ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ಫಾಸ್ಟ್ಯಾಗ್ ಸ್ಟಿಕರ್ ಕೊರತೆ ?

* ಕೌಂಟರ್‌ ಎದುರು ಸರದಿ ಮುಂದುವರಿಕೆ
Last Updated 16 ಡಿಸೆಂಬರ್ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ಫಾಸ್ಟ್ಯಾಗ್‌ ಸ್ಟಿಕರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಕೊರತೆಯೂ ಎದುರಾಗಿದ್ದು, ಕೌಂಟರ್‌ಗಳನ್ನು ಹೊರತುಪಡಿಸಿ ಅಂಚೆ ಮೂಲಕ ಸ್ಟಿಕರ್‌ಗಳು ವಾಹನಗಳ ಮಾಲೀಕರನ್ನು ತಲುಪುವುದು ತಡವಾಗುತ್ತಿದೆ.

ದೇಶದ ಬಹುತೇಕ ಟೋಲ್‌ಗೇಟ್‌ಗಳಲ್ಲಿ ಎರಡು ವರ್ಷದಿಂದಲೇ ಜಾರಿಗೆ ತಂದಿರುವ ಫಾಸ್ಟ್ಯಾಗ್ ವ್ಯವಸ್ಥೆಯನ್ನು ಜ. 15ರಿಂದ ಕಡ್ಡಾಯಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ರಾಷ್ಟ್ರೀಯ ಹೆದ್ದಾರಿಗಳನ್ನು ಬಳಸುವ ವಾಹನಗಳ ಮಾಲೀಕರು ಸ್ಟಿಕರ್‌ ಪಡೆಯಲು ಆಸಕ್ತಿ ತೋರುತ್ತಿದ್ದು, ಅವರಿಗೆ ಅಗತ್ಯವಿರುವಷ್ಟು ಸ್ಟಿಕರ್‌ಗಳು ಪೂರೈಕೆ ಆಗುತ್ತಿಲ್ಲ.

ತುಮಕೂರು ರಸ್ತೆ, ಹೊಸೂರು ರಸ್ತೆ, ದೇವನಹಳ್ಳಿ ರಸ್ತೆ, ಹೊಸಕೋಟೆ ರಸ್ತೆ ಹಾಗೂ ನೈಸ್‌ ರಸ್ತೆಗಳಲ್ಲಿರುವ ಟೋಲ್‌ಗೇಟ್‌ ಪಕ್ಕವೇ ಕೌಂಟರ್‌ಗಳನ್ನು ತೆರೆಯಲಾಗಿದೆ. ದಿನದ ಲೆಕ್ಕದಲ್ಲಿ ಸ್ಟಿಕರ್‌ಗಳನ್ನು ವಿತರಿಸಲಾಗುತ್ತಿದ್ದು, ಸರದಿಯಲ್ಲಿ ನಿಂತವರಿಗೆ ಮಾತ್ರ ಸ್ಟಿಕರ್‌ ಲಭ್ಯವಾಗುತ್ತಿದೆ.

ಕೌಂಟರ್‌ಗಳಲ್ಲಿ ಕಾಯುವ ಸಹವಾಸವೇ ಬೇಡವೆಂದು ಬ್ಯಾಂಕ್‌ಗಳು ಹಾಗೂ ಆನ್‌ಲೈನ್‌ ಮೂಲಕ ಬುಕ್ಕಿಂಗ್ ಮಾಡಿದವರಿಗೆ ನಿಗದಿತ ಸಮಯಕ್ಕೆ ಸ್ಟಿಕರ್‌ಗಳು ಸಿಗುತ್ತಿಲ್ಲ. ಈ ಸಂಬಂಧ ಹಲವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದೂರು ನೀಡಿದ್ದು, ತ್ವರಿತವಾಗಿ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ.

‘ದೇಶದ 10 ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಫಾಸ್ಟ್ಯಾಗ್‌ ಸ್ಟಿಕರ್‌ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬಹುತೇಕ ಬ್ಯಾಂಕ್‌ಗಳಲ್ಲಿ ನೋಂದಣಿ ಮಾಡಿಕೊಳ್ಳುವವರ ಪೈಕಿ ಕೆಲವರಿಗೆ ಮಾತ್ರ ಸ್ಟಿಕರ್ ಸಿಗುತ್ತಿದೆ. ಉಳಿದವರಿಗೆ ಸ್ಟಿಕರ್‌ ಇಲ್ಲವೆಂದು ಹೇಳಿ ವಾಪಸು ಕಳುಹಿಸುತ್ತಿದ್ದಾರೆ’ ಎಂದು ಕಾರಿನ ಮಾಲೀಕ ಸೋಮಶೇಖರ್ ದೂರಿದರು.

‘ಬ್ಯಾಂಕ್‌ಗಳ ಜಾಲತಾಣಗಳಲ್ಲಿ ಆನ್‌ಲೈನ್‌ ಮೂಲಕ ಸ್ಟಿಕರ್‌ ಪಡೆಯಲು ಅವಕಾಶವಿದೆ. ಈ ಬಗ್ಗೆ ಜಾಲತಾಣದಲ್ಲೂ ಜಾಹೀರಾತು ನೀಡಲಾಗಿದೆ. ಅಲ್ಲಿ ನೋಂದಣಿ ಮಾಡಿಕೊಂಡು ಹಲವು ದಿನವಾದರೂ ಸ್ಟಿಕರ್‌ಗಳು ಬಂದಿಲ್ಲ’ ಎಂದು ಹೇಳಿದರು.

ಅಮೆಜಾನ್‌ನಲ್ಲಿ ಬುಕ್ಕಿಂಗ್ ಸ್ಥಗಿತ; ಇ– ಕಾಮರ್ಸ್‌ ಸಂಸ್ಥೆಯಾದ ‘ಅಮೆಜಾನ್’ ಜಾಲತಾಣದಲ್ಲೂ ಫಾಸ್ಟ್ಯಾಗ್‌ ಸ್ಟಿಕರ್‌ಗಳ ಬುಕ್ಕಿಂಗ್ ಸ್ಥಗಿತವಾಗಿದೆ.

ಬಹುತೇಕ ವಾಹನಗಳ ಮಾಲೀಕರು ಅಮೆಜಾನ್‌ನಲ್ಲಿ ಸ್ಟಿಕರ್ ಖರೀದಿಸಿದ್ದಾರೆ. ಆ ಪೈಕಿ ಹಲವರಿಗೆ ಅಂಚೆ ಮೂಲಕ ಸ್ಟಿಕರ್‌ಗಳು ಬಂದು ತಲುಪಿವೆ. ಹೊಸದಾಗಿ ಸ್ಟಿಕರ್‌ಗಳ ನೋಂದಣಿ ಹಾಗೂ ವಿತರಣೆ ಸಂಪೂರ್ಣವಾಗಿ ಬಂದ್‌ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಾಧಿಕಾರದ ಅಧಿಕಾರಿಗಳು ಲಭ್ಯರಾಗಲಿಲ್ಲ.

ಸ್ಟಿಕರ್‌ ವಿತರಿಸುವ ಬ್ಯಾಂಕ್‌ಗಳು

ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ ಬ್ಯಾಂಕ್, ಇಕ್ಯೂಟಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್

ಎಲ್ಲೆಡೆ ಫಾಸ್ಟ್ಯಾಗ್‌ಗೆ ಪ್ರತ್ಯೇಕ ಸಾಲು

ನಗರದ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೊಸಕೋಟೆ, ದೇವನಹಳ್ಳಿ, ತುಮಕೂರು ರಸ್ತೆ ಹಾಗೂ ನೈಸ್‌ ರಸ್ತೆಯ ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ಯಾಗ್ ವಾಹನಗಳ ಪ್ರವೇಶಕ್ಕೆ ಪ್ರತ್ಯೇಕ ಸಾಲುಗಳನ್ನು ಮೀಸಲಿಡಲಾಗಿದೆ. ಅದರ ಜೊತೆಗೆ ನಗದು ಸ್ವೀಕಾರ ಸಾಲುಗಳು ಇವೆ.

‘ಶೇ 25ರಷ್ಟು ನಗದು ಸ್ವೀಕಾರ ಹಾಗೂ ಶೇ 75ರಷ್ಟು ಫಾಸ್ಟ್ಯಾಗ್ ವ್ಯವಸ್ಥೆ ಮಾಡುವಂತೆ ಪ್ರಾಧಿಕಾರ ಹೇಳಿದೆ. ವಾಹನ ದಟ್ಟಣೆ ನೋಡಿಕೊಂಡು ಹಾಗೂ ಜನರಿಗೆ ತೊಂದರೆಯಾಗದಂತೆ ಎರಡೂ ವ್ಯವಸ್ಥೆಗೂ ಸಮಾನವಾಗಿ ಸಾಲುಗಳನ್ನು ಬಳಸಲಾಗುತ್ತಿದೆ’ ಎಂದು ಎಲೆಕ್ಟ್ರಾನಿಕ್ ಸಿಟಿ ಟೋಲ್‌ಗೇಟ್ ಸಿಬ್ಬಂದಿ ಹೇಳಿದರು.

‘ಎಲ್ಲ ಸಾಲುಗಳಲ್ಲಿ ಫಾಸ್ಟ್ಯಾಗ್ ಇದ್ದು, ಸ್ಟಿಕರ್ ಇರುವ ವಾಹನ ಯಾವುದಾದರೂ ಸಾಲಿನಲ್ಲಿ ಹೋಗಬಹುದು. ನಗದು ಸ್ವೀಕಾರವಿದ್ದರೆ ಮಾತ್ರ ಅದಕ್ಕಾಗಿ ಮೀಸಲಿಟ್ಟ ಸಾಲಿನಲ್ಲೇ ಹೋಗಬೇಕು’ ಎಂದು ಹೊಸಕೋಟೆ ಟೋಲ್‌ಗೇಟ್‌ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT