ಮಂಗಳವಾರ, ಸೆಪ್ಟೆಂಬರ್ 29, 2020
22 °C

ಬೆಂಗಳೂರಿನ ಮೊದಲ ವಿದ್ಯುತ್‌ ಬೀದಿ ದೀಪಕ್ಕೆ 115 ವರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಅಳವಡಿಸಿದ್ದ ಮೊದಲ ವಿದ್ಯುತ್‌ ಬೀದಿ ದೀಪ

ಬೆಂಗಳೂರು: ನಗರದ ಬೀದಿಯಲ್ಲಿ ಮೊದಲ ಬಾರಿ ವಿದ್ಯುತ್‌ ಬೆಳಕು ಬೆಳಗುವಂತೆ ಮಾಡಿದ ದೀಪಕ್ಕೆ ಬುಧವಾರ (ಆ.05) ಬರೋಬ್ಬರಿ 115 ವರ್ಷಗಳು ತುಂಬಿವೆ. ನಗರದ ಕೃಷ್ಣರಾಜ ಮಾರುಕಟ್ಟೆಯ ಎದುರು ಈ ಬೀದಿ ದೀಪವನ್ನು ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸ್ಥಾಪಿಸಿದ್ದರು.

ಈ ಬೀದಿದೀಪ ಈಗ ಕೆ.ಆರ್‌.ಮಾರುಕಟ್ಟೆ ಪ್ರದೇಶದಲ್ಲಿ ಇಲ್ಲ. ಅದನ್ನು ಕೆಲ ವರ್ಷಗಳ ಹಿಂದೆ ಬಿಬಿಎಂಪಿ ಕೇಂದ್ರ ಕಚೇರಿ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಈ ಬೀದಿದೀಪದ ಬಗ್ಗೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಗುರುವಾರ ಟ್ವೀಟ್‌ ಮಾಡಿದ್ದಾರೆ. 

‘ಐದು ದೀಪಗಳ ಗುಚ್ಛವನ್ನು ಹೊಂದಿರುವ ಆಕರ್ಷಕ ವಿನ್ಯಾಸದ ಈ ಐತಿಹಾಸಿಕ ಬೀದಿದೀಪವನ್ನು ಬಿಬಿಎಂಪಿ ಕಚೇರಿಯ ಪ್ರಾಂಗಣದಲ್ಲಿ ಈಗಲೂ ಕಾಣಬಹುದು’ ಎನ್ನುತ್ತಾರೆ ಇತಿಹಾಸ ಪ್ರೇಮಿ ಧರ್ಮೇಂದ್ರ ಕುಮಾರ್ ಅರೇನಹಳ್ಳಿ.

‘ಈಗಿನ ಕೆ.ಆರ್‌.ಮಾರುಕಟ್ಟೆ ಸಿಗ್ನಲ್‌ ಇರುವ ಜಾಗದಲ್ಲಿ ಹಿಂದೆ ಕೆರೆ ಇತ್ತು. ಅದನ್ನು ಸಿದ್ದಿಕಟ್ಟೆ ಕೆರೆ ಎಂದು ಕರೆಯುತ್ತಿದ್ದರು. ಅದರ ಪಕ್ಕದ ಬಯಲನ್ನು ಸಿದ್ಧಿಕಟ್ಟೆ ಎನ್ನುತ್ತಿದ್ದರು. ಈಗಿನ ಅವೆನ್ಯೂ ರಸ್ತೆ ಇರುವಲ್ಲಿ ಪೇಟೆ ಕೋಟೆ ಇತ್ತು. ಈಗ ಉಳಿದುಕೊಂಡಿರುವ ಕೋಟೆ ಹಾಗೂ ಪೇಟೆ ಕೋಟೆಗಳ ನಡುವೆ ಸಿದ್ದಿಕಟ್ಟೆ ಬಯಲು ಇತ್ತು. ಆ ಬಯಲಿನಲ್ಲಿ (ಈಗ ಗಣಪತಿ ದೇವಸ್ಥಾನವಿರುವ ಜಾಗ) ವಿದ್ಯುತ್‌ನಿಂದ ಬೆಳಗುವ ಬೀದಿ ದೀಪವನ್ನು ಸ್ಥಾಪಿಸಲಾಗಿತ್ತು. ಸ್ವತಃ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರೂ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು’ ಎಂದು ಅವರು ತಿಳಿಸಿದರು.

‘1905ರಷ್ಟರಲ್ಲಿ ನಗರದಲ್ಲಿ ಚಾಮರಾಜಪೇಟೆ, ಮಲ್ಲೇಶ್ವರ ಮುಂತಾದ ಬಡಾವಣೆಗಳು ವ್ಯವಸ್ಥಿತವಾಗಿ ಬೆಳವಣಿಗೆ ಹೊಂದಿದ್ದವು. ನಗರಕ್ಕೆ ಶಿವನಸಮುದ್ರದಿಂದಲೇ ವಿದ್ಯುತ್‌ ಪೂರೈಸಲಾಗಿತ್ತು. ಇದೇ ಸಂದರ್ಭದಲ್ಲಿ 100 ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿತ್ತು. ಆ ಮನೆಗಳಿಂದ ತಿಂಗಳಿಗೆ ₹1ರಂತೆ ವಿದ್ಯುತ್‌ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ನಗರಕ್ಕೆ ವಿದ್ಯುತ್‌ ಪೂರೈಸುವಲ್ಲಿ ಮೈಸೂರು ಸಂಸ್ಥಾನದ ಆಗಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್‌ ದೂರದೃಷ್ಟಿಯೂ ಇದೆ’ ಎಂದು ಧರ್ಮೇಂದ್ರ ವಿವರಿಸಿದರು.

ಏಷ್ಯಾ ಖಂಡದಲ್ಲೇ ವಿದ್ಯುತ್‌ನಿಂದ ಬೆಳಗಿದ ಮೊದಲ ಬೀದಿ ದೀಪವಿದು ಎಂದೂ ಹೇಳಲಾಗುತ್ತದೆ. ಆದರೆ, ಈ ಬಗ್ಗೆ ಭಿನ್ನಾಭಿಪ್ರಾಯಗಳೂ ಇವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು