ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೆ ಅಧಿಕಾರಿಗಳಿಗೆ ಘೇರಾವ್

ಪೆರಿಫೆರಲ್ ವರ್ತುಲ ರಸ್ತೆ: ಹೆಚ್ಚಿನ ಪರಿಹಾರಕ್ಕೆ ರೈತರಿಂದ ಬೇಡಿಕೆ
Last Updated 18 ಡಿಸೆಂಬರ್ 2019, 20:04 IST
ಅಕ್ಷರ ಗಾತ್ರ

ಹೆಸರಘಟ್ಟ: ಪೆರಿಫೆರಲ್ ವರ್ತುಲ ರಸ್ತೆ ಕಾಮಗಾರಿಯ ಭೂಸ್ವಾಧೀನ ಸಲುವಾಗಿ ಸರ್ವೆ ಕಾರ್ಯಕ್ಕೆ ಬಂದಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಾಳತಮ್ಮನಹಳ್ಳಿಯ ರೈತರು ಮತ್ತು ಗ್ರಾಮಸ್ಥರು ಬುಧವಾರ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.

ರೈತರು ಈ ಕಾಮಗಾರಿಗಾಗಿ ಬಿಟ್ಟುಕೊಡುವ ಭೂಮಿಗೆ ಪ್ರತಿಯಾಗಿ ನೀಡುವ ಪರಿಹಾರದ ಮೊತ್ತವನ್ನು ನಿಗದಿ ಮಾಡುವವರೆಗೆ ಯಾವುದೇ ಕಾರಣಕ್ಕೂ ಸರ್ವೆ ಮಾಡಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ಈ ಬೆಳವಣಿಗೆಯಿಂದ ವಿಚಲಿತಗೊಂಡಸರ್ವೆ ಅಧಿಕಾರಿಗಳು ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ಕೆ.ಮಥಾಯಿ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡರು. ಶನಿವಾರದೊಳಗೆ ಪರಿಹಾರ ಹಣವನ್ನು ನಿಗದಿ ಮಾಡಿ ಎಂದು ರೈತರು ಪಟ್ಟು ಹಿಡಿದರು.

‘15 ವರ್ಷಗಳಿಂದ ಪ್ರತಿ ವರ್ಷ ಸರ್ವೆ ಮಾಡುತ್ತಲೇ ಇದ್ದೀರಿ. ಆದರೆ, ರೈತರ ಭೂಮಿಗೆ ಇನ್ನೂ ಪರಿಹಾರ ಹಣ ಎಷ್ಟು ಎಂದು ನಿಗದಿ ಮಾಡಿಲ್ಲ. ಒಂದೊಂದು ಸಭೆಯಲ್ಲಿ ಒಂದೊಂದು ರೀತಿ ಮೊತ್ತವನ್ನು ನಿಗದಿ ಮಾಡಲಾಗುತ್ತಿದೆ. ಈ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ರಘು ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಜೊತೆ ಮಾತನಾಡುತ್ತೇವೆ. ಒಳ್ಳೆಯ ಪರಿಹಾರ ಮೊತ್ತ ಕೊಡಿಸುತ್ತೇವೆ– ಸಹಕರಿಸಿ ಎಂದು ಕೇಳುತ್ತಾರೆ. ಆದರೆ ಇಂದಿನ ತನಕ ಮುಖ್ಯಮಂತ್ರಿಗಳ ಜೊತೆ ರೈತರ ಸಭೆಯನ್ನು ಆಯೋಜಿಸಿಲ್ಲ’ ಎಂದು ಬ್ಯಾಲಕೆರೆ ಗ್ರಾಮದ ರೈತ ವಿಜಯ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಕೆ.ಮಥಾಯಿ, ‘ರೈತರ ಭೂಮಿಗೆ ಪರಿಹಾರ ಹಣ ನಿಗದಿಯಾದ ಬಳಿಕವೇ ಸರ್ವೆ ಮುಂದುವರಿಸಲಾಗುವುದು. ರೈತರಿಗೆ ಮೋಸ ಮಾಡುವ ಯಾವ ಅಲೋಚನೆಯೂ ಅಧಿಕಾರಿಗಳಿಗೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಾವು ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಲು ಸಿದ್ಧತೆ ನಡೆಸಿದ್ದೇವೆ. ಈ ಸಲುವಾಗಿಯೇ ₹ 700 ಕೋಟಿ ಮೀಸಲಿಡಲಾಗಿದೆ. ರೈತರು ಹೆಚ್ಚಿನ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಚರ್ಚಿಸುತ್ತೇವೆ’ ಎಂದು ಮಥಾಯಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT