ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಗುತ್ತಿಗೆದಾರರ ವಿರುದ್ಧ ದೂರು

ಕಾಮಗಾರಿ ಮುಗಿಸದೆ ಬಿಲ್‌ ಪಡೆದ ಆರೋಪ
Last Updated 15 ಜೂನ್ 2020, 20:35 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯಿಂದ (ಬಿಬಿಎಂಪಿ) ಗುತ್ತಿಗೆ ಪಡೆದು ಕಾಮಗಾರಿ ಮುಗಿಸದೆ, ಕಳಪೆ ಕೆಲಸ ಮಾಡಿ ಪೂರ್ಣ ಬಿಲ್‌ ಪಡೆದ ಆರೋಪದ ಮೇಲೆ 9 ಗುತ್ತಿಗೆದಾರರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ವಿಶೇಷ ಕೋರ್ಟ್‌ನಲ್ಲಿ ದೂರು ದಾಖಲಿಸಿದೆ.

ಗುತ್ತಿಗೆದಾರರಾದ ಎನ್‌.ಸಿ. ನಾಗರಾಜ್‌, ಎಸ್‌.ಡಿ. ಶಶಿಕುಮಾರ್‌, ಭಾರತಿ ಶಶಿಕುಮಾರ್‌, ಜಿ. ಕುಮಾರಸ್ವಾಮಿ, ಎಂ. ನಾಗೇಶ್‌, ಸಿ. ಸುಬ್ರಮಣಿ, ಜಿ.ಎಸ್‌. ಶಿವಸ್ವಾಮಿ, ಬಾಬುರಾವ್‌ ಹಾಗೂ ಕೆ.ಎಸ್‌. ಭರತ್‌ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ದೂರು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಎಂಜಿನಿಯರ್‌ಗಳಿಗೆ ಸೇರಿದ ₹ 5.12 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಇ.ಡಿ ಜಪ್ತಿ ಮಾಡಿದೆ. ಬಿಬಿಎಂಪಿ ಮಂಜೂರು ಮಾಡಿದ್ದ ಕಾಮಗಾರಿಗಳನ್ನು ಸಂಪೂರ್ಣವಾಗಿ ಮತ್ತು ಸಮರ್ಪಕವಾಗಿ ಮುಗಿಸದೆ ಪೂರ್ಣ ಬಿಲ್‌ ಪಡೆದುಕೊಂಡ ಆರೋಪದ ಮೇಲೆ ಇ.ಡಿ ಒಟ್ಟು 40 ಗುತ್ತಿಗೆದಾರರು ಹಾಗೂ 42 ಅಧಿಕಾರಿಗಳ ವಿರುದ್ಧ ತನಿಖೆ ನಡೆಸುತ್ತಿದೆ.

ಆದರೆ, ಬಿಬಿಎಂಪಿ ಕಾಮಗಾರಿ ಸಂಬಂಧ ನೀಡಿದ್ದ ಕಾರ್ಯಾದೇಶದಲ್ಲಿ ನಿರ್ದಿಷ್ಟಪಡಿಸಿರುವ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತೋರಿಸಲು ಗುತ್ತಿಗೆದಾರರು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಇದಕ್ಕಾಗಿ ಅಪರಾಧಿಕ ಸಂಚು ಮಾಡಿದ್ದಾರೆ. ಆ ಮೂಲಕ ಭಾರಿ ವಂಚನೆ ಮಾಡಿದ್ದಾರೆ ಎಂದೂ ಇ.ಡಿ ದೂರಿದೆ.

ಗುತ್ತಿಗೆದಾರರು ಬಿಬಿಎಂಪಿಯಿಂದ ಪಡೆದ ಹೆಚ್ಚುವರಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಇ.ಡಿ ದೂರಿನಲ್ಲಿ ತಿಳಿಸಿದೆ. 2019ರ ಜನವರಿ 29ರಂದು ಗುತ್ತಿಗೆದಾರರಿಗೆ ಸೇರಿದ ₹ 5.12 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT