ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಧಕರು ಬೆಳ್ಳಿ ತೆರೆಗೆ ಬರದೆ ಮರೆಯಾದರು’

ಲೇಖಕಿ ಪ್ರತಿಭಾ ನಂದಕುಮಾರ್ ಬೇಸರ *ಮರಾಠಿ ಚಿತ್ರ ‘ಆನಂದಿ ಗೋಪಾಲ್’ ಪ್ರದರ್ಶನ
Last Updated 1 ಮಾರ್ಚ್ 2020, 19:28 IST
ಅಕ್ಷರ ಗಾತ್ರ

ಬೆಂಗಳೂರು: ‘ವಿದೇಶಗಳಲ್ಲಿ ಚಿಕ್ಕ ಸಾಧನೆ ಮಾಡಿದವರನ್ನೂ ಬೆಳ್ಳಿ ತೆರೆಯ ಮೇಲೆ ದೊಡ್ಡದಾಗಿ ಬಿಂಬಿಸಲಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ದೊಡ್ಡ ಸಾಧನೆ ಮಾಡಿದವರ ಸಣ್ಣ ಚಿತ್ರವನ್ನೂ ನಿರ್ಮಿಸುವ ಕೆಲಸವಾಗಿಲ್ಲ’ ಎಂದು ಲೇಖಕಿ ಪ್ರತಿಭಾ ನಂದಕುಮಾರ್ ಬೇಸರ ವ್ಯಕ್ತಪಡಿಸಿದರು.

12ನೇ ಬೆಂಗಳೂರು ಅಂತರ ರಾಷ್ಟ್ರೀಯ ಸಿನಿಮೋತ್ಸವದ ಭಾಗವಾಗಿಭಾನುವಾರ ಮರಾಠಿ ಚಿತ್ರ ‘ಆನಂದಿ ಗೋಪಾಲ್’ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರವು ಆಯೋಜಿಸಿದ್ದ ‘ಚಲನಚಿತ್ರ ಮತ್ತು ಸ್ತ್ರೀ ಸಂವೇದನೆ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆನಂದಿಬಾಯಿ ಗೋಪಾಲರಾವ್ ಜೋಶಿ ಅವರುಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆದ ಮೊದಲ ಮಹಿಳೆ. 19 ನೇ ವರ್ಷದಲ್ಲಿ ವೈದ್ಯೆಯಾದ ಅವರು, 22ನೇ ವರ್ಷದಲ್ಲಿ ಅನಾರೋಗ್ಯದಿಂದ ನಿಧನರಾದರು. ಸ್ವತಃ ಕ್ಷಯ ರೋಗವಿದ್ದರೂ ಇತರ ರೋಗಿಗಳಿಗೆ ಸೇವೆ ಮಾಡಬೇಕೆಂಬ ಹಂಬಲ ಹೊಂದಿದ್ದರು’ ಎಂದರು.

‘ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಯೋಗ್ಯರಲ್ಲ ಎಂಬ ಮನಸ್ಥಿತಿಯ ಸಮಾಜದಲ್ಲಿ ಅವರ ಪತಿಗೋಪಾಲ್ ರಾವ್, ಮಡದಿಯ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು. 150 ವರ್ಷದ ಬಳಿಕ ಅವರ ಸಾಧನೆಯನ್ನು ಬೆಳ್ಳಿತೆರೆಯ ಮೇಲೆ ಕಣ್ತುಂಬಿಕೊಳ್ಳುತ್ತಿದ್ದೇವೆ. ಇದೇ ರೀತಿ ಹಲವಾರು ಸಾಧಕರು ಇನ್ನೂ ಬೆಳಕಿಗೆ ಬಂದಿಲ್ಲ. ಅಂತಹವರ ಜೀವನವನ್ನೂ ತೆರೆಯ ಮೇಲೆ ಕಾಣುವಂತಾಗಬೇಕು’ ಎಂದರು.

ಸಿನಿಮಾ ನಿರ್ದೇಶಕ ಪಿ.ಶೇಷಾದ್ರಿ, ‘ಜೀವನಾಧಾರಿತ ಸಿನಿಮಾಗಳಿಗೆ ಪ್ರೇಕ್ಷಕರಿರುವುದಿಲ್ಲ. ಆನಂದಿ ಅವರ ಜೀವನ ಚರಿತ್ರೆಯ ಬಗ್ಗೆ ನಾನೂ ಸಿನಿಮಾ ಮಾಡ ಬೇಕು ಅಂದುಕೊಂಡಿದ್ದೆ. ಆದರೆ, ಸಾಧ್ಯವಾಗಿರಲಿಲ್ಲ.ಜೀವನೋತ್ಸಾಹ ಮತ್ತು ಬದುಕಿನ ಬಗ್ಗೆ ನಂಬಿಕೆ ಮೂಡಿಸುವ ಈ ಮರಾಠಿ ಚಿತ್ರವನ್ನು ಪ್ರತಿಯೊಬ್ಬ ವೈದ್ಯ ಮತ್ತು ರೋಗಿಯೂ ವೀಕ್ಷಿಸಬೇಕು’ ಎಂದರು.

‘ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುತ್ತಾರೆ. ಅದೇ ರೀತಿ, ಮಹಿಳೆಯರ ಸಾಧನೆಯ ಹಿಂದೆ ಪುರುಷರೂ ಇರುತ್ತಾರೆ ಎನ್ನುವುದಕ್ಕೆ ಆನಂದಿ ಗೋಪಾಲ್ ಅವರ ಜೀವನ ಉತ್ತಮ ಉದಾಹರಣೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT