ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಬೀಸಿ ಕರೆಯುತ್ತಿದೆ ‘ಫ್ರೀಡಂ ವಾಲ್‌’: ಐ.ಟಿ ಉದ್ಯೋಗಿಗಳ ತಂಡ ರೂಪಿಸಿದ ಯೋಜನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಐ.ಟಿ ಉದ್ಯೋಗಿಗಳ ತಂಡ ರೂಪಿಸಿದ ಯೋಜನೆ
Last Updated 28 ಜೂನ್ 2022, 21:47 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರರು, ಮರೆತುಹೋದ ವೀರರು, ಸಮಕಾಲೀನ ಚಿಂತಕರ ಕಿರು ಪರಿಚಯ ಮತ್ತು ಭಾವಚಿತ್ರಗಳನ್ನು ಇಂದಿರಾನಗರದ ಗೋಡೆಗಳ ಮೇಲೆ ಚಿತ್ತಾಕರ್ಷಕವಾಗಿ ಬಿಡಿಸಲಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸಿ.ವಿ.ರಾಮನ್ ಆಸ್ಪತ್ರೆಯ ಗೋಡೆ ಹಾಗೂ 5ನೇ ಅಡ್ಡ ರಸ್ತೆಯ ಗೋಡೆಗಳ ಮೇಲೆ ‘ನಮ್ಮ ಗೋಡೆಗಳು’ಎಂಬ ಪರಿಕಲ್ಪನೆಯ ಅಡಿ ಮಹನೀಯರ ಚಿತ್ರಗಳು ರಾರಾಜಿಸುತ್ತಿವೆ. ದುಶ್ಯಂತ್ ದುಬೆ, ಸತ್ಯಜಿತ್ ಇಂದ್ರ ಮೋಹನ್ ಮತ್ತು ಸಮೀರ್‌ ಕುಲಕರ್ಣಿ ಎಂಬ ಮೂವರು ಐ.ಟಿ ಉದ್ಯೋಗಿಗಳ ತಂಡವು ಗೋಡೆ ಗಳಿಗೆ ಜೀವಕಳೆ ತಂದಿದೆ. ಇದಕ್ಕೆ ‘ಸ್ವಾತಂತ್ರ್ಯ ಗೋಡೆ’ ಎಂದು ಹೆಸರಿಡಲಾಗಿದೆ.

ಬೆಂಗಳೂರಿನಲ್ಲಿ ಜೀವನ ನಡೆಸುತ್ತಿರುವ ದೇಶದ ಬೇರೆ ಬೇರೆ ಭಾಗದ ಜನರಿಗೆ, ಮಕ್ಕಳಿಗೆ ನಾಡಿನ ಇತಿಹಾಸ, ಪ್ರಸಿದ್ಧ ವ್ಯಕ್ತಿಗಳ ಪರಿಚಯಿಸುವುದರ ಜೊತೆಗೆ ಕ್ಯೂಆರ್‌ ಕೋಡ್‌ ಮೂಲಕ ತಮ್ಮ ಮೊಬೈಲ್‌ನಲ್ಲಿ ಅವರಿಗೆ ಸಂಬಂಧಿಸಿದ ಮಾಹಿತಿ ಗಳನ್ನು ತೆರೆದುಕೊಳ್ಳುವಂತಹ ತಂತ್ರಜ್ಞಾನ ವ್ಯವಸ್ಥೆ ಅಳವಡಿಸಲಾಗಿದೆ ಎಂದು ತಂಡದ ಸದಸ್ಯ ಸತ್ಯಜಿತ್‌ ಇಂದ್ರಮೋಹನ್ ತಿಳಿಸಿದರು.

ಗೋಡೆ ಮೇಲೆ ಇರುವವರು ಯಾರ್‍ಯಾರು?: ನಾಡಪ್ರಭು ಕೆಂಪೇಗೌಡ, ಸರ್.ಎಂ.ವಿಶ್ವೇಶ್ವರಯ್ಯ, ಸಿ.ವಿ.ರಾಮನ್, ಕುವೆಂಪು, ಕೃಷ್ಣದೇವರಾಯ, ಡಾ.ರಾಜಕುಮಾರ್, ಪುನೀತ್‌ ರಾಜ ಕುಮಾರ್, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ, ಸಾಲುಮರದ ತಿಮ್ಮಕ್ಕ, ಕೆಳದಿ ಚೆನ್ನಮ್ಮ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜಾರ್ಜ್‌ ಫರ್ನಾಂಡಿಸ್,
ಎಸ್.ಎಲ್.ಭೈರಪ್ಪ, ರಾಮಪ್ರಸಾದ್ ಬಿಸ್ಮಿಲ್, ಸುಶ್ರುತ, ಲಲಿತಾದಿತ್ಯ ಮುಕ್ತಾಪೀಡ, ಮಹಾರಾಜ್ ರಂಜೀತ್‌ ಸಿಂಗ್, ಡಾ.ಬಾಬಾಸಾಹೇಬ್ ಅಂಬೇಡ್ಕರ್, ವಿಕ್ರಂ ಸಾರಾಬಾಯಿ, ಚಂದ್ರಶೇಖರ್ ಆಜಾದ್‌ ಸೇರಿ ವಿವಿಧ ಮಹ ನೀಯರ ಭಾವಚಿತ್ರ ಬಿಡಿಸಲಾಗಿದೆ. ಸದ್ಯ 40 ಚಿತ್ರಗಳನ್ನು ಸಂಪೂರ್ಣವಾಗಿ ಬಿಡಿಸಲಾಗಿದೆ. ಇನ್ನೂ 18 ಚಿತ್ರಗಳನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಗೋಡೆಗಳ ಮೇಲೆ ಚಿತ್ರಿಸಲು ಅಧಿಕಾರಿಗಳ ಅನುಮತಿಗಾಗಿ ಕಾಯುತ್ತಿದ್ದೇವೆ. ಸಿ.ವಿ. ರಾಮನ್‌ನಗರದ ಕ್ಷೇತ್ರದ ಶಾಸಕಎಸ್‌.ರಘು ಯೋಜನೆಗೆ ಆರ್ಥಿಕ ಸಹಾಯ ಮಾಡಿದ್ದಾರೆ ಎಂದು ಸಮೀರ್‌ ಕುಲಕರ್ಣಿ ತಿಳಿಸಿದರು.

ವಿಶಿಷ್ಟ ವಿನ್ಯಾಸದಲ್ಲಿ 40 ಚಿತ್ರ ರಚನೆ

ಮಹನೀಯರನ್ನು ಸ್ಮರಿಸಲು ಕೇಂದ್ರ ಸರ್ಕಾರದ ’ಆಜಾದಿ ಕಾ ಅಮೃತ್‌ ಮಹೋತ್ಸವ‘ದ ಕಾರ್ಯಕ್ರಮವೇ ಸ್ಫೂರ್ತಿ. ಇತಿಹಾಸದಲ್ಲಿ ಪ್ರತಿಯೊಬ್ಬರ ಬಗ್ಗೆ ತಿಳಿಸಲು ಅಸಾಧ್ಯ. ಆದ್ದರಿಂದ, ಅಂತಹ ವ್ಯಕ್ತಿಗಳ ಚಿತ್ರ ಮತ್ತು ಸಾಧನೆಯನ್ನು ನಮ್ಮ ಮಕ್ಕಳಿಗೆ ತಿಳಿಸಲು ಈ ಯೋಜನೆ ಸಹಾಯಕವಾಗಲಿದೆ ಎಂದು ದುಶ್ಯಂತ್‌ ದುಬೆ ಹೇಳಿದರು.

ವಿಶ್ವದ ಹೆಸರಾಂತ ಕಲಾವಿದರಿಂದ ವಿಶಿಷ್ಟ ವಿನ್ಯಾಸದ ಮೂಲಕ 40 ಚಿತ್ರಗಳನ್ನು ರಚಿಸಲಾಗಿದೆ. ಭಾರತದ ಇಂತಹ ಮಹನೀಯರ ಜೀವನ ಮತ್ತು ಸಾಧನೆ ಬಗ್ಗೆ ಕಿರುನೋಟ ನೀಡುವುದಕ್ಕೆ ಪ್ರತಿಯೊಂದು ಚಿತ್ರಕ್ಕೂ ಒಂದೊಂದು ಕ್ಯೂಆರ್‌ ಕೋಡ್‌ ಇದ್ದು, ಇಲ್ಲಿಗೆ ಭೇಟಿ ನೀಡುವವರು ತಮ್ಮ ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT