ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಕರಾರು ಸಲ್ಲಿಸದೆ ₹ 18.5 ಕೋಟಿ ನಷ್ಟ!

ಬೆಸ್ಕಾಂ ಮಾಜಿ ಕಾನೂನು ಅಧಿಕಾರಿ ವಿರುದ್ಧ ಎಫ್‌ಐಆರ್
Last Updated 17 ಡಿಸೆಂಬರ್ 2018, 19:50 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಗುತ್ತಿಗೆದಾರ ಸಂಸ್ಥೆ ಜತೆ ಶಾಮೀಲಾಗಿ ಬೆಂಗಳೂರು ವಿದ್ಯುತ್ ಪ್ರಸರಣ ನಿಗಮಕ್ಕೆ (ಬೆಸ್ಕಾಂ) ₹ 18.5 ಕೋಟಿ ನಷ್ಟ ಉಂಟು ಮಾಡಿದ ಆರೋಪದಡಿ ಬೆಸ್ಕಾಂನ ಮಾಜಿ ಕಾನೂನು ಅಧಿಕಾರಿ ಕೆ.ವಿನಾಯಕ್ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ನಿಗಮದ ಪ್ರಧಾನ ವ್ಯವಸ್ಥಾಪಕ (ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗ) ಡಾ.ಎಂ.ಮಹೇಶ್ ಅವರು ಶನಿವಾರ ದೂರು ಕೊಟ್ಟಿದ್ದಾರೆ. ವಂಚನೆ (ಐಪಿಸಿ 420), ಅಪರಾಧ ಸಂಚು (120ಬಿ) ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟ
ಉಂಟು ಮಾಡಿದ (409) ಆರೋಪಗಳಡಿ ಎಫ್‌ಐಆರ್ ದಾಖಲಿಸಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ವಿನಾಯಕ್‌ ಅವರಿಗೆ ಸೂಚಿಸಿದ್ದಾರೆ.

ದೂರಿನ ವಿವರ: ‘ಜ್ಞಾನಭಾರತಿಯ ಬಿಡಿಎ ಲೇಔಟ್ ನಿವಾಸಿಯಾದ ವಿನಾಯಕ್, ಹೊರಗುತ್ತಿಗೆ ಆಧಾರದಡಿ 2010ರ ಜೂನ್‌ನಿಂದ 2018ರ ಆಗಸ್ಟ್‌ವರೆಗೆಕೆ.ಜಿ.ವೃತ್ತದ ಬೆಸ್ಕಾಂ ಕಚೇರಿಯಲ್ಲಿ ಕಾನೂನು ಅಧಿಕಾರಿಯಾಗಿದ್ದರು. ಬೆಸ್ಕಾಂಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಾನೂನು ಹೋರಾಟಕ್ಕೆ ಸಲಹೆಗಳನ್ನು ಕೊಡುವುದು ಇವರ ಕೆಲಸವಾಗಿತ್ತು’ ಎಂದು ಮಹೇಶ್ ದೂರಿನಲ್ಲಿ ವಿವರಿಸಿದ್ದಾರೆ.

‘ರಾಜೀವ್ ಗಾಂಧಿ ಗ್ರಾಮೀಣ ವಿದ್ಯುತ್ ಯೋಜನೆಯಡಿ ನಾಲ್ಕು ಜಿಲ್ಲೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ಬೆಸ್ಕಾಂ ಮತ್ತು ಎಸ್‌ಪಿಎಂಲ್ ನಡುವೆ ತಕರಾರು ಉಂಟಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಮಧ್ಯಸ್ಥಿಕೆ ಕೇಂದ್ರವು (ಅರ್ಬಿಟ್ರಲ್ ಟ್ರಿಬ್ಯುನಲ್), ‘₹ 18.5 ಕೋಟಿಯನ್ನು ಗುತ್ತಿಗೆದಾರ ಸಂಸ್ಥೆಗೆ ನೀಡಬೇಕು’ ಎಂದು ಇದೇ ಮಾರ್ಚ್‌ನಲ್ಲಿ ಆದೇಶಿಸಿತು.’

‘ಈ ತೀರ್ಪಿನ ವಿರುದ್ಧ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು 90 ದಿನಗಳ ಕಾಲವಕಾಶವನ್ನೂ ನೀಡಲಾಗಿತ್ತು. ಆದರೆ, ವಿನಾಯಕ್ ಆ ಕೆಲಸವನ್ನು ಸರಿಯಾಗಿ ಮಾಡಲಿಲ್ಲ. ಗುತ್ತಿಗೆದಾರರ ಪರವಾಗಿ ನಿಂತುಕೊಂಡಿದ್ದ ಅವರು, ಮುಂದಿನ ಕಾನೂನು ಪ್ರಕ್ರಿಯೆ ‍ಪೂರ್ಣಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದರು.’

‘ಮೇಲ್ಮನವಿ ಸಲ್ಲಿಸುವುದಾಗಿ ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಂಡು ವಕಲತ್ತು ಸಹಿಯನ್ನೂ ಸಂಗ್ರಹಿಸಿದ್ದ ಅವರು, ಆ ಕಡತವನ್ನು ಉದ್ದೇಶಪೂರ್ವಕವಾಗಿ ತಮ್ಮ ಬಳಿಯೇ ಇಟ್ಟುಕೊಂಡರು. ಇದರಿಂದ ನಿಗದಿತ ಅವಧಿಯೊಳಗೆ ಮೇಲ್ಮನವಿ ಸಲ್ಲಿಸಲು ಆಗದೆ, ನಮ್ಮ ವಿರೋಧಿ ಗುತ್ತಿಗೆದಾರ ಕಂಪನಿಗೆ ₹ 18.5 ಕೋಟಿ ಪಾವತಿಸಬೇಕಾಯಿತು. ಹೀಗಾಗಿ, ಆರೋಪಿ ಸ್ಥಾನದಲ್ಲಿದ್ದ ಕಂಪನಿ ಜತೆ ಶಾಮೀಲಾಗಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ ವಿನಾಯಕ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಮಹೇಶ್ ದೂರಿನಲ್ಲಿ ಮನವಿ ಮಾಡಿದ್ದಾರೆ.

ಸದ್ಯದಲ್ಲೇ ಹೊಸಬರ ನೇಮಕ
‘ಮೇಲ್ಮನವಿ ಸಲ್ಲಿಸಲು ವಿಳಂಬ ಮಾಡಿದವರ ವಿರುದ್ಧ ಕ್ರಮ ಜರುಗಿಸುವಂತೆ ಕಾನೂನು ತಜ್ಞರು ಸಲಹೆ ಕೊಟ್ಟಿದ್ದಾರೆ. ಹೀಗಾಗಿ ದೂರು ಕೊಟ್ಟಿದ್ದೇವೆ. ಖಾಲಿ ಇರುವ ಕಾನೂನು ಅಧಿಕಾರಿ ಹುದ್ದೆಗೆ ಈಗ ನಿವೃತ್ತ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಮಹೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT