ಭಾನುವಾರ, ಆಗಸ್ಟ್ 25, 2019
28 °C
ಹಲಸೂರು ಮೆಟ್ರೊ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಸೇವೆ

ಬಡವರ ಹಸಿವು ನೀಗಿಸುವ ಫ್ರಿಜ್‌!

Published:
Updated:
Prajavani

ಬೆಂಗಳೂರು: ನಿರ್ಗತಿಕರಿಗೆ ಹಾಗೂ ಹಸಿದವರಿಗೆ ಉಚಿತವಾಗಿ ಆಹಾರವನ್ನು ಒದಗಿಸಲು ಹಲಸೂರು ಮೆಟ್ರೊ ನಿಲ್ದಾಣದ ಪ್ರವೇಶ ದ್ವಾರದ ಆವರಣದಲ್ಲಿ ಆಹಾರದ ಫ್ರಿಜ್‌ ಅಳವಡಿಸಲಾಗಿದೆ. 

ವರ್ಕ್ ಬೆಂಚ್ ಪ್ರಾಜೆಕ್ಟ್ ಹಾಗೂ ಯುವ ಚಿಂತನಾ ಫೌಂಡೇಷನ್ ಜಂಟಿಯಾಗಿ 'ಊಟ, ಆಟ, ಪಾಠ, ಕೂಟ' ಎಂಬ ಹೆಸರಿನಡಿ ಆರಂಭಿಸಿರುವ ದಾಸ್ತಾನು ಕೇಂದ್ರಕ್ಕೆ ಮೇಯರ್ ಗಂಗಾಂಬಿಕೆ ಗುರುವಾರ ಚಾಲನೆ ನೀಡಿದರು. 

ಫ್ರಿಜ್‌ಗೆ ಆಹಾರವನ್ನು ಹೋಟೆಲ್‌ಗಳು ಪೂರೈಕೆ ಮಾಡಲಿವೆ. ಸಾರ್ವಜನಿಕರು ಕೂಡ ಆಹಾರವನ್ನು ತಂದಿಡಲು ಅವಕಾಶ ನೀಡಲಾಗಿದ್ದು, ಹಸಿದವರು ತಿಂಡಿ–ಊಟವನ್ನು ತಾವೇ ತೆಗೆದುಕೊಳ್ಳಬಹುದಾಗಿದೆ.

ದಾಸ್ತಾನು ಕೇಂದ್ರದಲ್ಲಿ ಮಕ್ಕಳ ಆಟಿಕೆ, ಉಡುಪು, ಪುಸ್ತಕವನ್ನು ತಂದಿಡುವ ಹಾಗೂ ಅಗತ್ಯವಿರುವವರು ಕೊಂಡೊಯ್ಯುವ ಅವಕಾಶ ನೀಡಲಾಗಿದೆ.

ಬೆಳಿಗ್ಗೆ 8ರಿಂದ ರಾತ್ರಿ 11ಗಂಟೆವರೆಗೆ ದಾಸ್ತಾನು ಕೇಂದ್ರವು ತೆರೆದಿರುತ್ತದೆ.  

‘ನಗರದ ಮುರುಗನ್ ಕೆಫೆ ಸೇರಿದಂತೆ ವಿವಿಧ ಹೋಟೆಲ್‌ಗಳ ಮಾಲೀಕರನ್ನು ಸಂಪರ್ಕಿಸಿ, ನಮ್ಮ ಯೋಜನೆಗೆ ಸಹಕರಿಸಲು ಕೋರಿದ್ದೇವೆ. ನಮ್ಮ ಫ್ರಿಜ್‌ನ ಸಾಮರ್ಥ್ಯ‌ಕ್ಕೆ ತಕ್ಕಂತೆ ಪ್ರತಿನಿತ್ಯ ಊಟ– ತಿಂಡಿಯನ್ನು ತಂದಿಡಲಿದ್ದಾರೆ. ಫ್ರಿಜ್‌ನಲ್ಲಿ ಪಲಾವು, ಉಪ್ಪಿಟ್ಟು-ಕೇಸರಿಬಾತ್‌, ಬೇಳೆ ಬಾತ್‌, ವಾಂಗಿಬಾತ್‌, ಪೂರಿ, ಚಪಾತಿ, ಪಲ್ಯ, ಚಟ್ನಿ, ಸಾಂಬಾರು ಸೇರಿದಂತೆ ವಿವಿಧ ಆಹಾರ ಇರುತ್ತವೆ. ಕೆಲವೊಮ್ಮೆ ಅನ್ನ-ಸಾಂಬಾರ್‌ ಕೂಡ ಇಡಲಾಗುತ್ತದೆ’ ಎಂದು ಯುವ ಚಿಂತನಾ ಫೌಂಡೇಷನ್ ಮುಖ್ಯಸ್ಥೆ ಅನುಪಮಾ ಮಾಹಿತಿ ನೀಡಿದರು.

‘ದಾಸ್ತಾನು ಕೇಂದ್ರ ಆರಂಭಕ್ಕೆ ಚಿಂತನೆ’
‘ಬಡವರು ಹಾಗೂ ಹಸಿದವರಿಗೆ ದಾಸ್ತಾನು ಕೇಂದ್ರ ಅನುಕೂಲಕರವಾಗಿದೆ. ಹಾಗಾಗಿ ನಗರದ ವಿವಿಧೆಡೆ ಬಿಬಿಎಂಪಿಯಿಂದ ದಾಸ್ತಾನು ಕೇಂದ್ರ ಆರಂಭಿಸುವ ವಿಚಾರವಾಗಿ ಚಿಂತನೆ ನಡೆಸಲಾಗುವುದು’ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು. 

‘ಊಟ–ತಿಂಡಿಯನ್ನು ದಾನ ಮಾಡುವ ಮೂಲಕ ಉಳ್ಳವರು ಇಲ್ಲದವರ ನೆರವಿಗೆ ಬರಬೇಕು. ಪ್ರತಿಯೊಬ್ಬರೂ ತಮ್ಮ ಬಳಿಯ ವಸ್ತುಗಳನ್ನು ದಾನ‌ ಮಾಡಿದರೆ ಬಡವರು ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ. ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರಗಳ ಜೊತೆ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.     

Post Comments (+)