ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಸೇತುವೆಗಳಿಗೆ ಹೊರೆಭಾರ

Last Updated 14 ಜುಲೈ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ಬೇಕಾಬಿಟ್ಟಿಯಾಗಿ ಬೆಳೆಯುತ್ತಿರುವ ನಗರದ ಸಂಚಾರ ದಟ್ಟಣೆ ನಿಭಾಯಿಸಲು ನಗರಾಡಳಿತ ಮೇಲ್ಸೇತುವೆಗಳ ಮೊರೆ ಹೋಯಿತು. ತರಾತುರಿಯಲ್ಲಿ ನಿರ್ಮಾಣವಾದ ಫ್ಲೈಓವರ್‌ಗಳು ದೋಷಪೂರಿತವಾಗಿರುವುದು, ಅವುಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಅಳವಡಿಸದಿರುವುದು... ಮುಂತಾದ ಕಾರಣಗಳಿದ ಮೇಲ್ಸೇತುವೆಗಳೇ ಸಮಸ್ಯೆಯ ಕೂಪಗಳಾಗುತ್ತಿವೆ.

ಉದ್ಯಾನನಗರಿಯಲ್ಲಿ ಫ್ಲೈಓವರ್ ನಿರ್ಮಾಣದ ಯುಗ 1999ರಿಂದ ಆರಂಭವಾಯಿತು.ಕೆ.ಆರ್.ಮಾರುಕಟ್ಟೆಯಿಂದ ಮೈಸೂರು ರಸ್ತೆ ಕಡೆಗೆ 2.65 ಕಿ.ಮೀ ಉದ್ದದ ಸೇತುವೆಯನ್ನು ₹ 97 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಯಿತು. ಬಳಿಕ ನಿರ್ಮಾಣವಾಗಿದ್ದು ರಿಚ್ಮಂಡ್‌ ವೃತ್ತದ ಬಳಿಯ ಮೇಲ್ಸೇತುವೆ. 1.32 ಕಿ.ಮೀ ಉದ್ದದ ಈ ಸೇತುವೆಯನ್ನು2001ರಲ್ಲಿ ₹18 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಯಿತು. ಆ ನಂತರ ವರ್ಷದಿಂದ ವರ್ಷಕ್ಕೆ ಇವುಗಳ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಅತಿಯಾದ ಸಂಚಾರ ದಟ್ಟಣೆ ಇರುವ ಒಂದೊಂದೇ ರಸ್ತೆಗಳನ್ನು ಗುರುತಿಸಿಪ್ರತಿವರ್ಷವೂ ಮೇಲ್ಸೇತುವೆಗಳು ಹಾಗೂ ಕೆಳಸೇತುವೆಗಳನ್ನು ಬಿಡಿಎ ಮತ್ತು ಬಿಬಿಎಂಪಿ ನಿರ್ಮಾಣ ಮಾಡುತ್ತಲೇ ಇವೆ.

ತುಮಕೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಮತ್ತು ವಿಮಾನ ನಿಲ್ದಾಣ ರಸ್ತೆಯ ಫ್ಲೈಓವರ್‌ಗಳು ಬೆಂಗಳೂರಿನ ಮಟ್ಟಿಗೆ ಅತೀ ಉದ್ದದವು. ಈ ಮೂರನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವೇ ನಿರ್ವಹಣೆ ಮಾಡುತ್ತಿದೆ. ಉಳಿದವುಗಳನ್ನು ಬಿಬಿಎಂಪಿ ಮತ್ತು ಬಿಡಿಎ ನಿರ್ವಹಿಸುತ್ತಿವೆ.

ಸದಾ ವಾಹನಗಳಿಂದ ಗಿಜಿಗುಡುವ ಮೇಲ್ಸೇತುವೆಗಳ ನಿರ್ವಹಣೆ ಇನ್ನೊಂದು ಸವಾಲು. ಅವುಗಳ ನಿರ್ಮಾಣಕ್ಕೆ ತೋರಿದ ಆಸಕ್ತಿಯನ್ನು ನಿರ್ವಹಣೆ ವಿಚಾರದಲ್ಲಿ ತೋರುತ್ತಿಲ್ಲ. ಇದರಿಂದಾಗಿ ಈ ಸೇತುವೆಗಳೇ ನಗರದ ನಿವಾಸಿಗಳ ಪಾಲಿಕೆ ಕಂಟಕಪ್ರಾಯವಾಗುವ ಅಪಾಯವೂ ಇದೆ. ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದರೆ ಗಂಡಾಂತರ ತಪ್ಪಿದ್ದಲ್ಲ.

ಯಾವುದೇ ಕಟ್ಟಡ ದೀರ್ಘ ಬಾಳಿಕೆ ಬರಬೇಕಾದರೆ ಅವುಗಳ ರಚನೆಗೆ ಸಂಬಂಧಿಸಿದ ಪರಿಶೀಲನೆಯನ್ನು ಕಾಲ ಕಾಲಕ್ಕೆ ನಡೆಸಬೇಕು. ನಗರದ ಬಹುತೇಕ ಮೇಲ್ಸೇತುವೆಗಳು ಮಿತಿಗಿಂತ ಹೆಚ್ಚು ಹೊರೆಯನ್ನು ಹೊರುತ್ತಿವೆ. ಇದರಿಂದಾಗಿ ಅವುಗಳ ಕ್ಷಮತೆ ಕುಗ್ಗುತ್ತಿದೆ.

‘ಮೇಲ್ಸೇತುವೆಗಳ ರಸ್ತೆಗಳಲ್ಲಿ ಗುಂಡಿ ಬಿದ್ದರೆ ಅದನ್ನು ಮುಚ್ಚುವ ಕಾರ್ಯವನ್ನು ಬಿಬಿಎಂಪಿ ಆಗಾಗ ನಿರ್ವಹಿಸುತ್ತಿದೆ. ಅವುಗಳ ಬೇರಿಂಗ್‌ಗಳನ್ನು, ವಿಕಸನ ಕೊಂಡಿಗಳನ್ನು (ಎಕ್ಸ್‌ಪಾನ್ಷನ್‌ ಜಾಯಿಂಟ್‌) ಆಗಾಗ್ಗೆ ತಪಾಸಣೆ ನಡೆಸುತ್ತಿರಬೇಕು. ಆಗ ಅವುಗಳಲ್ಲಿ ಸಣ್ಣಪುಟ್ಟ ಲೋಪ ಕಾಣಿಸಿಕೊಂಡರೆ ಸರಿಪಡಿಸಬಹುದು. ಬಿರುಕುಗಳು ಕಾಣಿಸಿಕೊಂಡಿವೆಯೇ,ನೀರು ಹರಿಯುವ ವ್ಯವಸ್ಥೆ ಸರಿಯಾಗಿದೆಯೇ ಎಂಬುದನ್ನು ಗಮನಿಸಬೇಕು. ಈ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಸಕಾಲದಲ್ಲಿ ಎಚ್ಚೆತ್ತು ಲೋಪ ಸರಿಪಡಿಸದಿದ್ದರೆ ಅವುಗಳೇ ದೊಡ್ಡದಾಗಿ ಇಡೀ ಸೇತುವೆ ರಚನೆಗೇ ಧಕ್ಕೆ ಉಂಟಾಗುವ ಅಪಾಯ ಇದೆ. ಬೇರಿಂಗ್‌ನಲ್ಲಿ ಲೋಪವನ್ನು ಸಕಾಲದಲ್ಲಿ ಪತ್ತೆ ಹಚ್ಚದಿದ್ದರೆ ಸೇತುವೆ ಕುಸಿಯುವ ಸಾಧ್ಯತೆಯೂ ಇದೆ’ ಎನ್ನುತ್ತಾರೆ ತಜ್ಞರು.

ನಗರದಲ್ಲಿ 25ಕ್ಕೂ ಹೆಚ್ಚು ದೊಡ್ಡ ಪ್ರಮಾಣದ ಮೇಲ್ಸೇತುವೆಗಳಿವೆ. ಮೇಲ್ಸೇತುವೆ, ಕೆಳಸೇತುವೆ ಹಾಗೂ ಗ್ರೇಡ್‌ ಸಪರೇಟರ್‌... ಒಟ್ಟು 59 ಸೇತುವೆಗಳಿವೆ. ಆದರೆ, ಇವುಗಳ ನಿರ್ವಹಣೆಗೆ ಪಾಲಿಕೆ ಅನುದಾನವನ್ನೇ ನೀಡುತ್ತಿರಲಿಲ್ಲ. ಹಾಗಾಗಿ ನಿರ್ವಹಣಾ ಕಾರ್ಯ ಕಡೆಗಣನೆಗೆ ಒಳಗಾಗಿತ್ತು. 2019–20ನೇ ಸಾಲಿನ ಬಜೆಟ್‌ನಲ್ಲಿ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ವಹಣೆಗೆ ₹ 50 ಕೋಟಿ ಅನುದಾನ ಕಾಯ್ದಿರಿಸಲಾಗಿದೆ. ಇಷ್ಟೊಂದು ಅನುದಾನ ಒದಗಿಸಿದ್ದು ಇದೇ ಮೊದಲು ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಜನವರಿಯಲ್ಲಿ 79.41 ಲಕ್ಷ ಇದ್ದ ವಾಹನಗಳ ಸಂಖ್ಯೆ ಮೇ ಅಂತ್ಯಕ್ಕೆ 81.56 ಲಕ್ಷಕ್ಕೆ ಏರಿದೆ. ಇದಲ್ಲದೇ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ವಾಹನಗಳ ಸಂಖ್ಯೆಯೂ ಕಡಿಮೆ ಇಲ್ಲ. ಈ ಎಲ್ಲ ಭಾರವನ್ನು ತಡೆದುಕೊಳ್ಳುತ್ತಿರುವ ಪ್ರಮುಖ ಫ್ಲೈಓವರ್‌ಗಳ ಸ್ಥಿತಿಗತಿಗಳನ್ನು ತಿಳಿಯಲು ಒಂದು ಸುತ್ತು ಹಾಕಿದಾಗ ಹತ್ತು ಹಲವು ಸಮಸ್ಯೆಗಳ ದರ್ಶನವಾಯಿತು.

ತುಮಕೂರು ರಸ್ತೆಯಲ್ಲಿ ಜೀವದ ಭಯ

ತುಮಕೂರು ರಸ್ತೆಯಲ್ಲಿನ ಫ್ಲೈಓವರ್‌ನಲ್ಲಿ ದ್ವಿಚಕ್ರ ವಾಹನ ಸವಾರರು ಜೀವ ಬಿಗಿ ಹಿಡಿದೇ ಸಂಚರಿಸಬೇಕು.

ರಾಜ್ಯ ಹಾಗೂ ಹೊರ ರಾಜ್ಯದ ಪ್ರಮುಖ ನಗರಗಳಿಂದ ಬರುವ ವಾಹನಗಳು ಇದೇ ರಸ್ತೆಯಲ್ಲಿ ನಗರವನ್ನು ಪ್ರವೇಶಿಸಬೇಕು. ಬೆಂಗಳೂರಿಗೆ ಪ್ರವೇಶಿಸುವ ಶೇ 60ರಷ್ಟು ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿವೆ.

ಫ್ಲೈಓವರ್‌ಗಳ ಮೇಲೆ ಗಂಟೆಗೆ 50ರಿಂದ 60 ಕಿ.ಮೀ ವೇಗದಲ್ಲಿ ಮಾತ್ರ ವಾಹನಗಳು ಸಂಚರಿಸಬೇಕು ಎಂಬ ನಿಯಮ ಇದೆ. ಆದರೆ, ಇಲ್ಲಿ ಸಂಚರಿಸುವ ವಾಹನಗಳು ಗಂಟೆಗೆ 100 ಕಿ.ಮೀಗೂ ಹೆಚ್ಚಿನ ವೇಗದಲ್ಲೇ ಸಂಚರಿಸುತ್ತವೆ.

ಎರಡೂ ಕಡೆ ದ್ವಿಪಥದ ರಸ್ತೆಗಳಿದ್ದು, ಬೈಕ್ ಸವಾರರು ಕೂಡ ಇದರೊಳಗೆ ದಾರಿ ಮಾಡಿಕೊಳ್ಳಬೇಕು. ಒಂದನ್ನೊಂದು ಹಿಂದಿಕ್ಕಿ ವೇಗವಾಗಿ ಸಾಗುವ ವಾಹನಗಳು ಅಪ್ಪಿ–ತಪ್ಪಿ ದ್ವಿಚಕ್ರ ವಾಹನಕ್ಕೆ ಸ್ವಲ್ಪ ತಗುಲಿದರೂ ಆ ಸವಾರ ಕೆಳಗೆ ಬಿದ್ದು ಜೀವ ಕಳೆದುಕೊಳ್ಳುವದರಲ್ಲಿ ಅನುಮಾನ ಇಲ್ಲ.

ಎರಡು ತಿಂಗಳ ಹಿಂದೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಬೈಕ್‌ ಚಲಾಯಿಸುತ್ತಿದ್ದ ಐಟಿ ಕಂಪನಿ ಉದ್ಯೋಗಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತ ಎಸಗಿದ ವಾಹನ ಯಾವುದು ಎಂದು ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮರಾಗಳಾಗಲೀ, ಅತಿಯಾದ ವೇಗದಿಂದ ಸಂಚರಿಸುವ ವಾಹನಗಳಿಗೆ ಕಡಿವಾಣ ಹಾಕುವ ವ್ಯವಸ್ಥೆಯಾಗಲಿ ಇಲ್ಲಿಲ್ಲ.

ದೋಷಪೂರಿತ ಯಶವಂತಪುರ ಮೇಲ್ಸೇತುವೆ

ಯಶವಂತಪುರದಲ್ಲಿ ಬಿಎಂಟಿಸಿ ಬಸ್ ನಿಲ್ದಾಣದ (ಟಿಟಿಎಂಸಿ) ಎದುರಿನಲ್ಲಿರುವ ಪಂಡಿತ್‌ ದೀನದಯಾಳ್‌ ಉಪಾದ್ಯಾಯ ಮೇಲ್ಸೇತುವೆಯಲ್ಲಿ ಇತ್ತೀಚೆಗೆ ಪದೇ ಪದೇ ಅಪಘಾತಗಳು ಸಂಭವಿಸಿದ್ದವು.

ಈ ಮೇಲ್ಸೇತುವೆಯ ರಚನೆ ಅವೈಜ್ಞಾನಿಕವಾಗಿದ್ದುದೂ ಇದಕ್ಕೆ ಕಾರಣವಾಗಿತ್ತು. ತಿರುವಿನ ಪ್ರಮಾಣ 90 ಡಿಗ್ರಿಗಳಷ್ಟು ಇದ್ದುದರಿಂದ ತುಮಕೂರು ರಸ್ತೆಯಿಂದ ವೇಗವಾಗಿ ಬಂದಿದ್ದ ಕೆಲವು ವಾಹನಗಳು ನಿಯಂತ್ರಣಕ್ಕೆ ಸಿಗದೆ ಸೇತುವೆಯಿಂದ ಕೆಳಗೆ ಬಿದ್ದಿದ್ದವು. ಕಳೆದ ರ್ಷದಲ್ಲಿ ಒಂದೇ ಜಾಗದಲ್ಲಿ ಎರಡು ಟ್ರಕ್‌ಗಳು ಬಿದ್ದಿದ್ದವು.

ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಈ ಸೇತುವೆಯ ಅಧ್ಯಯನ ನಡೆಸಿದಾಗ ಇದು ದೋಷ ಪೂರಿತವಾಗಿರುವುದು ಪತ್ತೆಯಾಗಿತ್ತು. ಸೇತುವೆ ಒಂದು ಕಡೆಯ ತಡೆಗೋಡೆ ಎತ್ತರ ಕೂಡ ಕಡಿಮೆ ಇದ್ದು, ಸರಾಗವಾಗಿ ವಾಹನಗಳು ಕೆಳಗೆ ಬೀಳುತ್ತಿವೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿತ್ತು.

ವಾಹನಗಳು ಗಂಟೆಗೆ 30 ಕಿ.ಮೀ ವೇಗದಲ್ಲಿ ಸಾಗುವಂತೆ ಈ ಮೇಲ್ಸೇತುವೆ ನಿರ್ಮಿಸಲಾಗಿದೆ. ಆದರೆ, ವಾಹನಗಳ ದಟ್ಟಣೆ ಕಡಿಮೆ ಇದ್ದಾಗ 90 ಕಿ.ಮೀ ವೇಗದಲ್ಲೂ ಸಾಗುತ್ತಿದ್ದವು. ಇದು ಕೂಡ ಅಪಘಾತಕ್ಕೆ ಕಾರಣ. ಹೀಗಾಗಿಯೇ ರಾತ್ರಿ ವೇಳೆಯೇ ವಾಹನಗಳು ಬೀಳುತ್ತಿದ್ದವು. ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕು. ಮೇಲ್ಸೇತುವೆ ಆರಂಭವಾಗುವ ಮತ್ತು ಅಂತ್ಯವಾಗುವ ಕಡೆ ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕು. ರಾತ್ರಿ ವೇಳೆಯೂ ವಾಹನ ಸವಾರರಿಗೆ ಕಾಣಿಸುವಂತೆ ರಸ್ತೆ ಸುರಕ್ಷತಾ ಸಂಕೇತಗಳನ್ನು ಅಳವಡಿಸಬೇಕು ಎಂದೂ ಐಐಎಸ್ಸಿ ತಜ್ಞರು ಸಲಹೆ ನೀಡಿದ್ದರು. ಇವುಗಳಲ್ಲಿ ಕೆಲವು ಪರಿಹಾರೋಪಾಯಗಳನ್ನು ಅನುಷ್ಠಾನಗೊಳಿಸಲಾಗಿದೆ. ಆ ಬಳಿಕ ಇಲ್ಲಿ ಅಪಘಾತಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

ವೇಗಕ್ಕಿಲ್ಲ ಕಡಿವಾಣ

ಸಿಲ್ಕ್‌ ಬೋರ್ಡ್‌ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ 9 ಕಿ.ಮೀ ಉದ್ದದ ಮೇಲ್ಸೇತುವೆಯಲ್ಲಿ ವಾಹನಗಳ ವೇಗಕ್ಕೆ ಕಡಿವಾಣವೇ ಇಲ್ಲದಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ.

60 ಕಿ.ಮೀ ವೇಗದಲ್ಲಿ ಮಾತ್ರ ವಾಹನಗಳು ಸಂಚರಿಸಬೇಕು ಎಂಬ ಫಲಕಗಳು ಅಲ್ಲಲ್ಲಿ ಇವೆ. ಆದರೆ, ಅದಕ್ಕೆ ವಾಹನ ಸವಾರರು ಕಿಮ್ಮತ್ತು ನೀಡದೆ ಗಂಟೆಗೆ 100 ಕಿ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಸಂಚರಿಸುತ್ತಾರೆ. ಕಳೆದ ವರ್ಷ ದ್ವಿಚಕ್ರ ವಾಹನ ಸವಾರರೊಬ್ಬರು ಸೇತುವೆಯಿಂದಲೇ ಕೆಳಗೆ ಬಿದ್ದು ಮೃತಪಟ್ಟಿದ್ದರು.

‘ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಆದರೂ, ಅತಿಯಾದ ವೇಗಕ್ಕೆ ಕಡಿವಾಣ ಬಿದ್ದಿಲ್ಲ. ಸೇತುವೆ ಹತ್ತಿ 9 ಕಿ.ಮೀ ದೂರವನ್ನು ಕ್ರಮಿಸುವ ತನಕ ಜೀವ ಬಿಗಿ ಹಿಡಿದುಕೊಂಡೇ ವಾಹನ ಚಾಲನೆ ಮಾಡಬೇಕು’ ಎನ್ನುತ್ತಾರೆ ದ್ವಿಚಕ್ರ ವಾಹನ ಸವಾರರು.

ಹೆಬ್ಬಾಳ ಮೇಲ್ಸೇತುವೆ: ಹೆಚ್ಚುತ್ತಿದೆ ಒತ್ತಡ

ಹೆಬ್ಬಾಳ ಕಡೆಗೆ ಹೋಗುವುದೆಂದರೆ ಅಲ್ಲಿನ ಮೇಲ್ಸೇತುವೆ ಮೇಲೆ ನಿಲ್ಲುವ ವಾಹನಗಳ ದಟ್ಟಣೆಯೇ ಕಣ್ಮುಂದೆ ಬರುತ್ತದೆ. ವಿಮಾನ ನಿಲ್ದಾಣ ಕಡೆಯಿಂದ ಬರುವ ವಾಹನಗಳ ಜತೆಗೆ ರಿಂಗ್ ರಸ್ತೆಯಲ್ಲಿ ಕೆ.ಆರ್.ಪುರ ಕಡೆಯಿಂದ ಮತ್ತು ಯಶವಂತಪುರ ಕಡೆಯಿಂದ ಬರುವ ವಾಹನಗಳು ಸೇರಿಕೊಳ್ಳುತ್ತವೆ. ‌ಹೀಗಾಗಿ ಈ ರಸ್ತೆ ಸದಾ ವಾಹನಗಳಿಂದ ಗಿಜಿಗುಡುತ್ತಿರುತ್ತದೆ.

ವಿಮಾನನಿಲ್ದಾಣ ಕಡೆಯಿಂದ ಎಸ್ಟೀಮ್‌ ಮಾಲ್‌ವರೆಗೆ ವಿಶಾಲ ರಸ್ತೆಯಲ್ಲಿ ಬರುವ ವಾಹನಗಳು ಇಲ್ಲಿನ ಸೇತುವೆಯಲ್ಲಿ ಕಿರಿದಾಗ ರಸ್ತೆಯಲ್ಲಿ ಸಾಗಬೇಕಾಗುತ್ತದೆ. ಈ ‘ಬಾಟಲ್‌ ನೆಕ್‌’ ಸನ್ನಿವೇಶ ದಟ್ಟಣೆಯನ್ನು ಮತ್ತಷ್ಟು ತೀವ್ರಗೊಳಿಸುತ್ತಿದೆ.

‘ಮೇಲ್ಸೇತುವೆಗಳ ಮೇಲೆ ಹಾದು ಹೋಗುವ ವಾಹನಗಳ ಸಂಖ್ಯೆ ಆಧರಿಸಿ ಅದರ ಸಾಮರ್ಥ್ಯ ನಿಗದಿಪಡಿಸಲಾಗುತ್ತದೆ. ಆದರೆ, ನಗರದಲ್ಲಿ ವಾಹನಗಳ ಸಂಖ್ಯೆ ಊಹೆಗೂ ಮೀರಿ ಹೆಚ್ಚುತ್ತಿವೆ. ಹೆಬ್ಬಾಳ ಮೇಲ್ಸೇತುವೆ ಮೇಲೆ ವಾಹನಗಳು ಸದಾ ಸಾಲುಗಟ್ಟಿ ನಿಲ್ಲುತ್ತಿವೆ.’

‘ಏಕಕಾಲಕ್ಕೆ ನೂರಾರು ವಾಹನಗಳು ನಿಂತಾಗ ಅವುಗಳ ಭಾರದಿಂದಾಗಿ ಮೇಲ್ಸೇತುವೆಗಳ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತಿದೆ. ಕಾಲ ಕಾಲಕ್ಕೆ ಅವುಗಳ ರಚನೆಗೆ ಸಂಬಂಧಿಸಿದ ಪರಿಶೀಲನೆ ನಡೆಯದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂಬುದು ತಜ್ಞರ ಅಭಿಪ್ರಾಯ.

ಈ ಸೇತುವೆಯಲ್ಲೂ ಇತ್ತೀಚೆಗೆ ಬಿರುಕು ಕಂಡುಬಂದಿತ್ತು. ಈ ಬಗ್ಗೆ ಅಧ್ಯಯನ ನಡೆಸಿದ್ದ ಬಿಡಿಎ ಎಂಜಿನಿಯರ್‌ಗಳು ಸೇತುವೆ ಬಲವರ್ಧನೆಗೆ ಕ್ರಮಕೈಗೊಂಡಿದ್ದರು.

ಮಾರ್ಗ ಸೂಚಿಸುವ ಫಲಕಗಳೇ ಇಲ್ಲ

‘ನಗರದ ಮೇಲ್ಸೇತುವೆಗಳಲ್ಲಿ ಮಾರ್ಗಸೂಚಿಸುವ ಫಲಕಗಳು ಸಮರ್ಪಕವಾಗಿ ಇಲ್ಲ. ಹೀಗಾಗಿ ಅಪಘಾತ ಮತ್ತು ಸಂಚಾರ ದಟ್ಟಣೆ ಉಂಟಾಗಲು ಇದು ಕೂಡ ಕಾರಣ’ ಎಂಬುದು ತಜ್ಞರ ಅಭಿಪ್ರಾಯ.

ಫ್ಲೈಓವರ್ ಹತ್ತಿದ ಬಳಿಕ ದಾರಿ ತಪ್ಪಿರುವುದನ್ನು ಗೊತ್ತುಪಡಿಸಿಕೊಳ್ಳುವ ವಾಹನ ಸವಾರರು ಏಕಮುಖ ಸಂಚಾರ ಇದ್ದರೂ ಹಿಂದಕ್ಕೆ ಬರುತ್ತಾರೆ.

‘ಇದನ್ನು ತಪ್ಪಿಸಲು ಸೇತುವೆ ಹತ್ತುವ ಮುನ್ನವೇ ವಾಹನ ಸವಾರರಿಗೆ ಆ ರಸ್ತೆಯ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಹೀಗಾಗಿ, ಮಾರ್ಗ ಸೂಚಿಸುವ ಫಲಕಗಳನ್ನು ದೊಡ್ಡದಾಗಿ ಕಾಣಿಸುವಂತೆ ಅಳವಡಿಸಬೇಕು’ ಎನ್ನುತ್ತಾರೆ ವಿಶ್ವ ಬ್ಯಾಂಕ್ ಸಲಹೆಗಾರ (ಮೂಲಸೌಕರ್ಯ ಮತ್ತು ರಸ್ತೆ ಸುರಕ್ಷತೆ) ಲೋಕೇಶ್ ಹೆಬ್ಬಾನಿ.

‘ಕೆಲವು ಫ್ಲೈಓವರ್ ಆರಂಭದ ಜಾಗದಲ್ಲಿ ಬಸ್ ಮತ್ತು ಆಟೋರಿಕ್ಷಾಗಳು ನಿಂತಿರುತ್ತವೆ. ಫಲಕಗಳು ಕಾಣಿಸದೆಯೇ ಸವಾರರು ದಾರಿ ತಪ್ಪುವ ಸಾಧ್ಯತೆಯೂ ಇರುತ್ತದೆ’ ಎಂದರು.

‘ಮೇಲ್ಸೇತುವೆಗಳಲ್ಲಿ ವಾಹನಗಳು ಅತಿ ವೇಗದಲ್ಲಿ ಸಾಗುವುದಕ್ಕೆ ಕಡಿವಾಣ ಹಾಕುವ ವ್ಯವಸ್ಥೆ ಇಲ್ಲ. ಪೊಲೀಸರು ಅಲ್ಲಲ್ಲಿ ವೇಗಪತ್ತೆ ಹಚ್ಚುವ ಯಂತ್ರದೊಂದಿಗೆ ನಿಂತರೆ ವಾಹನ ಸವಾರರು ತಾವಾಗಿಯೇ ವೇಗ ಕಡಿಮೆ ಮಾಡುತ್ತಾರೆ’ ಎಂದು ಹೇಳಿದರು.

‘ವಿದೇಶಗಳಲ್ಲಿ ಫ್ಲೈಓವರ್‌ಗಳಲ್ಲಿ ಆಂಬುಲೆನ್ಸ್‌ ಮತ್ತು ಪೊಲೀಸ್ ವಾಹನಗಳು ತೆರಳಲು ಪ್ರತ್ಯೇಕ ಮಾರ್ಗಗಳು ಇರುತ್ತವೆ. ನಮ್ಮಲ್ಲಿ ಯಾವುದೇ ಫ್ಲೈಓವರ್‌ಗಳಲ್ಲೂ ಈ ವ್ಯವಸ್ಥೆ ಇಲ್ಲ’ ಎಂದು ಬೊಟ್ಟುಮಾಡಿದರು.

‘ಸೇತುವೆ ಕಟ್ಟುವಾಗಲೇ ರಸ್ತೆ ಸುರಕ್ಷತೆ ಬಗ್ಗೆ ಎಚ್ಚರ ವಹಿಸುವುದು ಮೊದಲನೇ ಕ್ರಮ. ಸಂಚಾರ ನಿಯಮ ಜಾರಿಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದು ಎರಡನೆಯದು. ವಾಹನ ಸವಾರರಿಗೆ ಜಾಗೃತಿ ಮೂಡಿಸುವುದು ಮೂರನೇ ಅಂಶ. ಅಷ್ಟಾದರೂ ಅಪಘಾತ ಸಂಭವಿಸಿದರೆ ತುರ್ತಾಗಿ ಆಂಬುಲೆನ್ಸ್‌ಗಳು ಹೋಗಲು ಅವಕಾಶ ಇಟ್ಟುಕೊಳ್ಳಬೇಕಾಗಿರುವುದು ನಾಲ್ಕನೇ ಕ್ರಮ. ಈ ರೀತಿ ಮಾಡಿದರೆ ಮಾತ್ರ ವಾಹನ ಸವಾರರ ಜೀವ ಉಳಿಸಬಹುದು’ ಎಂದು ಸಲಹೆ ನೀಡಿದರು.

ಅಧಿಕ ಭಾರ ಹೊರುವ ಮಾರ್ಕೆಟ್ ಫ್ಲೈಓವರ್

ಬೆಂಗಳೂರಿನ ಮೊದಲ ಫ್ಲೈಓವರ್ ಆಗಿರುವ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಏಕಕಾಲಕ್ಕೆ ಗರಿಷ್ಠ 2,200 ಪಿಸಿಯುಗಳಷ್ಟು (ಪ್ಯಾಸೆಂಜರ್ ಕಾರ್ ಯುನಿಟ್‌) ವಾಹನಗಳನ್ನು ಹೊರುವ ಸಾಮರ್ಥ್ಯವನ್ನು ಮಾತ್ರ ಹೊಂದಿದೆ.

ಆದರೆ, ದಟ್ಟಣೆ ಅವಧಿಯಲ್ಲಿ 3000 ಪಿಸಿಯುಗಳಿಗಿಂತಲೂ ಹೆಚ್ಚು ವಾಹನಗಳು ಸಾಗುತ್ತವೆ ಎಂದು ಅಧ್ಯಯನವೊಂದು ಅಂದಾಜಿಸಿದೆ. ಈ ಸೇತುವೆಯನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ.

ಸೇತುವೆ ಮೇಲೆ ವಾಹನಗಳು ಸಾಲುಗಟ್ಟಿ ನಿಲ್ಲುವ ಸಂದರ್ಭ ಸೃಷ್ಟಿಯಾಗದಂತೆ ನೋಡಿಕೊಂಡರೆ ಇದು ಇನ್ನಷ್ಟು ವರ್ಷ ಬಾಳಲಿದೆ ಎಂಬುದು ತಜ್ಞರ ಅಭಿಪ್ರಾಯ.

ಸೇತುವೆಯೇ ಸಮಸ್ಯೆ

ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಲೆಂದು ಕೆ.ಆರ್.ಪುರ ತೂಗುಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ, ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ಅದೇ ಈಗ ಸಮಸ್ಯೆಯ ಕೂಪವಾಗಿ ಪರಿಣಮಿಸಿದೆ.

ದೇಶದ ಎರಡನೇ ದೊಡ್ಡ ತೂಗು ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾದ 1.5 ಕಿ.ಮೀ ಉದ್ದದ ಈ ಸೇತುವೆ 2004ರಲ್ಲಿ ಲೋಕಾರ್ಪಣೆಗೊಂಡಿತ್ತು. ನಗರದಿಂದ ಹೊರಹೋಗುವ ವಾಹನಗಳು ಬೈಯಪ್ಪನಹಳ್ಳಿ ರೈಲು ನಿಲ್ದಾಣ ಕಡೆಗೆ ಹೋಗಲು ಸೇತುವೆ ಬಳಿ ಎಡ ತಿರುವು ಪಡೆದು ಸರ್ವಿಸ್‌ ರಸ್ತೆಯಲ್ಲಿ ಚಲಿಸಬೇಕು. ಹೆಬ್ಬಾಳದಿಂದ ಕೆ.ಆರ್‌. ಪುರ ಕಡೆ ತೆರಳಲು ಬಲತಿರುವು ಪಡೆದು ಸೇತುವೆ ಏರಬೇಕು. ಹೀಗೆ ಕತ್ತರಿ ಆಕಾರದಲ್ಲಿ ವಾಹನಗಳು ಸಂಚರಿಸುವುದರಿಂದ ಈ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ.

ಸೇತುವೆ ಬಳಿ ಸೂಚನಾ ಫಲಕಗಳೂ ಇಲ್ಲ. ಮೊದಲ ಬಾರಿಗೆ ಈ ರಸ್ತೆಯಲ್ಲಿ ಬಂದರೆ ವಾಹನ ಸವಾರರು ಪರದಾಡಬೇಕು. ಸೇತುವೆ ನಿರ್ವಹಣೆಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ನಗರದ ಕಡೆಯಿಂದ ಹೋಗುವಾಗ ತೂಗು ಸೇತುವೆ ಸಿಗುವ ಮೊದಲು ಅಲ್ಲಲ್ಲಿ ಕುಸಿದಂತಾಗಿದೆ. ವೇಗವಾಗಿ ಬರುವ ವಾಹನಗಳು ಅಪಘಾತಕ್ಕೆ ಈಡಾಗುವ ಅಪಾಯವೂ ಇದೆ ಎನ್ನುತ್ತಾರೆ ಸ್ಥಳೀಯರು.

ಗುಂಡಿಬಿದ್ದ ಜಾಲಹಳ್ಳಿ ಸೇತುವೆ

ಗೊರಗೊಂಟೆ ಪಾಳ್ಯದಿಂದ ಹೆಬ್ಬಾಳ ಕಡೆಗೆ ಹೊರಟ ಕೂಡಲೇ ಸಿಗುವ ಜಾಲಹಳ್ಳಿ ಮೇಲ್ಸೇತುವೆ ಮೇಲೆ ವಾಹನ ಚಾಲನೆ ಮಾಡಿಕೊಂಡು ಹೋದರೆ ನರಕ ನೆನಪಾಗುತ್ತದೆ.

ಹೆಬ್ಬಾಳ ಕಡೆಯಿಂದ ತುಮಕೂರು ರಸ್ತೆ ಸಂಪರ್ಕಿಸಲು ಪ್ರಮುಖ ರಸ್ತೆ ಇದಾಗಿದ್ದು, ಮೂರು ವರ್ಷಗಳ ಹಿಂದೆ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಯಿತು. ಸದಾ ವಾಹನಗಳಿಂದ ಗಿಜಿಗುಡುವ ಈ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಈ ಸೇತುವೆ ದಾಟಿ ಹೋಗಲು ಪ್ರಯಾಣಿಕರು ಹರಸಾಹಸಪಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT