿಂದ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಏರ್ಪಡಿಸಿರುವ ಕಟ್ಟಡ ನಿರ್ಮಾಣ ಸಲಕರಣೆಗಳು ಹಾಗೂ ತಂತ್ರಜ್ಞಾನ ಕುರಿತ ಅಂತರರಾಷ್ಟ್ರೀಯ ಮೇಳ ‘ಎಕ್ಸ್‌ಕಾನ್‌’ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಟ್ಟಡ ನಿರ್ಮಾಣ ವಲಯದಲ್ಲಿನ ಕೈಗಾರಿಕೆಗಳಿಗೆ ರಾಜ್ಯದಲ್ಲಿ ವಿಪುಲ ಅವಕಾಶಗಳಿವೆ. ನಿರ್ಮಾಣ ಕಾಮಗಾರಿ ಗಳ ತಂತ್ರಜ್ಞಾನದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಇನ್ನಷ್ಟು ಯೋಜನೆಗಳ ಮೂಲಕ ಈ ನಗರವನ್ನು ನಿರ್ಮಾಣ ಕಾಮಗಾರಿ ಸಲ ಕರಣೆ ಹಾಗೂ ತಂತ್ರಜ್ಞಾನದ ರಾಜಧಾನಿಯನ್ನಾಗಿ ರೂಪಿಸಲಿದ್ದೇವೆ’ ಎಂದು ಅವರು ತಿಳಿಸಿದರು.

ಸಿಐಐ ಅಧ್ಯಕ್ಷ ವಿಕ್ರಂ ಕಿರ್ಲೋಸ್ಕರ್‌, ‘ರಸ್ತೆ ನಿರ್ಮಾಣ ವಲಯದಲ್ಲಿ ಕೇಂದ್ರ ಸರ್ಕಾರವು ಹೆಚ್ಚು ಹೂಡಿಕೆ ಮಾಡುತ್ತಿರುವುದರಿಂದ, ವಹಿವಾಟು ವೆಚ್ಚವು ಕಡಿಮೆಯಾಗಲಿದೆ. ಕಟ್ಟಡ ನಿರ್ಮಾಣ ಉಪಕರಣಗಳ ಕೈಗಾರಿಕೆಯು ಸದ್ಯ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ’ ಎಂದು ತಿಳಿಸಿದರು. 

ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ, ‘ಭಾರತವು ಸದ್ಯ ಜಿಡಿಪಿಯ ಶೇ 5 ರಷ್ಟನ್ನು ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸುತ್ತಿದೆ. ಇದನ್ನು ಕನಿಷ್ಠ
ಶೇ 6ಕ್ಕೆ ಏರಿಸಬೇಕು. ಚೀನಾವು ಮೂಲ ಸೌಕರ್ಯ ಅಭಿವೃದ್ಧಿಗೆ ತನ್ನ ಜಿಡಿಪಿಯ ಶೇ 6ರಷ್ಟನ್ನು ಖರ್ಚು ಮಾಡುತ್ತಿದೆ’ ಎಂದರು.

ಡಿಸೆಂಬರ್ 14ರವರೆಗೆ ಎಕ್ಸ್‌ಕಾನ್‌ ನಡೆಯಲಿದೆ. 

ಬೆಮೆಲ್‌ನಿಂದ ಹೈಡ್ರಾಲಿಕ್‌ ಎಸ್ಕವೇಟರ್‌

ಬೆಮೆಲ್‌ ಅಭಿವೃದ್ಧಿಪಡಿಸಿರುವ ‘ಬಿಇ210ಎಲ್‌ಸಿ’ ನೂತನ ಹೈಡ್ರಾಲಿಕ್‌ ಎಸ್ಕವೇಟರ್‌ ಯಂತ್ರವನ್ನು ಬೆಮೆಲ್‌ನ ನಿರ್ದೇಶಕ (ರಕ್ಷಣೆ) ಆರ್.ಎಚ್. ಮುರಳೀಧರ ಅನಾವರಣಗೊಳಿಸಿದರು. ಮತ್ತೊಬ್ಬ ನಿರ್ದೇಶಕ ಎಂ.ವಿ. ರಾಜಶೇಖರ (ಗಣಿ ಮತ್ತು ನಿರ್ಮಾಣ) ಹಾಗೂ ಇತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು. 

ಇಂಧನ ಕ್ಷಮತೆಯುಳ್ಳ ಈ ‘ಬಿಇ210ಎಲ್‌ಸಿ’ ಯಂತ್ರ 21 ಸಾವಿರ ಕೆ.ಜಿ ತೂಕವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಕಟ್ಟಡ ನಿರ್ಮಾಣ ಮತ್ತು ಉತ್ಖನನ ಕಾರ್ಯಕ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಬೆಮೆಲ್‌ ಹೇಳಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು