ಪಿಎಸ್‌ಐ ಸಮವಸ್ತ್ರ ಧರಿಸಿ ₹ 80 ಲಕ್ಷ ಸುಲಿಗೆ: ಮೂವರ ಸೆರೆ

ಬೆಂಗಳೂರು: ಪಿಎಸ್‌ಐ ಸಮವಸ್ತ್ರ ಧರಿಸಿ, ಅಡಿಕೆ ವ್ಯಾಪಾರಿಯ ಕಾರಿನಲ್ಲಿದ್ದ ₹ 80 ಲಕ್ಷವನ್ನು ದೋಚಿ ಪರಾರಿಯಾಗಿದ್ದ ಆಂಧ್ರಪ್ರದೇಶದ ಮೂವರು ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.
ಕಡಪ ಜಿಲ್ಲೆಯ ಭತಲ್ ಶಿವರಾಮ್ ಕೃಷ್ಣ ಯಾದವ್ ಅಲಿಯಾಸ್ ‘ಗಲ್ಲಿ ರೌಡಿ’ (19), ಸಹೋದರರಾದ ಶೇಖ್ ಚೆಂಪತಿ ಲಾಲ್‌ಬಾಷಾ (36) ಹಾಗೂ ಶೇಖ್ ಚೆಂಪತಿ ಜಾಕೀರ್ (27) ಎಂಬು ವವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
‘ಭತಲ್ ಶಿವರಾಮ್ ನೀಡಿದ ಮಾಹಿತಿ ಮೇರೆಗೆ, ರಕ್ತಚಂದನ ಅಕ್ರಮ ಸಾಗಾಟ ಹಾಗೂ ಮಾರಾಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ತಿರುಪತಿಯ ವಿಶೇಷ ಕಾರಾಗೃಹದಲ್ಲಿದ್ದ ಸಹೋದರರನ್ನು ಅಧಿಕಾರಿಗಳ ಅನುಮತಿ ಪಡೆದು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಆಂಧ್ರಪ್ರದೇಶದ ಬೇರೆ ಬೇರೆ ಠಾಣೆಗಳಲ್ಲಿ ಶೇಖ್ ಚೆಂಪತಿ ಲಾಲ್ ಬಾಷಾ ವಿರುದ್ಧ 54 ಹಾಗೂ ಶೇಖ್ ಚೆಂಪತಿ ಜಾಕೀರ್ ವಿರುದ್ಧ 33 ಪ್ರಕರಣಗಳಿವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?: ‘ಡಿಸೆಂಬರ್ 27 ರಂದು ಮಧ್ಯಾಹ್ನ 1.30ರ ಸಮಯದಲ್ಲಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಂತಿ ನಗರ ಬಸ್‌ನಿಲ್ದಾಣ ಸಮೀಪ ಅಡಿಕೆ ವ್ಯಾಪಾರಕ್ಕೆ ಸಂಬಂಧಿಸಿದ ಹಣವನ್ನು ಕಾರಿನಲ್ಲಿ ಕೊಂಡೊಯ್ಯಲಾಗುತ್ತಿತ್ತು. ಪಿಎಸ್‌ಐ ಸಮವಸ್ತ್ರದಲ್ಲಿ ರಿವೋಲಿ ಜಂಕ್ಷನ್‌ನ ಬಳಿ ಬಂದ ಆರೋಪಿಗಳು ತಾವು ಪೊಲೀಸರೆಂದು ಪರಿಚಯಿಸಿಕೊಂಡು ಕಾರು ತಡೆದಿದ್ದರು. ನಂತರ, ಚಾಲಕನಿಗೆ ಥಳಿಸಿ ಹಣ ದೋಚಿ ಪರಾರಿಯಾಗಿದ್ದರು’ ಎಂದು ಮೂಲಗಳು ಹೇಳಿವೆ.
ಸುಲಿಗೆ ಹಣದಲ್ಲಿ ಜೂಜಾಟ: ‘ಆರೋಪಿಗಳಿಗೆ ಜೂಜಾಟದ ಶೋಕಿ ಇತ್ತು. ಸುಲಿಗೆ ಹಣದಲ್ಲಿ ₹ 43 ಲಕ್ಷವನ್ನು ಜೂಜಾಟದಲ್ಲಿ ಕಳೆದುಕೊಂಡಿದ್ದಾರೆ. ಉಳಿಕೆ ₹ 37 ಲಕ್ಷವನ್ನು ಜಪ್ತಿ ಮಾಡ ಲಾಗಿದೆ’ ಎಂದು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.