ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫ್ರೀಡಂ’ ವಿರುದ್ಧ ಮತ್ತೆ 15 ಮಂದಿ ದೂರು

Last Updated 16 ಏಪ್ರಿಲ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂಡಿಯನ್ ಮನಿ ಡಾಟ್ ಕಾಮ್ ಕಂಪನಿ ಹಾಗೂ ಫ್ರೀಡಂ ಆ್ಯಪ್‌ನಿಂದ ವಂಚನೆಯಾಗಿದೆ’ ಎಂದು ಆರೋಪಿಸಿ ಮತ್ತೆ 15 ಮಂದಿ ಬನಶಂಕರಿ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದಾರೆ.

‘ಅರೆಕಾಲಿಕ ಕೆಲಸದ ಆಮಿಷವೊಡ್ಡಿ ಯುವಕ– ಯುವತಿಯರನ್ನು ವಂಚಿಸಿದ್ದ ಹಾಗೂ ಕೋರ್ಸ್ ಹೆಸರಿನಲ್ಲಿ ಹಣ ಸಂಗ್ರಹಿಸಿ ಮೋಸ ಮಾಡಿದ್ದ ಬಗ್ಗೆ ಕಂಪನಿ ಉದ್ಯೋಗಿಗಳು ಸೇರಿ 44 ಮಂದಿ ದೂರು ನೀಡಿದ್ದರು. ಅದರನ್ವಯ 6 ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಇದೀಗ 15 ಮಂದಿ ಪ್ರತ್ಯೇಕ ದೂರು ನೀಡಿದ್ದು, ಅವರನ್ನೂ ಹಳೇ ಪ್ರಕರಣದ ಫಿರ್ಯಾದುದಾರರಾಗಿ ಪರಿಗಣಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕಂಪನಿಯ ಸಿಇಒ ಸಿ.ಎಸ್.ಸುಧೀರ್ ಹಾಗೂ ಮಾನವ ಸಂಪನ್ಮೂಲ ವಿಭಾಗದ ರಘು ಅವರನ್ನು ಈಗಾಗಲೇ ಬಂಧಿಸಲಾಗಿದೆ. ಅವರಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಬೇಕಿದೆ. ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

‘ದೂರಿನ ಸಂಗತಿಗಳಿಗೆ ಸಂಬಂಧಪಟ್ಟಂತೆ ಉದ್ಯೋಗಿಗಳು ಹಾಗೂ ಕಂಪನಿಯ ಆಡಳಿತ ಮಂಡಳಿ ಸದಸ್ಯರ ವಿಚಾರಣೆ ನಡೆಸಿ ಮಾಹಿತಿ ಪಡೆಯುತ್ತಿದ್ದೇವೆ. ವಂಚನೆ ಪ್ರಕರಣಗಳು ಒಂದೊಂದಾಗಿ ಬಯಲಾಗುತ್ತಿದ್ದು, ದೂರು ನೀಡುವವರ ಸಂಖ್ಯೆ ಹೆಚ್ಚಾಗಬಹುದು. ವಂಚನೆಗೀಡಾದವರು ಠಾಣೆಗೆ ಬಂದು ದೂರು ನೀಡಬಹುದು’ ಎಂದು ಅಧಿಕಾರಿ ಹೇಳಿದರು.

ವಿಮೆ ಹಣ ವಂಚನೆ: ‘ತೀರ್ಥಹಳ್ಳಿ ತಾಲ್ಲೂಕಿನ ಚಿಕ್ಕಳ್ಳಿಯ ಸುಧೀರ್, ಆರಂಭದಲ್ಲಿ ‘ಇಂಡಿಯನ್ ಮನಿ ಡಾಟ್ ಕಾಮ್’ ಕಂಪನಿ ಸ್ಥಾಪಿಸಿದ್ದ. ಕಮಿಷನ್ ಆಸೆಗಾಗಿ ಕೆಲ ವಿಮೆ ಕಂಪನಿಗಳ ಪಾಲಿಸಿಗಳನ್ನು ಹೆಚ್ಚು ಪ್ರಚಾರ ಮಾಡುತ್ತಿದ್ದ. ಕೆಲವರಿಗೆ ಆಮಿಷವೊಡ್ಡಿ ವಿಮೆ ಮಾಡಿಸಿದ್ದ. ಕಂತು ಕಟ್ಟಿದ್ದ ಇಬ್ಬರಿಗೆ ಯಾವುದೇ ಹಣ ವಾಪಸು ಬಂದಿಲ್ಲ. ವಂಚನೆ ಬಗ್ಗೆ ಅವರಿಬ್ಬರು ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಇಂಡಿಯನ್ ಮನಿ ಡಾಟ್ ಕಾಮ್ ಕಂಪನಿ ಜೊತೆಯಲ್ಲೇ ಸುಧೀರ್, ಫೈನಾನ್ಸಿಯಲ್ ಫ್ರೀಡಂ ಸಂಸ್ಥೆ ಕಟ್ಟಿದ್ದ. ಅದರಡಿ ‘ಫ್ರೀಡಂ’ ಆ್ಯಪ್ ಅಭಿವೃದ್ಧಿಪಡಿಸಿದ್ದ. ಅರೆಕಾಲಿಕ ಕೆಲಸದ ಆಮಿಷವೊಡ್ಡಿ ಯುವಕ–ಯುವತಿಯರಿಂದ ಆ್ಯಪ್‌ ಚಂದಾದಾರಿಕೆ ಮಾಡಿಸಿ ವಂಚಿಸಿದ್ದ. ಜೊತೆಗೆ, ರೈತರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಹೆಸರಿನಲ್ಲಿ ಕೋರ್ಸ್ ಆರಂಭಿಸಿ ಜನರಿಂದ ಹಣ ಪಡೆದು ಮೋಸ ಮಾಡಿರುವುದು ತನಿಖೆಯಿಂದ ಗೊತ್ತಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT