ದಾಬಸ್ ಪೇಟೆ: ಶಿವಗಂಗೆ ಬೆಟ್ಟದಲ್ಲಿ ಶನಿವಾರ ರಾತ್ರಿ ಹೊತ್ತಿಕೊಂಡ ಬೆಂಕಿಗೆ ಸುಮಾರು ನಾಲ್ಕು ಎಕರೆಗಳಷ್ಟು ಅರಣ್ಯ ನಾಶವಾಗಿದೆ. ಮೊಲ, ಹಾವು, ಓತಿಕ್ಯಾತ ಸೇರಿದಂತೆ ಹಲವು ಜಾತಿಯ ಪ್ರಾಣಿ ಪಕ್ಷಿಗಳು ಬೆಂಕಿಗೆ ಆಹುತಿಯಾಗಿವೆ.
ಬೆಟ್ಟದ ತಪ್ಪಲಿನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಶನಿವಾರ ರಾತ್ರಿ ಸುಮಾರು 8.30ರ ವೇಳೆಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಗ್ನಿಶಾಮಕ ದಳದ ನೆರವಿನೊಂದಿಗೆ ಬೆಳಿಗ್ಗೆ 5.30ರವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
‘ಚಾರಣಕ್ಕೆ ಬಂದ ಯಾರೋ ಕಿಡಿಗೇಡಿಗಳು ಶಾಂತಲ ಡ್ರಾಪ್ ಬಳಿ ನಾಲ್ಕು ಕಡೆ ಬೆಂಕಿಯಿಟ್ಟಿರುವ ಸಾಧ್ಯತೆ ಇದೆ. ಅದು ಕೆಳಗಿನವರೆಗೆ ವ್ಯಾಪಿಸಿರಬಹುದು’ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
‘ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಹಾದಿ ಕಲ್ಲು ಮುಳ್ಳುಗಳಿಂದ ಕೂಡಿದೆ. ಈ ದುರ್ಗಮ ಹಾದಿಯನ್ನು ಬಳಸಿ ಬೆಂಕಿ ಬಿದ್ದ ಜಾಗಕ್ಕೆ ತಕ್ಷಣಕ್ಕೆ ಹೋಗುವುದು ಕಷ್ಟವಾಯಿತು’ ಎಂದುಅರಣ್ಯ ರಕ್ಷಕ ಶ್ರೀನಾಥ್ ಹೇಳಿದರು.
ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಎಸಿಎಫ್ ಸುಬ್ಬರಾವ್, ವಲಯ ಅಧಿಕಾರಿ ಶಾಂತಕುಮಾರ್ ಮಾರ್ಗದರ್ಶನ ಮಾಡಿದರು.