ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ಅವಘಡ: ಕೊಡಿಗೇಹಳ್ಳಿ ಠಾಣೆ ಆವರಣದಲ್ಲಿದ್ದ 58 ದ್ವಿಚಕ್ರ ವಾಹನ ಭಸ್ಮ

Last Updated 5 ಮಾರ್ಚ್ 2023, 21:20 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಿಗೇಹಳ್ಳಿ ಠಾಣೆ ಆವರಣದಲ್ಲಿ ಭಾನುವಾರ ಬೆಂಕಿ ಅವಘಡ ಸಂಭವಿಸಿದ್ದು, 58 ದ್ವಿಚಕ್ರ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

‘ವಿವಿಧ ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ದ್ವಿಚಕ್ರ ವಾಹನಗಳನ್ನು ಠಾಣೆ ಆವರಣದಲ್ಲಿ ನಿಲ್ಲಿಸಲಾಗಿತ್ತು. ಭಾನುವಾರ ಮಧ್ಯಾಹ್ನ ಕೆಲ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಕೆಲ ನಿಮಿಷಗಳಲ್ಲಿ ಎಲ್ಲ ವಾಹನಗಳಿಗೆ ಆವರಿಸಿಕೊಂಡಿದ್ದ ಬೆಂಕಿ, ಧಗ ಧಗ ಉರಿಯಲಾರಂಭಿಸಿತ್ತು’ ಎಂದು ಪೊಲೀಸರು ಹೇಳಿದರು.

‘ಬೆಂಕಿಯ ಕೆನ್ನಾಲಗೆ ಕ್ರಮೇಣ ಹೆಚ್ಚಾಗಿತ್ತು. ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಅಷ್ಟರಲ್ಲಿ 58 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾದವು. ವಾಹನಗಳ ಅವಶೇಷಗಳು ಮಾತ್ರ ಆವರಣದಲ್ಲಿವೆ. ಚಾಸಿ ಸಂಖ್ಯೆ ಆಧರಿಸಿ ವಾಹನಗಳ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಬೆಂಕಿ ಅವಘಡದ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸುಟ್ಟ ವಾಹನಗಳ ಪಟ್ಟಿ ಸಿದ್ಧಪಡಿಸಿ, ಮುಂದಿನ ಕ್ರಮ ಜರುಗಿಸಲಾಗುವುದು’ ಎಂದರು.

ಟ್ರಾನ್ಸ್‌ಫಾರ್ಮರ್‌ನಿಂದ ಬೆಂಕಿ?: ‘ಠಾಣೆ ಆವರಣದ ಸಮೀಪದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಇದೆ. ವಿದ್ಯುತ್ ತಂತಿಗಳು ಆವರಣದ ಮೇಲೆಯೇ ಹಾದು ಹೋಗಿವೆ. ತಂತಿಗಳು ಒಂದಕ್ಕೊಂದು ತಗುಲಿ, ಬೆಂಕಿ ಕಿಡಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ಹೇಳಿದರು.

ಅಗ್ನಿಶಾಮಕ ದಳದ ಸಿಬ್ಬಂದಿ, ‘ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ಸುಟ್ಟ ವಾಹನಗಳ ಮಾದರಿ ಪರಿಶೀಲಿಸಲಾಗುವುದು. ಟ್ರಾನ್ಸ್‌ಫಾರ್ಮರ್‌ನಿಂದ ಅವಘಡ ಸಂಭವಿಸಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಆದರೆ, ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದನ್ನು ಸದ್ಯಕ್ಕೆ ನಿಖರವಾಗಿ ಹೇಳಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ಎಟಿಎಂ ಕಾರ್ಡ್ ಬದಲಿಸಿ ಹಣ ಡ್ರಾ
ಬೆಂಗಳೂರು:
ಟಿ. ದಾಸರಹಳ್ಳಿ ಮಲ್ಲಸಂದ್ರದ ಪೈಪ್‌ಲೈನ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಘಟಕಕ್ಕೆ ಹೋಗಿದ್ದ ಗ್ರಾಹಕರೊಬ್ಬರ ಕಾರ್ಡ್ ಬದಲಿಸಿ ವಂಚಿಸಲಾಗಿದ್ದು, ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘38 ವರ್ಷದ ಸ್ಥಳೀಯ ನಿವಾಸಿ ವಂಚನೆ ಬಗ್ಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಪತ್ತೆಗೆ ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರರು ಹಣ ಡ್ರಾ ಮಾಡಿಕೊಳ್ಳಲು ಎಟಿಎಂ ಘಟಕಕ್ಕೆ ಇತ್ತೀಚೆಗೆ ಹೋಗಿದ್ದರು. ಮೊದಲ ಯತ್ನದಲ್ಲಿ ಹಣ ಬಂದಿರಲಿಲ್ಲ. ಘಟಕದಲ್ಲಿದ್ದ ಅಪರಿಚಿತ, ಕಾರ್ಡ್ ಪಡೆದು ಎರಡನೇ ಬಾರಿ ಪರೀಕ್ಷಿಸಿದ್ದ. ಅವಾಗಲೂ ಹಣ ಬಂದಿರಲಿಲ್ಲ. ಎಟಿಎಂ ಯಂತ್ರ ಕೆಟ್ಟಿರುವುದಾಗಿ ಹೇಳಿದ್ದ ಆರೋಪಿ, ಕಾರ್ಡ್‌ ವಾಪಸು ನೀಡಿದ್ದ. ದೂರುದಾರ ಮನೆಗೆ ವಾಪಸು ಹೋಗಿದ್ದರು.’

‘ಕೆಲ ಹೊತ್ತಿನ ನಂತರ, ₹ 90,400 ಡ್ರಾ ಆಗಿರುವ ಬಗ್ಗೆ ದೂರುದಾರರ ಮೊಬೈಲ್‌ಗೆ ಸಂದೇಶ ಬಂದಿತ್ತು. ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ, ಹಣ ಡ್ರಾ ಆಗಿರುವುದು ಗೊತ್ತಾಗಿತ್ತು. ಅಪರಿಚಿತ ವ್ಯಕ್ತಿ, ಸಹಾಯದ ಸೋಗಿನಲ್ಲಿ ಕಾರ್ಡ್ ಪಡೆದು ಬದಲಾಯಿಸಿ ಹಣ ಡ್ರಾ ಮಾಡಿಕೊಂಡಿರುವುದಾಗಿ ದೂರುದಾರರು ಹೇಳುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT