ಶುಕ್ರವಾರ, ಜನವರಿ 22, 2021
24 °C

ಎಫ್‌ಡಿಎ, ಎಸ್‌ಡಿಎ ಆಕಾಂಕ್ಷಿತರ ಪ್ರತಿಭಟನೆ; ನೇಮಕಾತಿ ಆದೇಶ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನೇಮಕಾತಿ ಆದೇಶ ನೀಡಬೇಕು ಎಂದು ಒತ್ತಾಯಿಸಿ ಎಫ್‌ಡಿಎ, ಎಸ್‌ಡಿಎ ಹುದ್ದೆ ಆಕಾಂಕ್ಷಿಗಳು ನಗರದ ಮೌರ್ಯ ವೃತ್ತದಲ್ಲಿ ಬುಧವಾರ ಮಳೆಯಲ್ಲಿಯೇ ಪ್ರತಿಭಟನೆ ನಡೆಸಿದರು.

‘2017ರಲ್ಲಿ ನಡೆದ ಪರೀಕ್ಷೆಯಲ್ಲಿ ಎಫ್‌ಡಿಎ–ಎಸ್‌ಡಿಎ ಹುದ್ದೆಗಳಿಗೆ 1,800ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆದರೆ, ಕೋವಿಡ್‌ ನೆಪವೊಡ್ಡಿ ಆರ್ಥಿಕ ಇಲಾಖೆಯು ನೇಮಕಾತಿ ತಡೆ ಹಿಡಿದಿದೆ’ ಎಂದು ಅಭ್ಯರ್ಥಿಗಳು ದೂರಿದರು.

‘ಇದೇ ಅಧಿಸೂಚನೆಯಡಿ ನ್ಯಾಯಾಂಗ ಇಲಾಖೆಗೆ ಆಯ್ಕೆಯಾದ 428 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. ಇನ್ನುಳಿದ 44 ಇಲಾಖೆಗಳ 1,414 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದೆ ತಾರತಮ್ಯ ಎಸಗಲಾಗಿದೆ’ ಎಂದು ಆರೋಪಿಸಿದರು.

‘ಮೌರ್ಯ ವೃತ್ತದಲ್ಲಿ ನ.22ರಿಂದ 26ರವರೆಗೆ ಧರಣಿ ಮಾಡಿದ್ದಾಗ, ನೇಮಕಾತಿ ಆದೇಶ ಪತ್ರ ನೀಡಲು ಆದೇಶ ನೀಡುತ್ತೇನೆ ಎಂದು ಸರ್ಕಾರದ ಆಗಿನ ಮುಖ್ಯಕಾರ್ಯದರ್ಶಿಯವರು ಭರವಸೆ ನೀಡಿದ್ದರು. ಅವರ ಮಾತಿನಂತೆ ಧರಣಿ ವಾಪಸ್ ತೆಗೆದುಕೊಂಡಿದ್ದೆವು. ಆದರೆ, ನಮ್ಮ ಬೇಡಿಕೆಯನ್ನು ಈವರೆಗೂ ಸರ್ಕಾರ ಈಡೇರಿಸಿಲ್ಲ’ ಎಂದು ಆಕಾಂಕ್ಷಿ ಶರತ್‌ ಹೇಳಿದರು.

‘ಸರ್ಕಾರ ನಮ್ಮ ಬಗ್ಗೆ ಅಸಡ್ಡೆ ತೋರುತ್ತಿದೆ. ಪರೀಕ್ಷೆ ಮುಗಿದು ನಾಲ್ಕು ವರ್ಷ ಕಳೆದರೂ ನೇಮಕಾತಿ ಆದೇಶ ನೀಡದಿರುವುದು ಸರಿಯಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ನೂರಾರು ಅಭ್ಯರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು