ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Assembly Session | ಮಾಜಿ ಶಾಸಕರ ಬೆಂಬಲಿಗರಿಂದ ತೊಂದರೆ: ಶಾಸಕಿ ಕರೆಮ್ಮ

Published 13 ಜುಲೈ 2023, 15:30 IST
Last Updated 13 ಜುಲೈ 2023, 15:30 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ಕ್ಷೇತ್ರದ ಮಾಜಿ ಶಾಸಕರ ಬೆಂಬಲಿಗರು ತೊಂದರೆ ನೀಡುತ್ತಿದ್ದಾರೆ. ಆರೇ ತಿಂಗಳಲ್ಲಿ ಚುನಾವಣೆ ನಡೆಯುತ್ತದೆ ಎಂಬ ವದಂತಿ ಹಬ್ಬಿಸುತ್ತಿದ್ದಾರೆ. ನನಗೆ ಅಗತ್ಯ ಭದ್ರತೆ ಒದಗಿಸಿ’ ಎಂದು ದೇವದುರ್ಗ ಕ್ಷೇತ್ರದ ಶಾಸಕಿ, ಜೆಡಿಎಸ್‌ನ ಕರೆಮ್ಮ ಜಿ. ನಾಯಕ್‌ ಗುರುವಾರ ವಿಧಾನಸಭೆಯಲ್ಲಿ ಆಗ್ರಹಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ದೇವದುರ್ಗದ ಜನರು ಸಾವಿರಾರು ಕೋಟಿ ರೂಪಾಯಿ ಅನುದಾನ ತರುತ್ತೇನೆ ಎಂದು ನನ್ನನ್ನು ಗೆಲ್ಲಿಸಿಲ್ಲ. ಬಡವಿಯಾದ ನನ್ನನ್ನು ಅವರೇ ಹಣ ನೀಡಿ ಗೆಲ್ಲಿಸಿದ್ದಾರೆ. ಶಾಂತಿಯುತ ಕ್ಷೇತ್ರವಾಗಿ ದೇವದುರ್ಗವನ್ನು ನೋಡಬೇಕು ಎಂಬುದು ಜನರ ಆಸೆ’ ಎಂದರು.

‘ಮದ್ಯದ ಅಕ್ರಮ ಮಾರಾಟ, ಮಟ್ಕಾ, ಇಸ್ಪೀಟು, ಮರಳಿನ ಅಕ್ರಮ ಸಾಗಣೆ ದಂಧೆ ನಡೆಯುತ್ತಿದೆ. ಅದಕ್ಕೆ ಕಡಿವಾಣ ಹಾಕುತ್ತಿದ್ದೇನೆ ಎಂದು ನನಗೆ ಬೆದರಿಕೆ ಹಾಕಲಾಗುತ್ತಿದೆ. ನನ್ನ ತಮ್ಮನ ಮಗ, 21 ವರ್ಷದ ಯುವಕನನ್ನು ರಸ್ತೆಯಲ್ಲಿ ಹಾಕಿ ಹೊಡೆದಿದ್ದಾರೆ’ ಎಂದು ಹೇಳಿದರು.

‘ಮರಳಿನ ಅಕ್ರಮ ಸಾಗಣೆ ತಡೆಯಲು ನಾನೇ ಖುದ್ದಾಗಿ ಸ್ಥಳಕ್ಕೆ ಹೋಗಿದ್ದೇನೆ. ಲಾರಿ ಹತ್ತಿಸುವ ಬೆದರಿಕೆ ಬಂದಿದೆ. ಜನರಿಗಾಗಿ ಸಾಯುವುದಕ್ಕೂ ಸಿದ್ಧಳಾಗಿದ್ದೇನೆ’ ಎಂದರು.

‘ಪೊಲೀಸರು ಸಹಕಾರ ಕೊಡುತ್ತಿಲ್ಲ. ಮಟ್ಕಾ ದಂಧೆಯವರನ್ನು ಜನರೇ ಹಿಡಿದುಕೊಟ್ಟರೂ ₹300 ದಂಡ ಹಾಕಿ ಬಿಟ್ಟು ಕಳಿಸುತ್ತಾರೆ. ಯಾವ ಇಲಾಖೆಯ ಅಧಿಕಾರಿಗಳೂ ಮಾತು ಕೇಳುವುದಿಲ್ಲ. ಆರು ತಿಂಗಳಲ್ಲಿ ಚುನಾವಣೆ ಬರುತ್ತದೆ ಎಂದು ಮಾಜಿ ಶಾಸಕರು ಅಧಿಕಾರಿಗಳಿಗೆ ಹೇಳುತ್ತಿದ್ದಾರೆ‘ ಎಂದು ಕರೆಮ್ಮ ದೂರಿದರು.

‘ಸದನದಲ್ಲಿ ನನ್ನ ಆಸನದಲ್ಲೇ ಅನಾಮಿಕ ವ್ಯಕ್ತಿಯೊಬ್ಬರು ಬಂದು ಕುಳಿತಿದ್ದರು. ಇದೆಲ್ಲ ಯಾಕೆ ನಡೆಯುತ್ತಿದೆ ಎಂಬ ಅನುಮಾನ ನನ್ನನ್ನು ಮತ್ತು ನನ್ನ ಕ್ಷೇತ್ರದ ಜನರನ್ನು ಕಾಡುತ್ತಿದೆ’ ಎಂದರು.

ಭದ್ರತೆಯ ಭರವಸೆ

ಕರೆಮ್ಮ ಅವರ ಆತಂಕಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌ ಯು.ಟಿ. ಖಾದರ್‌, ‘ನಿಮಗೆ ಅಗತ್ಯ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಸೂಚಿಸುತ್ತೇನೆ. ಅನಾಮಿಕ ವ್ಯಕ್ತಿ ಬಂದಾಗ ನಿಮ್ಮ ಆಸನ ಖಾಲಿ ಇತ್ತು. ಹಾಗಾಗಿ ಅಲ್ಲಿಯೇ ಕುಳಿತ. ನೀವು ಸಮಯಕ್ಕೆ ಸರಿಯಾಗಿ ಬಂದು ಆಸನದಲ್ಲಿ ಕುಳಿತಿದ್ದರೆ ಆ ವ್ಯಕ್ತಿ ಅಲ್ಲಿ ಕೂರುತ್ತಿರಲಿಲ್ಲ’  ಎಂದು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT