ಶುಕ್ರವಾರ, ಆಗಸ್ಟ್ 19, 2022
27 °C
12 ಆರೋಪಿಗಳಿಂದ ಪಾರ್ಟಿ ಆಯೋಜನೆ | ‘ಡ್ರಗ್‌’ ಗಳಿಕೆ; ನಟಿ ರಾಗಿಣಿಗೂ ಪಾಲು

ಡ್ರಗ್: ಮಾಜಿ ಸಚಿವರ ಪುತ್ರ ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್‌ ಜಾಲದಲ್ಲಿ ನಟಿ ರಾಗಿಣಿ ದ್ವಿವೇದಿ ಜೊತೆಯಲ್ಲಿ ಮಾಜಿ ಸಚಿವರೊಬ್ಬರ ಪುತ್ರ ಆದಿತ್ಯ ಆಳ್ವ ಸೇರಿದಂತೆ ಹಲವರು ಭಾಗಿಯಾಗಿರುವ ಸಂಗತಿ ಸಿಸಿಬಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.

ಸ್ಯಾಂಡಲ್‌ವುಡ್‌ನಲ್ಲಿ ಅವ್ಯಾಹತವಾಗಿದೆ ಎನ್ನಲಾದ ಡ್ರಗ್ ಜಾಲದ ಬಗ್ಗೆ ಮಾಹಿತಿ ಕಲೆ ಹಾಕಿರುವ ಸಿಸಿಬಿಯ ಎಸಿಪಿ ಕೆ.ಸಿ.ಗೌತಮ್, ಕಾಟನ್‌ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾದಕ ವಸ್ತು ನಿಯಂತ್ರಣ (ಎನ್‌ಡಿಪಿಎಸ್) ಕಾಯ್ದೆಯಡಿ 12 ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಉದ್ಯಮಿ ಶಿವಪ್ರಕಾಶ್ ಚೆಟ್ಟಿ, ನಟಿ ರಾಗಿಣಿ, ವಿರೇನ್ ಖನ್ನಾ, ಪ್ರಶಾಂತ್ ರಂಕಾ, ವೈಭವ್ ಜೈನ್, ಆದಿತ್ಯ ಆಳ್ವ, ಲೋಮ್ ಪೆಪ್ಪರ್, ಪ್ರಶಾಂತ್ ರಾಜು, ಅಶ್ವಿನ್, ಅಭಿಸ್ವಾಮಿ, ರಾಹುಲ್ ತೋನ್ಸೆ ಹಾಗೂ ವಿನಯ್ ಎಂಬುವರನ್ನು ಆರೋಪಿಯನ್ನಾಗಿ ಮಾಡಲಾಗಿದೆ.

ಆದಾಯದಲ್ಲಿ ಸಮಪಾಲು: ಸಿಸಿಬಿ ಪೊಲೀಸರು ಬಂಧಿಸಿರುವ ರಾಗಿಣಿ ಹಾಗೂ ಇತರ ಆರೋಪಿಗಳಿಗೆ, ‘ಡ್ರಗ್’ ಮಾರಾಟದಿಂದ ಬರುತ್ತಿದ್ದ ಕೋಟ್ಯಂತರ ರೂಪಾಯಿ ಹಣದಲ್ಲಿ ಪಾಲು ದೊರೆಯುತ್ತಿದೆ ಎಂಬ ಸಂಗತಿ ಬಯಲಾಗಿದೆ. ಇದರ ಬೆನ್ನಲ್ಲೇ, ಪೆಡ್ಲರ್ ಆಫ್ರಿಕಾದ ಲೊಮ್ ಪೆಪ್ಪರ್ ಸಾಂಬಾ ಎಂಬಾತನನ್ನೂ ಶನಿವಾರ ಬಂಧಿಸಲಾಗಿದೆ. 

ಪೆಡ್ಲರ್ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಆರೋಪದಡಿ ಬಂಧಿಸಲಾಗಿದ್ದ ಸಾರಿಗೆ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಬಿ.ಕೆ. ರವಿಶಂಕರ್, ತನ್ನ ಸ್ನೇಹಿತೆ ರಾಗಿಣಿಗೂ ಆದಾಯದಲ್ಲಿ ಪಾಲಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಗೊತ್ತಾಗಿದೆ.

‘ನಟಿ ರಾಗಿಣಿ ಸೇರಿ 12 ಆರೋಪಿಗಳು, ಒಳ ಸಂಚು ಮಾಡಿ ಬೆಂಗಳೂರಿನ ಹಲವೆಡೆ ಪಾರ್ಟಿ ಆಯೋಜಿಸುತ್ತಿದ್ದರು. ಪಾರ್ಟಿಗೆ ಬರುವ ಉದ್ಯಮಿಗಳು, ಗಣ್ಯರು, ಕೆಲ ನಟ–ನಟಿಯರು, ಡಿಜೆಗಳು, ಸಾಫ್ಟ್‌ವೇರ್ ಉದ್ಯೋಗಿಗಳು ಹಾಗೂ ಇತರೆ ವ್ಯಕ್ತಿಗಳಿಗೆ ಪೆಡ್ಲರ್‌ಗಳಿಂದ
ಡ್ರಗ್ ಸರಬರಾಜು ಮಾಡಿಸುತ್ತಿದ್ದರು. ಡ್ರಗ್ ಮಾರಾಟ ಮೂಲಕ ಅಕ್ರಮವಾಗಿ ಹಣ ಗಳಿಸುತ್ತಿದ್ದ ಆರೋಪಿಗಳು, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ’ ಎಂದು ಎಸಿಪಿ ಗೌತಮ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಚಾರಣೆ ಮುಂದುವರಿಕೆ: ಬಂಧಿತ ನಟಿ ರಾಗಿಣಿ ಅವರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಶುಕ್ರವಾರ ರಾತ್ರಿ ಇರಿಸಲಾಗಿತ್ತು. ಶನಿವಾರ ಪುನಃ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು