ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಅಭಿವೃದ್ಧಿಗೆ ‘ತಜ್ಞರ ಕಾರ್ಯಪಡೆ’: ಡಿಕೆಶಿಗೆ ಮಾಜಿ ಮೇಯರ್‌ಗಳ ಸಲಹೆ

Published 1 ಜೂನ್ 2023, 22:06 IST
Last Updated 2 ಜೂನ್ 2023, 0:08 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ವೈಜ್ಞಾನಿಕ ಹಾಗೂ ಕ್ರಮಬದ್ಧ ಅಭಿವೃದ್ಧಿಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಗರ ತಜ್ಞರು, ಉದ್ಯಮಿಗಳು, ಎನ್‌ಆರ್‌ಐ, ಕಾರ್ಪೊರೇಟ್‌ ಸಂಸ್ಥೆ ಪ್ರತಿನಿಧಿಗಳ ನೆರವು ಪಡೆಯಲು ‘ಕಾರ್ಯಪಡೆ’ ರಚಿಸಲು ಮಾಜಿ ಮೇಯರ್‌ಗಳು ಸಲಹೆ ನೀಡಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಆಯೋಜಿಸಿದ್ದ ಮಾಜಿ ಮೇಯರ್‌ಗಳ ಸಭೆಯಲ್ಲಿ ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಅಭಿವೃದ್ಧಿ ಯೋಜನೆಗಳಿಗಾಗಿ ‘ಬೆಂಗಳೂರು ಅಜೆಂಡಾ ಕಾರ್ಯಪಡೆ’ಯನ್ನು ರಚಿಸಿದ್ದರು. ಅದೇ ರೀತಿಯಲ್ಲಿ ತಜ್ಞರ ಕಾರ್ಯಪಡೆ ರಚಿಸಬೇಕು. ದೇಶ ಹಾಗೂ ವಿದೇಶಗಳ ನಗರಗಳಲ್ಲಿನ ಅಭಿವೃದ್ಧಿ, ಕ್ರಿಯಾಯೋಜನೆಗಳ ಬಗ್ಗೆ  ಮಾಹಿತಿ ಪಡೆದು ಇಲ್ಲೂ ಅನುಷ್ಠಾನಗೊಳಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ವಿಧಾನಸಭೆ ಕ್ಷೇತ್ರಗಳಲ್ಲಿ ಅಗತ್ಯ ಹಾಗೂ ತುರ್ತಾಗಿ ಆಗಬೇಕಾಗಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ. ಅವುಗಳನ್ನು ಕೂಡಲೇ ಅನುಷ್ಠಾನಕ್ಕೆ ತರಲಾಗುವುದು’ ಎಂದು ಶಿವಕುಮಾರ್‌ ತಿಳಿಸಿದ್ದಾರೆ.

‘ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ನಗರದ ಮಾಜಿ ಮೇಯರ್‌ಗಳ ಜತೆ ಸಭೆ ಮಾಡಿ ಅವರ ಅಭಿಪ್ರಾಯ, ಸಲಹೆಗಳನ್ನು ಪಡೆದಿದ್ದೇನೆ. ಅಭಿವೃದ್ಧಿಗಾಗಿ ಹೇಗೆ ಹಣ ಸಂಗ್ರಹ ಮಾಡಬಹುದು. ಎಲ್ಲಿ ನೂನ್ಯತೆಗಳಿವೆ, ತ್ಯಾಜ್ಯ ನಿರ್ವಹಣೆ, ರಸ್ತೆಗಳಲ್ಲಿ ಕಸ ಹಾಕುತ್ತಿರುವವ ಮೇಲಿನ ಕ್ರಮದ ಬಗ್ಗೆ ಚರ್ಚೆ ಮಾಡಿದ್ದೇವೆ’ ಎಂದು ಡಿಸಿಎಂ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಕಸದ ವಾಹನ ಟ್ರ್ಯಾಕ್ ಮಾಡುವುದು, ಕಸವನ್ನು ಎಲ್ಲೆಂದರಲ್ಲಿ ಎಸೆಯುವ ವಾಹನಗಳಿಗೆ ಯಾವ ರೀತಿ ದಂಡ ವಿಧಿಸಬೇಕು. ಸ್ವಚ್ಛ ನಗರವಾಗಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದೇವೆ. ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

‘ಬೆಂಗಳೂರು ನಗರದ ಸರ್ವಪಕ್ಷ ಶಾಸಕರ ಸಭೆಯನ್ನು ಸೋಮವಾರ ಜೂನ್‌ 5ರಂದು ಕರೆದಿದ್ದು, 28 ಶಾಸಕರಿಂದಲೂ ಸಲಹೆಗಳನ್ನು ಪಡೆಯುತ್ತೇನೆ. ನಂತರ ನಮ್ಮ ಪಕ್ಷದ ಶಾಸಕರ ಜತೆ ಪ್ರತ್ಯೇಕ ಸಭೆ ಮಾಡುತ್ತೇನೆ. ನಗರದ ಸಮಗ್ರ ಅಭಿವೃದ್ಧಿ ನಮ್ಮ ಉದ್ದೇಶ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಶಿವಕುಮಾರ್‌ ತಿಳಿಸಿದರು.

ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ, ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಸಮಿತಿ ರಚನೆ ಮಾಡಲಾಗಿದೆ. ಆ ಸಮಿತಿ ವರದಿ ನೀಡಿದ ಮೇಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಹಿರಿಯ ಮುಖಂಡ ಬಿ.ಎಲ್. ಶಂಕರ್, ಮಾಜಿ ಮೇಯರ್‌ಗಳಾದ ಜೆ. ಹುಚ್ಚಪ್ಪ, ರಾಮಚಂದ್ರಪ್ಪ, ಪದ್ಮಾವತಿ, ಪಿ.ಆರ್. ರಮೇಶ್, ವೆಂಕಟೇಶ ಮೂರ್ತಿ, ಸಂಪತ್ ರಾಜ್, ಮಂಜುನಾಥರೆಡ್ಡಿ, ಡಿಸಿಸಿ ಅಧ್ಯಕ್ಷ ಕೃಷ್ಣಪ್ಪ, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಸತ್ಯನಾರಾಯಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT