ಶುಕ್ರವಾರ, ಮಾರ್ಚ್ 24, 2023
30 °C

ಬಿಐಎಎಲ್: ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ‌ ನಿರ್ಮಾಣಕ್ಕೆ 27ರಂದು ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್‌ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಇದೇ 27ರಂದು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಶುಕ್ರವಾರ ಇಲ್ಲಿ ತಿಳಿಸಿದರು. ಈ ಕುರಿತು ಇಲ್ಲಿ ನಡೆದ ಅಧಿಕಾರಿಗಳ ಸಭೆ ಬಳಿಕ ಅವರು ಮಾತನಾಡಿದರು.

ಜೂನ್‌ 27ರಂದು ಕೆಂಪೇಗೌಡರ 511ನೇ ಜಯಂತಿ ಇದೆ. ಹೀಗಾಗಿ ಅಂದು ಭೂಮಿ ಪೂಜೆ ಇಟ್ಟುಕೊಂಡಿದ್ದು, ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಚರ್ಚಿಸಿದ ನಂತರ ಅಂತಿಮಗೊಳಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯೆ ಇರುವ ಗಾಂಧೀಜಿ ಪ್ರತಿಮೆಯನ್ನು ನಿರ್ಮಾಣ ಮಾಡಿದ ಖ್ಯಾತ ಕಲಾವಿದ ಅನಿಲ್‌ ರಾಮಸುತಾರ್‌ ಅವರಿಗೇ ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೂ ಗುತ್ತಿಗೆ ನೀಡುತ್ತಿದ್ದು, ಸದ್ಯದಲ್ಲೇ ಅವರೊಟ್ಟಿಗೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ ಎಂದರು.

ಪ್ರತಿಮೆ ನಿರ್ಮಾಣಕ್ಕೆ ಅಂದಾಜು 66 ಕೋಟಿ ರೂಪಾಯಿ ಬೇಕಾಗುತ್ತದೆ. ಪ್ರತಿಮೆಯ ಮಾದರಿ ಸಿದ್ಧ ಆಗಿದ್ದು, ಅದನ್ನು ಮುಖ್ಯಮಂತ್ರಿಯವರಿಗೆ ತೋರಿಸಿದ ನಂತರ ಅಂತಿಮಗೊಳಿಸಲಾಗುವುದು. ಕಾಮಗಾರಿಯನ್ನು ಒಂದು ವರ್ಷದಲ್ಲಿ ಮುಗಿಸುವ ಉದ್ದೇಶ ಇದೆ ಎಂದು ಅವರು ಹೇಳಿದರು.

ಪ್ರತಿಮೆ ಸ್ಥಳಕ್ಕಾಗಿಯೇ ವಿಮಾನ ನಿಲ್ದಾಣದ ಮುಂದಿನ 23 ಎಕರೆ ಜಾಗವನ್ನು ಗುರುತಿಸಿದ್ದು, ಅಲ್ಲಿ ಕಾಮಗಾರಿ ಆರಂಭಿಸುವುದಕ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಒಪ್ಪಿಗೆಯೂ ನೀಡಿದೆ. ಪ್ರತಿಮೆ ಸುತ್ತ ವಿಶೇಷ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಒಟ್ಟಾರೆ 80 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದು, ಪ್ರಮುಖ ಆಕರ್ಷಣೆಗಳಲ್ಲಿ ಇದು ಕೂಡ ಒಂದಾಗಲಿದೆ ಎಂದರು.

ಸಮಾಧಿ ಅಭಿವೃದ್ಧಿ

ಮಾಗಡಿ ತಾಲ್ಲೂಕಿನ ಕೆಂಪಾಪುರದಲ್ಲಿ ಕೆಂಪೇಗೌಡರ ಸಮಾಧಿ ಇದ್ದು, ಅದರ ಅಭಿವೃದ್ಧಿಗೆ 41 ಕೋಟಿ ರೂಪಾಯಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಸಮಾಧಿ ಜತೆಗೆ ಅದರ ಸುತ್ತಲಿನ ಪ್ರದೇಶ ಮತ್ತು ಊರಿನ ಕೆರೆಯನ್ನು ಕೂಡ ಅಭಿವೃದ್ಧಿಪಡಿಸಲಾಗುವುದು. ಈ ಸಲುವಾಗಿ ಭೂಸ್ವಾಧೀನ ಮಾಡುತ್ತಿದ್ದು, ಇದಕ್ಕೆ ಅಂದಾಜು 17 ಕೋಟಿ ಬೇಕಾಗುತ್ತದೆ ಎಂದರು.

ಈ ಎರಡೂ ಯೋಜನೆಗಳಿಗೆ ಐಡೆಕ್‌ ಸಂಸ್ಥೆ, ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಿದೆ.

ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಮೂಲಸೌಲಭ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್‌ ಮೋಹನ್‌, ಉಪ ಮುಖ್ಯಮಂತ್ರಿಯವರ ಕಾರ್ಯದರ್ಶಿ ಪಿ.ಪ್ರದೀಪ್‌, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ‍ವಿ.ಶ್ರಿನಿವಾಸಗೌಡ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು