ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಸ್ಟ್ಯಾಗ್‌ನಿಂದ ಸಿಕ್ಕಿಬಿದ್ದ ಕಾರು ಕಳ್ಳರು

ಕಳ್ಳತನ ಮಾಡಿದ್ದ ₹ 2.50 ಕೋಟಿ ಮೌಲ್ಯದ 14 ಐಷಾರಾಮಿ ಕಾರುಗಳು ಜಪ್ತಿ
Last Updated 15 ಫೆಬ್ರುವರಿ 2020, 21:58 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ನಿವಾಸಿಯೊಬ್ಬರ ಕಾರೊಂದನ್ನು ಕದ್ದು ಪರಾರಿಯಾಗುತ್ತಿದ್ದ ಆರೋಪಿ ರುಹುಲ್ ಕುದೂಸ್ (42) ಎಂಬಾತ, ತಮಿಳುನಾಡಿನ ಕೃಷ್ಣಗಿರಿಯ ಟೋಲ್‌ಗೇಟ್‌ನಲ್ಲಿ ದಾಖಲಾಗಿದ್ದ ‘ಫಾಸ್ಟ್ಯಾಗ್‌’ ಮಾಹಿತಿಯಿಂದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

‘ರಸ್ತೆ ಹಾಗೂ ಮನೆಗಳ ಮುಂದೆ ನಿಲ್ಲಿಸುತ್ತಿದ್ದ ಕಾರುಗಳನ್ನು ಕಳವು ಮಾಡುತ್ತಿದ್ದ ಆರೋಪದಡಿ ತಿರುಚನಾಪಲ್ಲಿಯ ತಲೈನಗರದ ರುಹುಲ್‌ನನ್ನು ಬಂಧಿಸಲಾಗಿದೆ. ಆತನಿಂದ₹ 2.50 ಕೋಟಿ ಮೌಲ್ಯದ 14 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಹುಳಿಮಾವು ಪೊಲೀಸರು ಹೇಳಿದರು.

‘ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರು ನ. 19ರಂದು ರಾತ್ರಿ ಮನೆ ಮುಂದೆ ಇನ್ನೋವಾ ಕಾರು ನಿಲ್ಲಿಸಿದ್ದರು. ತಡರಾತ್ರಿ ಮನೆ ಬಳಿ ಬಂದಿದ್ದ ಆರೋಪಿ, ಲಾಕ್ ತೆರೆದು ಕಾರು ಕದ್ದುಕೊಂಡು ತಮಿಳುನಾಡಿನತ್ತ ಹೊರಟಿದ್ದ. ಅದೇ ವೇಳೆ ಕೃಷ್ಣಗಿರಿ ಟೋಲ್‌ಗೇಟ್ ದಾಟಿದ್ದ.

‘ಟೋಲ್‌ಗೇಟ್‌ನಲ್ಲಿ ಕಾರಿನ ಫಾಸ್ಟ್ಯಾಗ್ ಸ್ಟಿಕ್ಕರ್ ಸ್ಕ್ಯಾನ್ ಆಗಿ ಹಣ ಕಡಿತವಾಗಿತ್ತು. ಅದರ ಸಂದೇಶ ಕಾರು ಮಾಲೀಕರ ಮೊಬೈಲ್‌ಗೆ ಬಂದಿತ್ತು. ಅದೇ ಸಂದೇಶ ಆಧರಿಸಿ ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿಬಿದ್ದ’ ಎಂದು ಪೊಲೀಸರು ವಿವರಿಸಿದರು.

‘ಕೇರಳದ ಸುರೇಶ್, ತಮಿಳುನಾಡಿನ ಕುಮಾರ್, ವೆಂಕಟೇಶ್ ಹಾಗೂ ಶಶಿಕುಮಾರ್ ಎಂಬುವರೂ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದರು ಎಂಬು
ದಾಗಿ ಆರೋಪಿ ಹೇಳಿದ್ದಾನೆ. ಇದೊಂದು ಅಂತರರಾಜ್ಯ ಕಳ್ಳರ ತಂಡ ಎಂಬ ಅನುಮಾನವಿದ್ದು, ಕೆಲ ಆರೋಪಿಗಳು ತಲೆಮರೆಸಿಕೊಂಡಿ
ದ್ದಾರೆ’ ಎಂದು ಹೇಳಿದರು.

‘ನಗರದಲ್ಲಿ ಕದಿಯುತ್ತಿದ್ದ ಕಾರುಗಳ ನೋಂದಣಿ ಫಲಕವನ್ನು ಆರೋಪಿಗಳು ಬದಲಾಯಿಸುತ್ತಿದ್ದರು. ನಂತರ ಕಾರುಗಳನ್ನು ತಮಿಳುನಾಡು ಹಾಗೂ ಕೇರಳದಲ್ಲಿ ಕಡಿಮೆ ಬೆಲೆಗೆ ಮಾರುತ್ತಿದ್ದರು’ ಎಂದು ತಿಳಿಸಿದರು.

ಸಿಕ್ಕಿಬಿದ್ದ ಕಳ್ಳ ನವೀನ್: ಇನ್ನೊಂದು ಪ್ರಕರಣದಲ್ಲಿ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಾರು ಕಳವು ಮಾಡಿದ್ದ ನವೀನ್ ಎಂಬಾತನೂ ಫಾಸ್ಟ್ಯಾಗ್‌ ಸ್ಟಿಕ್ಕರ್‌ನಿಂದಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆತನಿಂದ 8 ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಕದ್ದ ಕಾರನ್ನು ಆರೋಪಿ ತಮಿಳು ನಾಡಿಗೆ ತೆಗೆದುಕೊಂಡು ಹೊರಟಿದ್ದ. ಕೃಷ್ಣಗಿರಿ ಟೋಲ್‌ಗೇಟ್‌ನಲ್ಲಿ ಫಾಸ್ಟ್ಯಾಗ್‌ ಸ್ಟಿಕರ್ ಸ್ಕ್ಯಾನ್ ಆಗಿತ್ತು. ಅದರ ಸಂದೇಶ ಮಾಲೀಕನಿಗೆ ಬಂದಿತ್ತು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT